ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಬಿಸಿಲ ಧಗೆ ಹೆಚ್ಚುತ್ತಿದೆ. ಗ್ರಾಮಿಣ ಪ್ರದೇಶದಿಂದ ನಗರಕ್ಕೆ ಬರುವ ಸಾರ್ವಜನಿಕರು ನೀರಿಗಾಗಿ ಪರದಾಡಬಾರದು ಎಂಬ ಉದ್ದೇಶದಿಂದ ಸ್ಥಳೀಯ ಯುವಕರ ತಂಡ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಜನಮೆಚ್ಚುಗೆಯ ಕೆಲಸ ಮಾಡಿದ್ದಾರೆ.
ನಗರದ ಕಿಚ್ಚ ಚಾರಿಟಬಲ್ ಟ್ರಸ್ಟ್ ಯುವಕರು ಸಾರ್ವನಿಕರಿಗೆ ತಂಪು ನೀರು ವಿತರಿಸಲೆಂದು ಚಿತ್ರದುರ್ಗ ಮುಖ್ಯ ರಸ್ತೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ತಾತ್ಕಾಲಿಕ ಶೆಡ್ ನಿರ್ಮಿಸಿ, ಮಡಿಕೆಗಳಲ್ಲಿ ನೀರನ್ನು ತುಂಬಿಸಿ ತಂಪಾದ ಕುಡಿಯುವ ನೀರು ವಿತರಿಸುವ ಕಾರ್ಯಕ್ಕೆ ಶಾಸಕ ರಘುಮೂರ್ತಿ ಚಾಲನೆ ನೀಡಿದ್ದಾರೆ.
ಟ್ರಸ್ಟ್‌ನ ಸಂಸ್ಥಾಪಕ ಡಿ.ಟಿ. ಹರೀಶ್ ಮಾತನಾಡಿ, ತಾಲ್ಲೂಕು ಕಚೇರಿಗೆ, ಶಾಲಾಕಾಲೇಜಿಗೆ ಬರುವವರು ಹಾಗೂ ವ್ಯಾಪಾರಿಗಳು ಎಲ್ಲರಿಗೂ ಉಪಯೋಗವಾಗುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಕೊರೋನಾ ಜಾಗೃತಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಠಿಯಿಂದ, ಎರಡು ಬಿದುರಿನ ಕೊಳವೆಗಳನ್ನು ನಿರ್ಮಿಸಿ ಸಾರ್ವಜನಿಕರು ಹೊರಗಿನಿಂದಲೇ ನೀರನ್ನು ಹಿಡಿದುಕೊಂಡು ಕುಡಿಯುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮದಕರಿ ಪಾಪಣ್ಣ ಮಾತನಾಡಿ, ಯುವಕರು ಈ ಸಾಮಾಜಿಕ ಕಾರ್ಯ ಪ್ರಶಂಶಸನೀಯವಾಗಿದ್ದು, ಬಿಸಿಲಿನ ಬೇಗೆ ತಣಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ನೀರು ಕೊಡಲು ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ನ ಜೊತೆಗೆ ಸಾಮಾಜಿಕ ಕಳಕಳಿ ಇರುವಂತಹ ಉತ್ಸಾಹಿ ಯುವಕರು ಇದಕ್ಕೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದಿದ್ದಾರೆ.
ಒಟ್ಟಾರೆ ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಸುರೇಶ ಬೆಳಗೆರೆ, ಚಳ್ಳಕೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post