ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ರಾಮಾಯಣ, ಮಹಾಭಾರತದ ಸಂದೇಶಗಳನ್ನು ತಿಳಿದುಕೊಳ್ಳುವ ಮೂಲಕ ಪ್ರಸ್ತುತ ಸಮಾಜದ ಸುಧಾರಣೆಗೆ ದಾರಿ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ರೈತಪರ ಹೋರಾಟಗಾರ ಸೋಮಗುದ್ದು ರಂಗಸ್ವಾಮಿ ಅವರ ಕುರು ಸಾರ್ವಭೌಮನ ಪ್ರಲಾಪ ಪೌರಾಣಿಕ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಮಹಾ ಕಾವ್ಯಗಳನ್ನು ಓದಿಕೊಳ್ಳುವ ಮನಸ್ಥಿತಿ ಕಾಣುತ್ತಿಲ್ಲ. ಹಿರಿಯರ ಲೋಕಾನುಭವದ ಆದರ್ಶವನ್ನು ಪಾಲನೆ ಮಾಡಬೇಕಿದೆ. ಸಾಮಾಜಿಕ ಮತ್ತು ರೈತಪರ ಹೋರಾಟದಲ್ಲಿ ಸುದೀರ್ಘ 3 ದಶಕಗಳಿಂದ ಅನುಭವ ಕಂಡಿರುವ ಸೋಮಗುದ್ದು ರಂಗಸ್ವಾಮಿ, ಮಹಾಭಾರತ ಕಥಾ ಆಧಾರಿತವಾಗಿರುವ ವಸ್ತು ವಿಷಯವನ್ನು ನಾಟಕ ರೂಪದಲ್ಲಿ ಸಾಹಿತ್ಯ ರಚನೆ ಮಾಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಜನಸೇವೆಯಲ್ಲಿ ಇಚ್ಚಾಸಕ್ತಿ ಮತ್ತು ಇತರರಿಗೆ ಸಹಕಾರದ ಮನೋಭಾವನೆ ಇರಬೇಕು.ಆದರೆ, ಪ್ರಸ್ತುತ ರಾಜಕಾರಣದಲ್ಲಿ ನಾಟಕದ ಪಾತ್ರಗಳಂತೆ ಜನಪ್ರತಿನಿಧಿಗಳ ವರ್ತನೆ ಕಾಣುತ್ತಿದ್ದೇವೆ. ಕೇವಲ ಸಾಂಕೇತಿಕವಾಗಿ ಮಾಡುವ ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ವೈಭವೀಕರಿಸಿಕೊಳ್ಳುವ ಕೆಲಸವಾಗುತ್ತಿದೆ. ಇದು ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿದರು.
ಹಿರಿಯ ಕತೆಗಾರ ತಿಪ್ಪಣ್ಣಮರಿಕುಂಟೆ ಮಾತನಾಡಿ, ತಾಲೂಕಿನ ಸಾಹಿತ್ಯ ಶ್ರೀಮಂತಿಕೆಗೆ ಬೆಳಗೆರೆ ಕೃಷ್ಣಶಾಸ್ತ್ರಿ ಆದಿಯಾಗಿ ಸೀತರಾಮಶಾಸ್ತ್ರಿ ಮತ್ತು ತಳುಕಿನ ಮನೆತನದ ಅಪಾರ ಕೊಡುಗೆ ಇದೆ. ಅವರ ವಾರಸುದಾರರಾಗಿ ಈ ನೆಲಮೂಲದ ಸಂಸ್ಕೃತಿಯನ್ನು ಸಾಹಿತ್ಯ ನೆಲೆಗಟ್ಟಿನಲ್ಲಿ ಉಳಿಸಿಕೊಳ್ಳಬೇಕಿದೆ. ಸೋಮಗುದ್ದು ರಂಗಸ್ವಾಮಿ ಅವರ ಹಿರಿತನದ ಚಿಂತನೆಯಲ್ಲಿ ಮಹಭಾರತದ ಒಂದು ಭಾಗವಾಗಿ ಕುರು ಸಾರ್ವಭೌಮನ ಪ್ರಲಾಪ ಪ್ರಕಟವಾಗಿದೆ. ಮಹಾಭಾರತವನ್ನು ಸರಳವಾಗಿ ಅರ್ಥೈಸಿಕೊಳ್ಳಲು ಕಂದ ರೂಪದಲ್ಲಿರುವ ಕೃತಿಯನ್ನು ಓದಿಕೊಳ್ಳುವ ಕೆಲಸ ಆಗಬೇಕು ಎಂದರು.
ಸಮಾಜದ ಸ್ಥಿತಿ ಬದಲಾವಣೆಯನ್ನು ಆದರ್ಶ ಮಹನೀಯರ ಬದುಕಿನ ಆಧಾರವಾಗಿ ಕಾಣಬೇಕು. ಇಂದ್ರಪ್ರಸ್ತದಿಂದ ಹೊರಬಂದ ಶ್ರೀಕೃಷ್ಣ ಪರಮಾತ್ಮನಿಗೆ ರಕ್ತ ಸಂಬಂಧಿಗಳಿಂದಲೇ ಗೌರವ ಸಿಗಲಿಲ್ಲ. ಮಾನಸಿಕವಾಗಿ ತಲ್ಲಣಿಸಿ ಹೋಗಿದ್ದ ಕೃಷ್ಣ ತನ್ನ ಬದುಕಿನ ಆದರ್ಶ ಕಾಪಾಡಿಕೊಳ್ಳಲು ಅಡವಿ ಪಾಲಾಗುತ್ತಾನೆ. ಒಂದು ಸಮಯದಲ್ಲಿ ಚಕ್ರಾಧಿಪತ್ಯವನ್ನೇ ಉಳಿಸಬಲ್ಲ ಶಕ್ತಿ ಇದ್ದಂತ ಕೃಷ್ಣನ ಅಂತ್ಯಕಾಲ ಸಮಾಜಕ್ಕೆ ಸಾರ್ವತ್ರಿಕವಾಗಿ ಸತ್ಯ ಸಂದೇಶವಾಗಿ ಉಳಿದುಕೊಂಡಿದೆ ಎಂದು ಹೇಳಿದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post