ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಇಲ್ಲಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಪ್ರಗತಿಪರ ರೈತ ಕೆ.ಪಿ ಭೂತಯ್ಯ ಅವರ ಸಹಯೋಗದೊಂದಿಗೆ ಕೃಷಿ ವಿಜ್ಞಾನಿಗಳ ಮತ್ತು ರೈತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಡಾ. ಪ್ರಭಾಕರ ಅವರು ಬಯಲುಸೀಮೆಯ ರೈತರ ಕೃಷಿ ಕುರಿತು ಮಾತನಾಡಿ, ಬಯಲುಸೀಮೆಯಲ್ಲಿ ಖುಷ್ಕಿ ಜಮೀನುಳ್ಳ ರೈತರು, ಅನಾವೃಷ್ಟಿಯ ಹಿನ್ನೆಲೆ ಆಧುನಿಕ ಬೇಸಾಯ ಪಧ್ದತಿಯನ್ನು ಅನುಸರಿಸಿ ಉತ್ತಮವಾಗಿ ಶೇಂಗಾ ಬೆಳೆ ಬೆಳೆಯಬಹುದು. ಜೂನ್-ಜುಲೈ ತಿಂಗಳಲ್ಲಿ ಮಳೆ ಬಾರದಿದ್ದರೂ ಕೂಡ ರೈತರು ಹದಕ್ಕೆ ಸರಿಯಾಗಿ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿಕೊಂಡು ಖುಷ್ಕಿ ಭೂಮಿ ಹಸಿ ಮಾಡಿ ಶೇಂಗಾ ಭಿತ್ತನೆ ಮಾಡಬಹುದು ಎಂದು ಸಲಹೆ ನೀಡಿದರು.
ಬಬ್ಬೂರು ಕೃಷಿ ವಿಜ್ಞಾನ ಕೆಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಶರಣಪ್ಪ ಜಂಗುಡಿ ಮಾತನಾಡಿ, ಸಮಗ್ರ ಕೃಷಿಗೆ ಈ ಭಾಗದ ರೈತರು ಒತ್ತು ನೀಡಬೇಕು. ತಜ್ಞರಿಂದ ವೈಜ್ಞಾನಿಕ ಕೃಷಿಯ ಮಾಹಿತಿ ಪಡೆದು, ತಮ್ಮ ಜಮೀನಿನ ನೀರು ಮತ್ತು ಮಣ್ಣನ್ನು ಪರೀಕ್ಷಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಡಾ. ಮೋಹನ ಕುಮಾರ ಮಾತನಾಡಿ, ಖುಷ್ಕಿ ಮತ್ತು ನೀರಾವರಿ ಜಮೀನುಗಳ ರೈತರು ಮೊದಲು ತಮ್ಮ ಕೃಷಿ ಭೂಮಿಯಲ್ಲಿನ ಕೊರತೆಯುಳ್ಳ ಪೋಶಕಾಂಶಗಳ ಮಾಹಿತಿ ತಿಳಿದುಕೊಂಡು ಮಣ್ಣಿಗೆ ಅಗತ್ಯವಾಗಿ ಬೇಕಾದ ಲಘು ಪೋಶಕಾಂಶಗಳನ್ನು ಬಳಸಿ ಬೀಜ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ರುದ್ರಮುನಿಯಪ್ಪ ಮಾತನಾಡಿ, ನಾವಿಂದು ನಮ್ಮ ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿದ್ದೇವೆ. ಇದರ ಬದಲು ಕೊಟ್ಟಿಗೆಗೊಬ್ಬರ, ಹಸಿರೆಲೆಗೊಬ್ಬರ ಹಾಗೂ ಜೀವಾಮೃತ ಬಳಸುವುದರಿಂದ ನಮ್ಮ ಬೆಳೆಗಳಿಗೂ ರೋಗ ಬಾಧೆ ಕಾಣಿಸದು ಎಂದರು.
ಪ್ರಗತಿಪರ ರೈತ ಕೆ.ಪಿ. ಭೂತಯ್ಯ ಮಾತನಾಡಿ, ಸರ್ಕಾರ ಹಾಗೂ ಕೃಷಿ ವಿವಿಗಳ ಮೂಲಕ ಗ್ರಾಮೀಣ ಪ್ರದೇಶದ ರೈತರ ಜಮೀನುಗಳಿಗೆ ಕೃಷಿ ವಿಜ್ಞಾನಿ ತಂತ್ರಜ್ಞರನ್ನು ಕಳಿಸಿ ಕೃಷಿ ಕುರಿತ ಸಮಗ್ರ ಮಾಹಿತಿ ತಿಳಿಸಬೇಕು ಎಂದು ವಿನಂತಿಸಿದರು.
ಇದೇವೇಳೆ ಒಣ ಭೂಮಿ ಬೇಸಾಯ, ಶೇಂಗಾ, ತೃಣಧಾನ್ಯಗಳು, ಎಣ್ಣೆಬೀಜಗಳ ಬೆಳೆ, ಸಮಗ್ರ ಕೃಷಿ, ಲಘು ಪೋಷಕಾಂಶಗಳ ಬಳಕೆ, ಮಣ್ಣು-ನೀರು ಪರೀಕ್ಷಾ ವಿಧಾನ ಬಗ್ಗೆ ತೋಟಗಾರಿಕಾ ಮತ್ತು ಕೃಷಿ ವಿವಿಗಳಿಂದ ಉಚಿತ ಮಾಹಿತಿ, ಪರಿಕರಗಳ ವಿತರಣೆ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಉಪನಿರ್ದೇಶಕಿ ಡಾ. ಸವಿತಾ, ಡಾ ಎಸ್. ಓಂಕಾರಪ್ಪ, ಡಾ. ಶರಣಪ್ಪ, ವಿರೂಪಾಕ್ಷಪ್ಪ, ಕೃಷ್ಣಪ್ಪ, ವೃಷಭೇಂದ್ರಪ್ಪ, ಭರತೇಶರೆಡ್ಡಿ, ನಾಗೇಂದ್ರಪ್ಪ, ಶ್ರೀನಿವಾಸ, ಚಿತ್ರಲಿಂಗಪ್ಪ, ದಯಾನಂದಮೂರ್ತಿ, ತಿಪ್ಪಯ್ಯ, ತಿಪ್ಪೇಸ್ವಾಮಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರೈತರು ಗ್ರಾಮಸ್ಥರು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post