ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಐತಿಹಾಸಿಕ ಹಾಗೂ ಪುರಾಣಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಅಧಿಕ ಮಾಸದ ಹುಣ್ಣಿಮೆಯ ಪ್ರಯುಕ್ತ ಸಾವಿರಾರು ಭಕ್ತರು ಮಂಗಳವಾರ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಶಿವಮೊಗ್ಗ, ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆನಾಡಿನ ಆರಾಧ್ಯ ಶಕ್ತಿ ದೇವಿ ರೇಣುಕಾದೇವಿಯನ್ನು ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವರ ಹೆಸರಿನಲ್ಲಿ ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ರಥ ಬೀದಿಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಂದ್ರಗುತ್ತಿ ಠಾಣೆಯ ಪೊಲೀಸರು ಟ್ರಾಫಿಕ್ ನಿರ್ವಹಣೆಗೆ ಹರ ಸಾಹಸ ಪಡುವ ದೃಶ್ಯ ಕಂಡುಬಂದಿತ್ತು. ರಥಬೀದಿಯಲ್ಲಿ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.
ವರದಿ: ಮಧುರಾಮ್, ಸೊರಬ
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















