ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಕಾರ್ತಿಕ ಮಾಸದಲ್ಲಿ ಆಚರಿಸುವ ಅತ್ಯಂತ ಮಹತ್ವದ ತುಳಸಿ ಹಬ್ಬವನ್ನು ಶನಿವಾರ ಚಂದ್ರಗುತ್ತಿ ಗ್ರಾಮದಲ್ಲಿ ಮನೆ ಮನೆಗಳಲ್ಲೂ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪ್ರತಿ ವರ್ಷ ಕಾರ್ತಿಕ ಕೃಷ್ಣ ಏಕಾದಶಿ, ದ್ವಾದಶಿಯಂದು ತುಳಸಿವ್ರತವನ್ನು ಭಕ್ತಿಯಿಂದ ಆಚರಣೆ ಮಾಡುವುದು ಸಂಪ್ರದಾಯ. ತುಳಸಿ ಕಟ್ಟೆಗೆ ಸುಣ್ಣ-ಬಣ್ಣ, ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿ ಬೆಟ್ಟದ ನೆಲ್ಲಿ ಗಿಡದ ಕೊಂಬೆಯನ್ನು ನೆಟ್ಟು ಭಕ್ತಿಯಿಂದ ಮಹಿಳೆಯರು ಪೂಜೆ ನೆರವೇರಿಸಿದರು.
ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಾಲು ಸಾಲು ದೀಪಗಳನ್ನು ಹಚ್ಚಿ ಪೂಜೆ ನೆರವೇರಿಸಿದರು. ತುಳಸಿ ಹಬ್ಬ ಪವಿತ್ರವಾದ ದಿನದಂದು ವಿಷ್ಣುದೇವ ಯೋಗ ನಿದ್ರೆಯಿಂದ ಎಚ್ಚೆತ್ತು ಭಕ್ತರಿಗೆ ದರ್ಶನ ನೀಡುವ ದಿನ. ತುಳಸಿ ವಿವಾಹ ದಿನ ತುಳಸಿ ಹಬ್ಬದಿಂದ ದಾರಿದ್ರ್ಯ ನಿವಾಹಣೆ, ಸಂತಾನ ಪ್ರಾಪ್ತಿ, ಸುಖ-ಶಾಂತಿ, ಸಂಪತ್ತು, ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ.
ತುಳಸಿಗೆ ಅಭಿಮುಖವಾಗಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಂಗಳದ್ರವ್ಯಗಳೊಂದಿಗೆ ತುಳಸಿ ವಿವಾಹವನ್ನು ನೆರವೇರಿಸಿ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಬಾಳೆ ದಿಂಡಿನಲ್ಲಿ ತುಪ್ಪದ ದೀಪದಿಂದ ಆರತಿ ಬೆಳಗಿ ಮಹಿಳೆಯರು ಭಕ್ತಿಯನ್ನು ಮೆರೆದರು.
ಇಲ್ಲಿನ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ನವ್ಹೆಂಬರ್ 8 ಮಂಗಳವಾರದಂದು ಕಾರ್ತಿಕ ಹುಣ್ಣಿಮೆ ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಯಾವುದೇ ಸೇವೆಗಳು ಇರುವುದಿಲ್ಲ ಚಂದ್ರ ಗ್ರಹಣ ಮುಗಿದ ನಂತರ ದೇವರ ದರ್ಶನ ಹಾಗೂ ರಾತ್ರಿ 9 ಗಂಟೆಗೆ ಪಲ್ಲಕ್ಕಿ ಉತ್ಸವ (ತೆಪ್ಪದ ಕಾರ್ತಿಕ) ಧಾರ್ಮಿಕ ಪೂಜೆ ಕಾರ್ಯಕ್ರಮಕ್ಕೆ ಸಮೀಪದ ಜೋಳದಗುಡ್ಡೆ ಗ್ರಾಮಕ್ಕೆ ತೆರಳಲಿದೆ ಎಂದು ಶ್ರೀ ರೇಣುಕಾಂಬ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post