ಚನ್ನಗಿರಿ: ಈಗ ದಾವಣಗೆರೆ ತಾಲೂಕಿನ ಅಡಕೆ ಕೃಷಿಕರ ನಾಡಾಗಿದೆ. ಏಕಾಂಗಿಯಾಗಿ ಬ್ರಿಟಿಷರ ವಿರುದ್ಧಬಂಡೆದ್ದ ದೋಂಢ್ಯಿಯಾ ವಾಘ್ ಜನ್ನತಾಳಿದ ಊರು.ಕೆಳದಿ ಚನ್ನಮ್ಮನ ಕೋಟೆಯಿರುವ ಸ್ಥಳ. ಇಂತಹ ಚನ್ನಗಿರಿಯಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಯತಿಗಳ ಮೃತ್ತಿಕಾ ಬೃಂದಾವನವಿದೆ.
ಸ್ವತಃ ಶ್ರೀರಾಯರೇ ಶ್ಯಾನುಭೋಗ ದೊಡ್ಡ ನರಸಪ್ಪನವರ ಸ್ವಪ್ನದಲ್ಲಿ ಕಾಣಿಸಿ ಚನ್ನಗಿರಿಯಲ್ಲಿ ಬೃಂದಾವನವಾಗಲಿ ಎಂದು ಇಚ್ಛೆವ್ಯಕ್ತಪಡಿಸಿದರಂತೆ.
ಅದರಂತೆ ಊರವರೆಲ್ಲ ಸೇರಿ ಆಗ ಮಂತ್ರಾಲಯದಲ್ಲಿ ಪೀಠಸ್ಥರಾಗಿದ್ದ ಶ್ರೀವರದೇಂದ್ರ ತೀರ್ಥರನ್ನ ಚನ್ನಗಿರಿಗೆ ಆಹ್ವಾನಿಸಿ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ ಮಾಡಿಸಿದರು. ಪಂಚಮ ಮಂತ್ರಾಲಯವೆಂದು ಪ್ರಸಿದ್ಧಿ ಪಡೆದಿದೆ.
ಈ ಮಠ ಸ್ಥಾಪನೆಯಾಗಿ ಈಗ 236 ಸಂವತ್ಸರಗಳಾಗಿವೆ. ಚನ್ನಗಿರಿಯ ಶ್ಯಾನುಭೋಗ ದೊಡ್ಡನರಸಪ್ಪನವರ ಮನೆತನದವರು ಈ ವರ್ಧಂತಿಯನ್ನು ಪ್ರತೀ ವರ್ಷ ಮಾಘ ಶುದ್ಧ ಪಂಚಮಿಯಂದು ಆಚರಿಸಿಕೊಂಡು ಬರುವ ಪರಿಪಾಠವಿಟ್ಟುಕೊಂಡಿದ್ದಾರೆ.
ಅದರಂತೆ ನಿನ್ನೆ ಭಾನುವಾರ 236 ನೇ ವರ್ಧಂತಿಯನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಸ್ಥಳೀಯರ ತುಂಬು ಸಹಕಾರದಿಂದ ಆಚರಿಸಲಾಯಿತು. ಶ್ರೀರಾಯರಿಗೆ ವಿಶೇಷ ಪಂಚಾಮೃತ, ಅಲಂಕಾರ ಹಾಗೂ ಪಲ್ಲಕ್ಕಿ ಸೇವೆ, ಭಜನಾಮಂಡಳಿಯವರಿಂದ ಸುಶ್ರಾವ್ಯ ಹರಿಕೀರ್ತನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಾವಂತ ಆಗಮಿಕ ಹಾಗೂ ಭಜನಾಮಂಡಳಿ ಸಂಗೀತ ತರಬೇತುದಾರ ಶ್ರೀಜಯಶಂಕರ ಮತ್ತು ಸಂಪ್ರದಾಯ ಗೀತೆಗಳ ಗಣಿ ಹಿರಿಯ ಕಲಾವಿದೆ ಕಿಟ್ಟಮ್ಮ ಅವgನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚನ್ನಗಿರಿ ಬ್ರಾಹ್ಮಣ ಮಹಾಸಭಾ ಘಟಕದ ಅಧ್ಯಕ್ಷ ರಂಗಣ್ಣ ಅವರು ಸನ್ಮಾನಿತರಿಗೆ ಸ್ಮರಣಿಕೆ ನೀಡಿದರು. ಶ್ಯಾನುಭೋಗರ ಮನೆತನದ ಪ್ರತಿನಿಧಿಯಾಗಿ ಹಿರಿಯರಾದ ಸಿ.ವಿ. ರಾಘವೇಂದ್ರ ರಾಯರು ಪೂಜಾ ಸಂಕಲ್ಪ ನೆರವೇರಿಸಿದರು. ಅವರ ಕುಟುಂಬದ ಸಮಸ್ತ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post