ಹೈದರಾಬಾದ್: ಎನ್’ಡಿಎ ಮನೆಯಲ್ಲೇ ತಿಂದು ತೇಗಿ, ಈಗ ರಾಜಕೀಯ ಸ್ವಾರ್ಥಕ್ಕಾಗಿ ಉಂಡ ಮನೆಗೇ ಎರಡು ಬಗೆದರೂ ಸಹ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಒಂದಷ್ಟು ಗೌರವವಿತ್ತು. ಆದರೆ, ಇಂದಿನ ಅವರ ಒಂದು ಕರೆ ಅವರ ಕುರಿತಾಗಿ ಎಲ್ಲ ಸದಭಿಪ್ರಾಯವನ್ನು ತೊಳೆದುಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ನೋ ಮೋರ್ ಮೋದಿ, ಮೋದಿ ಈಸ್ ಎ ಮಿಸ್ಟೇಕ್, ಮೋದಿ ನೆವರ್ ಎಗೈನ್ ಎಂಬ ಘೋಷಣೆಗಳನ್ನು ಪ್ರತಿಪಕ್ಷಗಳ ಕಾರ್ಯಕರ್ತರು ಕೂಗುತ್ತಾ ಮೋದಿ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರತಿಭಟನೆಗಳನ್ನು ಕಾರ್ಯಕರ್ತರೇ ಮಾಡಿದರೂ ಇದನ್ನು ರೂಪಿಸುವುದು ಆಯಾ ಪಕ್ಷಗಳ ಮುಖಂಡರುಗಳೇ ಎನ್ನುವುದು ಬಿಚ್ಚಿಟ್ಟ ಗುಟ್ಟು.
ಆದರೆ, ಸ್ವತಃ ಚಂದ್ರಬಾಬು ನಾಯ್ಡು ಅವರೇ ಮೋದಿ ಭೇಟಿಯನ್ನು ವಿರೋಧಿಸಿ ಮೋದಿ ಭೇಟಿಯ ಈ ದಿನ ಕರಾಳ ದಿನ ಎಂದು ಹೇಳಿಕೆ ನೀಡಿದ್ದು ಮಾತ್ರವಲ್ಲದೇ, ಮೋದಿ ಭೇಟಿಯ ವೇಳೆ ಪ್ರತಿಭಟನೆ ನಡೆಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿರುವುದು ನಿಜಕ್ಕೂ ಅತ್ಯಂತ ಖಂಡನೀಯ ಸಂಗತಿ.
ಈ ಕುರಿತು ತಮ್ಮ ಪಕ್ಷದ ಮುಖಂಡರೊಂದಿಗೆ ಟೆಲಿಕಾನ್ಷರೆನ್ಸ್’ನಲ್ಲಿ ನಿನ್ನೆ ಮಾತನಾಡಿರುವ ನಾಯ್ಡು, ನಾಳೆ ಒಂದು ಕರಾಳ ದಿನ. ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶಕ್ಕೆ ಮಾಡಿದ ಅನ್ಯಾಯವನ್ನು ವೀಕ್ಷಿಸುತ್ತಿದ್ದಾರೆ. ಮೋದಿ ರಾಜ್ಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ರಾಫೆಲ್’ನಲ್ಲಿ ಪಿಎಂಒ ಹಸ್ತಕ್ಷೇಪವು ದೇಶಕ್ಕೆ ಅಗೌರವವಾಗಿದೆ. ನಾವು ಶಾಂತಿಯುತ ಗಾಂಧಿವಾದಿ ಪ್ರತಿಭಟನೆಗಳನ್ನು ಹಳದಿ ಮತ್ತು ಕಪ್ಪು ಶರ್ಟ್ ಮತ್ತು ಆಕಾಶಬುಟ್ಟಿಗಳೊಂದಿಗೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸ್ವಾಮಿ ಚಂದ್ರಬಾಬು ನಾಯ್ಡು ಅವರೇ ತಮ್ಮನ್ನೇನು ಸರ್ವಾಧಿಕಾರಿ, ಪ್ರಧಾನಿ ಮೋದಿ ಅವರನ್ನೇನು ಸಾಮಾನ್ಯ ವ್ಯಕ್ತಿ ಎಂದುಕೊಂಡಿದ್ದೀರಾ?

ನಮ್ಮದು ಒಕ್ಕೂಟ ವ್ಯವಸ್ಥೆ… ನೀವು ಇರುವುದೂ ಸಹ ಇದೇ ಒಕ್ಕೂಟ ವ್ಯವಸ್ಥೆಯ ಒಳಗೆಯೇ. ಇದನ್ನು ಮರೆತು ತಾವೊಬ್ಬ ಮುಖ್ಯಮಂತ್ರಿಯಾಗಿ, ನಮ್ಮ ಒಕ್ಕೂಟ ವ್ಯವಸ್ಥೆಯ ಪ್ರಧಾನಿಯವರ ವಿರುದ್ಧವೇ ಪ್ರತಿಭಟನೆಗೆ ಕರೆ ನೀಡಿರುವುದು ನಿಮ್ಮ ಸ್ವಾರ್ಥ ರಾಜಕೀಯ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ.
ಒಪ್ಪಿಕೊಳ್ಳುತ್ತೇವೆ…. ಮೋದಿ ಹಾಗೂ ನಿಮ್ಮ ನಡುವೆ ಪಕ್ಷ ಮತ್ತು ಸಿದ್ದಾಂತಗಳ ಭಿನ್ನತೆಯಿದೆ ಎಂಬುದು ಸತ್ಯ. ಇದನ್ನು ನೀವು ವಿರೋಧಿಸುವ ರೀತಿಯಲ್ಲೇ ವಿರೋಧಿಸಬೇಕು. ನೀವೊಬ್ಬ ರಾಜಕೀಯ ವಿರೋಧಿಯಾಗಿ, ಸಾಮಾನ್ಯ ಪ್ರಜೆಯಾಗಿ ಪ್ರಧಾನಿಯವರು ವಿರುದ್ಧ ನಿಲ್ಲಲು ನಿಮಗೆ ಹಕ್ಕಿದೆ. ಆದರೆ, ಸಂವಿಧಾನಾತ್ಮಕವಾದ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತು ಪ್ರಧಾನಿಯವರು ನಿಮ್ಮ ರಾಜ್ಯಕ್ಕೆ ಭೇಟಿ ನೀಡುವ ವೇಳೆ ಪ್ರತಿಭಟನೆ ನಡೆಸಿ ಎಂದು ಹೇಳಿಕೆ ನೀಡಿರುವುದು ಇಡಿಯ ದೇಶಕ್ಕೆ ನೀವು ಮಾಡಿರುವ ಅವಮಾನವೇ ಸರಿ.
ನಿಮ್ಮ ಇಂತಹ ಕೃತ್ಯಕ್ಕೆ ಚುನಾವಣೆಯಲ್ಲಿ ಸರಿಯಾದ ಬೆಲೆಯನ್ನೇ ತೆರುತ್ತೀರಿ… ನೋಡುತ್ತಿರಿ…







Discussion about this post