ಕಲ್ಪ ಮೀಡಿಯಾ ಹೌಸ್
ಚಾಮರಾಜನಗರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಗೆ ಭೇಟಿ ನೀಡಿ, ಪಕ್ಷದ ಶಾಸಕರ ಜೊತೆ ಚರ್ಚೆ ನಡೆಸಿದರು.
ಆಕ್ಸಿಜನ್ ಕೊರತೆಯಿಂದ ಕೊರೋನಾ ಸೋಂಕಿತರು ಮೃತರಾಗಿರುವ ದುರಂತದ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳ ಸಮನ್ವಯದ ಕೊರತೆ ಹಾಗೂ ಆಮ್ಲಜನಕದ ಅಲಭ್ಯತೆಯಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ಸಮರ್ಪಕವಾಗಿ ಲಭ್ಯವಿದ್ದ ಆಮ್ಲಜನಕವನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡುವಲ್ಲಿ ವಿಫಲವಾದ ಅಧಿಕಾರಿಗಳು ಮತ್ತು ಸರ್ಕಾರ ಇದರ ಪೂರ್ಣ ಹೊಣೆಯನ್ನು ಹೊರಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಡಿಯುವ ನೀರು ಹಾಗೂ ಉಸಿರಾಟದ ಗಾಳಿಗೆ ಯಾರೂ ಅಡ್ಡಿಮಾಡುವಂತಿಲ್ಲ. ಹೀಗಿದ್ದರೂ, ಮೈಸೂರು ಜಿಲ್ಲಾಧಿಕಾರಿ ತಮ್ಮ ಪ್ರತಿಷ್ಠೆಗಾಗಿ 30ಕ್ಕೂ ಹೆಚ್ಚು ಮಂದಿ ಪ್ರಾಣಹರಣಕ್ಕೆ ಕಾರಣವಾಗಿದ್ದಾರೆ. ಸರ್ಕಾರ ಕೊರೋನಾ ನಿಯಂತ್ರಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ವಿಫಲವಾಗಿದೆ. ಇನ್ನಾದರೂ ಹೆಚ್ಚಿನ ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಮಂಡ್ಯ, ಮೈಸೂರು, ಚಾಮರಾಜ ನಗರ ಜಿಲ್ಲಾಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಬೇಕು. ಇತರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಖರ್ಚು ವೆಚ್ಚವನ್ನು ಸರಕಾರವೇ ಭರಿಸಿ ಚಿಕಿತ್ಸೆ ಕೊಡಿಸಬೇಕು ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಕ್ಸಿನ್ ಕೊರತೆಯಿದೆ. ಎಲ್ಲೆಡೆಯೂ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಆಮ್ಲಜನಕದ ಕೊರತೆಯೂ ತೀವ್ರವಾಗಿದ್ದು, ಆರೋಗ್ಯ ಸಚಿವರು ಸಭೆ ನಡೆಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post