ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಎರಡು ವರ್ಷಗಳ ನಂತರ ಘೋಷಣೆಯಾಗಿರುವ ನಗರಸಭೆ ಚುನಾವಣೆಯಲ್ಲಿ ಸ್ನೇಹಜೀವಿ ಬಳಗದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ.
ಈ ಕುರಿತಂತೆ ಮಾತನಾಡಿದ ಸ್ನೇಹ ಜೀವಿ ಬಳಗದ ಪ್ರಮುಖ ಸತೀಶ್, ಈಗ ಘೋಷಣೆಯಾಗಿರುವ ನಗರಸಭೆ ಚುನಾವಣೆಯಲ್ಲಿ ನಮ್ಮ ಬಳಗದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದು, ಎಷ್ಟು ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಲಾಗುತ್ತದೆ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದರು.
ಭದ್ರಾವತಿ ಮಾದರಿ ನಗರವಾಗಬೇಕು, ಜನಪರ ಆಡಳಿತ ನೀಡಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ಎನ್ನುವುದು ತಲುಪಬೇಕು, ಸರ್ಕಾರದ ಪ್ರತಿ ಯೋಜನೆಯೂ ಅರ್ಹರಿಗೆ ದೊರೆಯುವಂತಾಗಬೇಕು ಎನ್ನುವುದು ನಮ್ಮ ಆಶಯ. ಈ ಉದ್ದೇಶದಿಂದ ಸ್ನೇಹ ಜೀವಿ ಬಳಗದಿಂದ ಉತ್ಸಾಹಿ ಸೇವಕರನ್ನು ಕಣಕ್ಕೆ ಇಳಿಸಲಿದ್ದು, ಈ ಮೂಲಕ ನಗರದಲ್ಲಿ ಹೊಸ ಪರ್ವ ಆರಂಭಿಸುವುದು ನಮ್ಮ ಉದ್ದೇಶ ಎಂದರು.
ಕಳೆದ 7-8 ವರ್ಷಗಳಿಂದ ಸ್ನೇಹ ಜೀವಿ ಬಳಗದ ಮೂಲಕ ಬಹಳಷ್ಟು ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇದನ್ನು ಮೆಚ್ಚಿಕೊಂಡ ಸಾರ್ವಜನಿಕರ ಒತ್ತಾಸೆಯಿಂದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ನೇಹ ಜೀವಿ ಬಳಗದಿಂದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೆವು. ಮೊದಲ ಪ್ರಯತ್ನದಲ್ಲೇ 5 ಅಭ್ಯರ್ಥಿಗಳು ಜಯಗಳಿಸುವಲ್ಲಿ ಯಶಸ್ವಿಯಾಗಿದ್ದು, ಇದು ನಮ್ಮ ಉತ್ಸಾಹವನ್ನು ವೃದ್ಧಿಸಿದೆ. ಭದ್ರಾವತಿಯ ನಾಗರಿಕರು ಸ್ನೇಹ ಜೀವಿ ಬಳಗದ ಸೇವಾ ಕಾರ್ಯವನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಬಯಸುತ್ತಿದ್ದಾರೆ. ಇದಕ್ಕಾಗಿ ನಗರಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ನಗರದ ಸಮಸ್ತ ಜನರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post