ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗಿಡಗಳನ್ನು ನೆಡುವುದರ ಜೊತೆಗೆ ಗಿಡಗಳನ್ನು ಬೆಳೆಸಿ ಪೋಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರಾಗಿದೆ ಎಂದು ಚಂದ್ರಗುತ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕ ಕೆ. ಕುಮಾರ ಹೇಳಿದರು.
ಚಂದ್ರಗುತ್ತಿ ಶ್ರೀ ರೇಣುಕಾಂಬ ಪ್ರೌಢ ಶಾಲೆಯಲ್ಲಿ ಚಂದ್ರಗುತ್ತಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವೃಕ್ಷಾರೋಪಣ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲೂ ಇರುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಪರಿಸರವು ಹಾಳಾಗುತ್ತಿದೆ. ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಬೇಕು. ವಿದ್ಯಾರ್ಥಿಗಳು ಶಾಲೆಯಲ್ಲಿ ಓದುವುದರ ಜೊತೆಗೆ ಪರಿಸರದ ಮೇಲೆ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ಸಂಘದ ಒಕ್ಕೂಟದ ಕಾರ್ಯದರ್ಶಿ ರೇಣುಕಾ ಶ್ರೀಧರ್ ಮಾತನಾಡಿ ಗಿಡಗಳನ್ನು ಮತ್ತು ಪರಿಸರವನ್ನು ಸಂರಕ್ಷಣೆ ಮಾಡುವುದರಿಂದ ಕಾಲಕ್ಕೆ ತಕ್ಕಂತೆ ಸುರಕ್ಷಿತವಾಗಿ ಮಳೆ ಬೆಳೆ, ಮತ್ತು ಅಂತರ್ಜಲ ಹೆಚ್ಚಳ ಆಗುತ್ತದೆ. ಜೊತೆಗೆ ಸಕಲ ಜೀವರಾಶಿಗಳು ಬದುಕುಳಿಯಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಮೇಲೆ ಕಾಳಜಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ಆರ್ ಶಶಿಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ ಸಂಘಟನಾತ್ಮಕವಾಗಿರುವ ಸ್ಪೂರ್ತಿ ಸ್ನೇಹಿತರ ಬಳಗದವರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ನಮ್ಮ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಇವುಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವ ಜವಾಬ್ದಾರಿಯನ್ನು ನಾವು ವಹಿಸುತ್ತೇವೆ ಎಂದರು,
ಶಾಲಾ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರೀ ರೇಣುಕಾಂಬ ಪ್ರೌಢಶಾಲೆಗೆ 30 ಹಲವಾರು ಜಾತಿಯ ಗಿಡಗಳನ್ನು ವಿತರಿಸಿದರು.
ಶಾಲೆ ಮುಖ್ಯ ಶಿಕ್ಷಕ ಆರ್ ಶಶಿಕುಮಾರ್, ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಗಳಾದ ಲಲಿತಾ ಎಂ ಶೆಟ್ಟಿ, ಜ್ಯೋತಿ, ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಸ್ವತಿ, ಸಂಘದ ಸದಸ್ಯರಾದ ರೇಖಾ, ರಶ್ಮಿ, ಮಮತಾ, ನಾಗರತ್ನ, ನಾಗವೇಣಿ, ಭಾಗ್ಯ, ಹಾಗೂ ಶಾಲೆಯ ಶಿಕ್ಷಕರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post