ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಸಾಲುಮರದ ತಿಮ್ಮಕ್ಕ – ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಪರಿಸರ ಪ್ರೇಮ. ಇವರು ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾರೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ನಗರದ ನಾಯಕನಹಟ್ಟಿ ರಸ್ತೆಯ ವೆಂಕಟೇಶ ನಗರದಲ್ಲರುವ ಬೆಳಕು ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಇವರ 111 ಜನ್ಮದಿನದ ಪ್ರಯುಕ್ತ ಶಾಲೆ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿ ಅವರು ಮಾತನಾಡಿದರು.
ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಸಿಗದೆ ಶಿಕ್ಷಣದಿಂದ ವಂಚಿತರಾಗಿ, ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ಅನಕ್ಷರಸ್ಥ ದನಕಾಯುವವರನ್ನು ಮದುವೆಯಾಗಿದ್ದು, ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ಹಾಕಿ ಪೋಷಣೆ ಮಾಡಲಾರಂಭಿಸಿದರು.
Also read: ಸೊರಬ: ಕನ್ಹಯ್ಯಲಾಲ್ ಹಂತಕರ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಬೆಳೆಸಿದ ಆಲದ ಮರಗಳು. ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20ಸಸಿಗಳನ್ನು ನೆಡಲಾಯಿತು.
ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ದಂಪತಿಗಳಿಬ್ಬರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿಮೀ ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿ ಸಂರಕ್ಷಿಸಿದರು.
ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ ಅವುಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ಗಿಡಗಳನ್ನು ಹಾಕುತ್ತಿದ್ದರು. ಇವರ ಉದ್ದೇಶ ಗಿಡ ಮರಗಳು ಬೆಳೆದರೆ, ಪರಿಸರ ಉಳಿಯುವುದರ ಜೊತೆಗೆ ಪಕ್ಷಿಗಳಿಗೆ ಆಸರೆ ಹಾಗೂ ಗಿಡಮರಗಳಿಂದ ಉತ್ತಮವಾದ ಗಾಳಿ, ಮನುಷ್ಯನಿಗೆ ಮುಖ್ಯವಾಗಿ ಅವಶ್ಯಕವಾಗಿರುವ ಆಮ್ಲಜನಕ ಉತ್ಪತ್ತಿ ಮಾಡುವಂತಹ ಮರಗಿಡಗಳು ಜಾಗತಿಕ ತಾಪಮಾನದ ವೈಪರಿತ್ಯ ಕಾಪಾಡುವಂತಹ ಶಕ್ತಿ ಮರ ಗಿಡಗಳಿಗೆ ಇರುವ ಉದ್ದೇಶದಿಂದ ತಮ್ಮ ಆಯ್ಕೆಯನ್ನು ಮರ-ಗಿಡ ಬೆಳೆಸಲು ಮುಂದಾದರು. ಇಂದು ಪ್ರತಿಯೊಬ್ಬರು ಮರ ಗಿಡ ಬೆಳೆಸುವ ಮೂಲಕ ಪರಿಸರ ಅಸಮತೋಲವನ್ನು ಕಾಪಾಡಬೇಕು. ನಾವು ಸಹ ತಾಲೂಕಿನಲ್ಲಿ 10, 000 ಮರ ಗಿಡಗಳನ್ನು ಬೆಳೆಸುವುದರ ಮೂಲಕ ಸಾಲುಮರದ ತಿಮ್ಮಕ್ಕ ಇವರನ್ನು ಈ ತಾಲೂಕಿಗೆ ಬರಮಾಡಿಕೊಳ್ಳುತ್ತೇವೆ. ಹಾಗೂ ಈ ಶಾಲೆಯಲ್ಲಿನ ವಾತಾವರಣವು ಉತ್ತಮವಾಗಿದ್ದು ಸರ್ಕಾರದಿಂದ ಅಗತ್ಯ ನೆರವು ನೀಡುತ್ತೇನೆ ಎಂದರು.
ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ಹಾಗೂ ಪುನೀತ್ ರಾಜ್ ಅಭಿಮಾನಿ ಬಳಗದ ನೇತಾಜಿ ಆರ್. ಪ್ರಸನ್ನ ಮಾತನಾಡಿ, ತಾಲೂಕಿನಲ್ಲಿ ಈ ಶಾಲೆ ವಿಶೇಷವಾಗಿದ್ದು, ಇಲ್ಲಿ ವಿಕಲತೆ ಹೊಂದಿರುವ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಇಲ್ಲಿ ಮೂಲಸೌಕರ್ಯ ಕೊರತೆ ಇದ್ದು, ದಾನಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ. ಇಂದು ಸಾಲು ಮರದ ತಿಮ್ಮಕ್ಕ ಇವರ ಜನ್ಮದಿನಾಚರಣೆ ಆಚರಿಸಿರುವುದು ಉತ್ತಮವಾದ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ರುದ್ರಮುನಿ, ಶಾಲೆ ಮುಖ್ಯೋಪಾಧ್ಯಾಯ ಮೋಹನ್, ಮುಖಂಡರಾದ ಶಿವಣ್ಣ, ಮಂಜುನಾಥ, ಗಾಯಕ ಮುತ್ತುರಾಜ್ ಸೇರಿದಂತೆ ಶಾಲಾ ಶಿಕ್ಷಕರು ಶಾಲಾ ಮಕ್ಕಳು ಹಾಗೂ ನಾಗರಿಕರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post