ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಆರೋಗ್ಯ ಇಲಾಖೆಯಿಂದ 45 ವರ್ಷ ಮೇಲ್ಪಟ್ಟು ಆರೋಗ್ಯ ಸಮಸ್ಯೆ ಇರುವವರಿಗೆ ಹಾಗೂ 60 ವರ್ಷ ಮೀರಿದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ರೋಟರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ವ್ಯಾಪಕ ಪ್ರಚಾರ ನಡೆಸಿ, ಲಸಿಕೆ ವಿಚಾರವಾಗಿ ಜನರಲ್ಲಿ ಭಯ, ಅನುಮಾನ, ದೂರ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್, ತಾಲೂಕು ಆಡಳಿತ ಆರೋಗ್ಯ ಇಲಾಖೆ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆ, ನಗರ ಸಭೆ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕೋವಿಡ್-೧೯ ಲಸಿಕಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವರ್ಷದಿಂದ ಕೊರೋನಾ ದೇಶವನ್ನೇ ತಲ್ಲಣಗೊಳಿಸಿದೆ. ಜನಸಾಮಾನ್ಯರ ಬದುಕನ್ನು ಹಾಳು ಮಾಡಿ ಜೀವನ ಸಾಗಿಸುವುದು ಕಷ್ಟವಾಗಿದೆ. ಮತ್ತೆ ಎರಡನೆಯ ಅಲೆ ಆರಂಭವಾಗಿದ್ದು, ಎಲ್ಲ್ಲರಿಗೂ ತೊಂದರೆ ಆಗುವ ಮೊದಲೇ ಜನತೆ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಈಗಾಗಲೇ ಸರ್ಕಾರವು ಕೋವಿಡ್ ಲಸಿಕೆ ನೀಡುತ್ತಿದ್ದು, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂದು ಹೇಳಿದರು.
ಈಗಾಗಲೇ ಅರೋಗ್ಯ ಇಲಾಖೆ ಎಲ್ಲಾ ತಯಾರಿ ನಡೆಸಿದ್ದು, ಕೋರೋನಾ ಲಸಿಕೆ ವಿಚಾರವಾಗಿ ಜಾಗೃತಿ ಮೂಡಿಸುತ್ತಿದೆ. ಜೊತೆಗೆ ರೋಟರಿಕ್ಲಬ್, ತಾಲ್ಲೂಕು ಆಡಳಿತ ಹಾಗೂ ಹಲವು ಸಂಘ ಸಂಸ್ಥೆಗಳು ಲಸಿಕೆ ಅಭಿಯಾನದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿವೆ ಇದರ ಸದುಪಯೋಗವಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ ಮಾತನಾಡಿ, ದೇಶದಲ್ಲಿ ಕೊರೋನಾ ಎರಡನೆಯ ಅಲೆ ಪ್ರಾರಂಭವಾಗಿದ್ದು, ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಜೈತುನ್ಬಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ, ರೋಟರಿ ಸಂಸ್ಥೆ ಪದಾಧಿಕಾರಿಗಳು, ವೈದ್ಯ ಜೈಕುಮಾರ್, ಆರೋಗ್ಯಾಧಿಕಾರಿಗಳು, ಪೋಲೀಸ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ, ಪೌರಯುಕ್ತ ಪಾಲಯ್ಯ, ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ, ತಾಲ್ಲೂಕು ಆರೋಗ್ಯಾಧಿಕಾರಿ ಕುದಾಪುರ ತಿಪ್ಪೇಸ್ವಾಮಿ, ಅರೋಗ್ಯ ಸಹಾಯಕಿಯರು ಆಶಾಕಾರ್ಯಕರ್ತರು ಜಾಥಾದಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post