ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ. ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧಾತ್ಮಿಕವಾಗಿಯೂ ಅತ್ಯಂತ ಸಮೃದ್ಧವಾದ ದೇಶ ಭಾರತ. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು. ಅಂತಹ ಸಾಧುಗಳಲ್ಲೊಬ್ಬರು ದೇವರ ದಾಸಿಮಯ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಸರಳವಾಗಿ ನಡೆದ ದೇವರ ದಾಸಿಮಯ್ಯ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮಮ ಸಲ್ಲಿಸಿ ಅವರು ಮಾತನಾಡಿದರು.
ದಾಸಿಮಯ್ಯ ಅವರು ನೇಯ್ಗೆಯ ಕಾಯಕವನ್ನು ಮಾಡಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ಅಲ್ಲದೆ, ಸಾಕ್ಷತ್ ಪರಶಿವನಿಂದ ತವನಿಧಿಯನ್ನು ಪಡೆದ ಶರಣ. ಈ ಶರಣನು ಜ್ಞಾನಿಯೂ ಬೋಧೆಯಲ್ಲಿ ಬಲ್ಲಿದನೂ ಆದಂತೆ. ವಚನ ಸಾಹಿತ್ಯ ರಚನೆಯಲ್ಲಿಯೂ ಪ್ರಬಲನಾಗಿದ್ದನು. ಅಲಂಕಾರಿಕವಾದ ಸ್ವಲ್ಪ ಶಬ್ಧಗಳ ನುಡಿಯಲ್ಲಿ ದಿವ್ಯವಾದ, ವಿಶಾಲವಾದ ಅರ್ಥ, ಯಾರೂ ತೆಗೆದು ಹಾಕದಂತಹ ಅಭಿಪ್ರಾಯ ಇಂತಹ ಅಮೃತ ಬಿಂದು ಮನೋಜ್ಞವಾಣಿ ಆತನ ವಚನಗಳಾಗಿವೆ. ಈ ಪುಣ್ಯ ಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ, 10-11ನೆಯ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರರೂ ಹಾಗಿದ್ದರು ಎಂದರು.
ದೇವರ ದಾಸಿಮಯ್ಯ ಸಂಘದ ಅಧ್ಯಕ್ಷ ಕೊಲಮಹಳ್ಳಿ ಪೀತಾಂಬರ್ ಮಾತನಾಡಿ, ಕನ್ನಡ ನಾಡಿನ ಶಿವ ಶರಣರಲ್ಲಿ ದೇವರ ದಾಸಿಮಯ್ಯನವರು 11ನೆಯ ಶತಮಾನದಲ್ಲಿ ಇದ್ದರು.. ಮಹಾಶಿವಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯದಲ್ಲಿ ಮೊದಲಿಗರು. ಹಾಗೂ ವಚನಕಾರ ಪಿತಾಮಹ, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನಗಳು ಬಲವಾದ ಪ್ರಮಾಣಗಳಾಗಿವೆ. ಅವನ ನಂತರ ಸ್ವಲ್ಪ ಕಾಲದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ, ತಹಶಿಲ್ದಾರ ಎಂ ಮಲ್ಲಿಕಾರ್ಜನ್ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಜೈತುನ್ಬಿ, ನಗರಸಭೆ ಸದಸ್ಯರಾದ ಕವಿತಬೋರಣ್ಣ, ಸುಮ, ವೀರಭದ್ರಯ್ಯ, ಎಂ.ಜೆ. ರಾಘವೇಂದ್ರ, ತೋಟಗಾರಿಕೆ ಸಹಾಯಕ ಆರ್. ವಿರುಪಾಕ್ಷಪ್ಪ, ಸಿಡಿಪಿಓ ಮೊಹನ್ ಕುಮಾರಿ ಹಾಗೂ ನೇಕಾರ ಸಮುದಾಯದ ಮುಖಂಡರು, ತಾಲೂಕು ಸಿಬ್ಬಂದಿಗಳಾದ ಶೀನಿವಾಸ್, ಜಯಣ್ಣ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post