ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಠ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಯಿತು.
ತಾಲೂಕು ಕಚೇರಿ ಮುಂದೆ ಧರಣಿ ನಡಸಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಕುದಾಪುರ ತಿಪ್ಪೇಸ್ವಾಮಿ, ಸುಮಾರು ವರ್ಷಗಳಿಂದ ಅರೆ ವೈದ್ಯಕೀಯ, ಆರೋಗ್ಯ ಸಹಾಯಕಿ ಮತ್ತು ಕಚೇರಿ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಕೋವಿಡ್ ಸಮಯದಲ್ಲಿ ತಮ್ಮ ಜೀವ ಲೆಕ್ಕಿಸದೆ ಕೊರೋನಾ ವಾರಿಯರ್ಸ್’ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಹಲವು ವರ್ಷಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶಾಸಕ ಟಿ. ರಘುಮೂರ್ತಿಯವರಿಗೆ ಈ ಹಿಂದೆ ಮನವಿ ಸಲ್ಲಿಸಲಾಗಿದ್ದು, ಆರೋಗ್ಯ ಸಚಿವರೊಂದಿಗೆ ಚರ್ಚಿಸುವ ಭರವಸೆ ನೀಡಿದ್ದರು. ತಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಕೋವಿಡ್ ವಾರಿಯರ್ಸ್’ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಆಶಾ ಮೇಲ್ವಿಚಾರಕಿ ರಶ್ಮಿ ಮಾತನಾಡಿ, 15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರ ಸಮಾನ ವೇತನ ನೀಡಬೇಕು. ನಾವು ಸಹ ಹಗಲು ರಾತ್ರಿಯೆನ್ನದೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ನೌಕರರಿಗೆ ಕೊಡುವಂತಹ ಎಲ್ಲಾ ಸೌಲಭ್ಯವನ್ನು ನಮಗೂ ಕೊಡಬೇಕು, ತಾರತಮ್ಯ ಯಾಕೆ? ನಮಗೆ ಯಾವ ಸೇವಾಭದ್ರತೆಯ ಸಹ ಇರುವುದಿಲ್ಲ ಎಂದು ಕಿಡಿ ಕಾರಿದರು.
ನಾವು ಈ ಹಿಂದೆಯೂ ಸಹ ಇದೇ ರೀತಿಯಾಗಿ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ನೀಡಲಾಗಿತ್ತು. ಆ ಸಮಯದಲ್ಲಿ ಸರ್ಕಾರ ಸಮಿತಿ ರಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು. ಇದುವವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಸರ್ಕಾರ ನಮ್ಮ ಸಮಸ್ಯೆಗಳನ್ನು ಅರಿತು ಸಮಾನ ವೇತನ, ಸೇವಾ ಭದ್ರತೆ ನೀಡಬೇಕು, ಭತ್ಯೆಗಳು, ವೈದ್ಯಕೀಯ ಸೌಲಭ್ಯ ಬ್ಯಾಂಕಿನಲ್ಲಿ ಸಾಲ ನೀಡುವುದು, ವಿಮೆ, ಹೊರಗುತ್ತಿಗೆ ಪದ್ದತಿ ಕೈಬಿಡಬೇಕು ಎಂದು ಮನವಿ ಮಾಡಿದರು.
ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬಿಪಿಎಂ ಪ್ರದೀಪ್, ಡಾ.ಸಂದೀಪ್, ಡಾ.ಗೀತಾ, ಡಾ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಖಜಾಂಚಿ ಕೃಪಾಲಕ್ಷ್ಮೀ, ಅರೋಗ್ಯ ಸಹಾಯಕಿಯರಾದ ಉಮಾ, ಮಮತಾ, ಗಾಯತ್ರಿ, ರೂಪಿಣಿ, ವಿದ್ಯಾ, ತಜ್ಞರಾದ ಭಾಗ್ಯಮ್ಮ, ರೂಪ, ಪರ್ದನಾ ಅರೋಗ್ಯ ಸಹಾಯಕ ರಾಘವೇಂದ್ರ, ಪೂರ್ಣಿಮ, ಧನಲಕ್ಷ್ಮಿ, ವನ್ನಾವತಿ, ಮಮತ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















