ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಿಕಿತ್ಸೆ ನೀಡುತ್ತಿದ್ದೇವೆ ಹೊರಗೆ ಹೋಗಿ ಎಂಬ ಕಾರಣಕ್ಕಾಗಿ ಕರ್ತವ್ಯ ನಿರತ ವೈದ್ಯರ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿ, ಚಪ್ಪಲಿ ಎಸೆದಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಚಪ್ಪಲಿ ಎಸೆದ ಮಹಿಳೆಯನ್ನು ತಸ್ಲಿಮಾ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಎರಡು ಗುಂಪುಗಳ ನಡುವೆ ಗಲಾಟೆಯೊಂದರಲ್ಲಿ ಗಾಯವಾಗಿ ಇರ್ಷಾದ್ ಎಂಬುವರು ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು.
ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ ಮೂಳೆ ತಜ್ಞ ವೆಂಕಟೇಶ್ ಅವರು ತಪಾಸಣೆ ನಡೆಸುವಾಗ ಎಲ್ಲರೂ ಒಟ್ಟಿಗೇ ಒಳಗೆ ಬಂದಿದ್ದು, ಹೊರ ಹೋಗುವಂತೆ ವೈದ್ಯರು ತಿಳಿಸಿದಾಗ ಮಾತಿಗೆ ಮಾತು ಬೆಳೆದಿದೆ.
ಕುಪಿತಗೊಂಡ ಗಾಯಾಳು ಸಂಬಂಧಿ ತಸ್ಲಿಮಾ ವೈದ್ಯರ ಶರ್ಟ್ ಹಿಡಿದು, ಕೊರಳ ಪಟ್ಟಿ ಹಿಡಿದು ಎಳೆದಿದ್ದಾರೆ. ಅಲ್ಲದೆ ಚಪ್ಪಲಿ ಬಿಚ್ಚಿ ಎಸೆದಿದ್ದಾರೆ. ರೋಗಿಯ ಅಕ್ಕನಿಗೆ ವೈದ್ಯರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದೂ ಸಹ ಹೇಳಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಕುಪಿತಗೊಂಡ ಆಸ್ಪತ್ರೆ ಸಿಬ್ಬಂದಿ ಹೊರರೋಗಿ ಚಿಕಿತ್ಸಾ ಸೇವೆ ಬಂದ್ ಮಾಡಿ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಮಾರ್ಕೆಟ್ ರಸ್ತೆಯಲ್ಲಿರುವ ನಗರ ಠಾಣೆ ಮುಂಭಾಗ 100 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗಳು ಘೋಷಣೆ ಕೂಗಿದ್ದಾರೆ. ಇದರಲ್ಲಿ ಜಿಲ್ಲಾಸ್ಪತ್ರೆ ಸರ್ಜನ್, ಜಿಲ್ಲಾ ಸರ್ಜನ್ ಕೂಡ ಭಾಗಿಯಾಗಿದ್ದರು.
ನ್ಯಾಯ ಕೊಡಿಸುವಂತೆ ಆಸ್ಪತ್ರೆ ಸಿಬ್ಬಂದಿ ಆಗ್ರಹಿಸಿದ್ದು, ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಆಟೋ ಚಾಲಕರ ಸಂಘ, ಕರವೇ, ಬಜರಂಗದಳ ಸೇರಿ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post