ಶಿವಮೊಗ್ಗ: ಹಲವು ವರ್ಷಗಳ ಹಿಂದೆ ಸಾವಿರಾರು ಮಂದಿಯನ್ನು ಇನ್ನಿಲ್ಲದಂತೆ ಕಾಡಿದ್ದ ಚಿಕೂನ್ ಗೂನ್ಯಾ ಈಗ ನಗರದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಗೋಪಾಳದ ಮಲ್ಲಿಕಾರ್ಜುನ ನಗರದಲ್ಲಿ ಕಳೆದ ಒಂದು ವಾರದ ಹಿಂದೆಯೇ ಚಿಕೂನ್ ಗೂನ್ಯಾ ಕಾಣಿಸಿಕೊಂಡಿದೆ. ಆದರೆ ಇದರ ಅರಿವಿಲ್ಲದ ನಿವಾಸಿಗಳು ಅಕ್ಕಪಕ್ಕದ ಸಣ್ಣಪುಟ್ಟ ಕ್ಲಿನಿಕ್‌ಗೆ ತೆರಳಿ, ಚಿಕಿತ್ಸೆ ಪಡೆದಿದ್ದರು. ಆದರೆ, ಅದು ಗುಣವಾಗದೇ ಉಲ್ಬಣಿಸಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ಸುಮಾರು 10 ಕ್ಕೂ ಹೆಚ್ಚು ಜನರು ದಾಖಲಾಗಿದ್ದರು.
ಈ ಹಿನ್ನೆಲೆಯಲ್ಲಿ ಜಾಗೃತರಾದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಅವರಿಂದ ಮಾಹಿತಿ ಪಡೆದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ಮಲ್ಲಿಕಾರ್ಜುನ ಬಡಾವಣೆಯಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿವೆ. ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ, ಈ ಜ್ವರ ಹರಡುವ ಸೊಳ್ಳೆಗಳು ಕಚ್ಚುವುದು ಹಗಲಿನಲ್ಲಿಯೇ ಆದ್ದರಿಂದ, ಹಗಲು ಮಲಗುವ ವೇಳೆಯೂ ಸಹ ಸೊಳ್ಳೆ ಪರೆದ ಕಟ್ಟಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಸೂಚನೆಗಳು:
- ಬಡಾವಣೆಯಲ್ಲಿ ನೀರನ್ನು ಸಾರ್ವಜನಿಕವಾಗಿ ಸಂಗ್ರಹಿಸಿಡಬಾರದು.
- ನೀರು ನಿಲ್ಲದಂತೆ ಎಚ್ಚರ ವಹಿಸಬೇಕು
- ನೀರು ತೊಟ್ಟಿಗಳನ್ನು ಎರಡು ದಿನಕ್ಕೊಮ್ಮೆ ಖಾಲಿ ಮಾಡಬೇಕು
- ವಯಸ್ಸಾದವರು ಮತ್ತು ಗರ್ಭಿಣಿಯರು ಹೆಚ್ಚಿನ ಎಚ್ಚರ ವಹಿಸಿ
- ಸೊಳ್ಳೆ ನಿರೋಧಕ ಔಷಧಿಗಳನ್ನು ಬಳಸಬೇಕು
















