ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಎ. 14 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬಡವರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಿಸುವ ಯೋಜನೆ ಜಾರಿಗೆ ಬಂದಿದ್ದು, ಶುಕ್ರವಾರದಂದು ಜಿಲ್ಲೆಯಲ್ಲಿ 3120 ಬಡ ಕುಟುಂಬಗಳಿಗೆ ತಲಾ ಒಂದು ಲೀ. ಹಾಲನ್ನು ಉಚಿತವಾಗಿ ವಿತರಿಸಲಾಗಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಎ. 14 ರವರೆಗೆ ಲಾಕ್‌ಡೌನ್ ಜಾರಿಗೊಳಿಸಿದೆ. ಹೀಗಾಗಿ ಈ ನಿರ್ಬಂಧಿತ ಅವಧಿಯಲ್ಲಿ ಬಡವರು, ಕೂಲಿ ಕಾರ್ಮಿಕರು, ಲಾಕ್‌ಡೌನ್ ಕಾರಣದಿಂದಾಗಿ ಪುನರ್ವಸತಿಗೆ ಒಳಗಾದವರು, ಕೊಳಚೆ ಪ್ರದೇಶದವರಿಗೆ ಆಹಾರ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಉಚಿತವಾಗಿ ಆಹಾರಧಾನ್ಯವನ್ನು ಈಗಾಗಲೆ ವಿತರಿಸಲಾಗುತ್ತಿದೆ.
ಇನ್ನು ಇದರ ಜೊತೆಗೆ ಈ ಬಡ ಕುಟುಂಬಗಳಿಗೆ ನಿರ್ಬಂಧಿತ ಅವಧಿಯಲ್ಲಿ ಒಳ್ಳೆಯ ಪೌಷ್ಠಿಕಾಂಶ ನೀಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಸರ್ಕಾರ ಉಚಿತವಾಗಿ ತಲಾ ಒಂದು ಲೀ. ಹಾಲನ್ನು ವಿತರಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಅಲ್ಲದೆ ಹಾಲು ಒಕ್ಕೂಟದಲ್ಲಿ ಶೇಖರಣೆಯಾಗುವ ಹೆಚ್ಚುವರಿ ಹಾಲನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ, ರೈತರಿಗೆ ಆರ್ಥಿಕ ಬೆಂಬಲ ಹಾಗೂ ಹಾಲು ಉತ್ಪಾದನೆಗೆ ಉತ್ತೇಜನ ನೀಡುವುದು ಕೂಡ ಯೊಜನೆಯ ಉದ್ದೇಶವಾಗಿದೆ. ಯೋಜನೆಯನ್ನು ಸುಗಮವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಇದಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲೆಯಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರನ್ನು ಯೋಜನೆಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಈ ಯೋಜನೆಯ ನೋಡಲ್ ಅಧಿಕಾರಿಯಾಗಿರುವ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಕೃಷ್ಣಪ್ಪ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇಂತಹ ಬಡ ಕುಟುಂಬಗಳಿಗೆ ಪ್ರತಿ ದಿನ 20 ಸಾವಿರ ಲೀ. ಹಾಲು ವಿತರಿಸುವ ಗುರಿ ಹೊಂದಲಾಗಿದೆ. ಯೋಜನೆ ಜಾರಿಗೊಳಿಸಿದ ಮೊದಲ ದಿನದಂದೇ ಅಂದರೆ ಶುಕ್ರವಾರ ಜಿಲ್ಲೆಯಲ್ಲಿ 3120 ಬಡ ಕುಟುಂಬಗಳಿಗೆ ತಲಾ ಒಂದು ಲೀ. ಹಾಲನ್ನು ಬೆಳ್ಳಂ ಬೆಳಿಗ್ಗೆಯೇ ಉಚಿತವಾಗಿ ವಿತರಣೆ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 1570 ಕುಟುಂಬಗಳು, ಚಳ್ಳಕೆರೆ-1000, ಹೊಸದುರ್ಗ-500 ಹಾಗೂ ಹಿರಿಯೂರು-100 ಲೀ. ವಿತರಣೆ ಮಾಡಲಾಗಿದೆ.
ಉಳಿದಂತೆ ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ಅಧಿಕಾರಿಗಳಿಂದ ಸಲ್ಲಿಕೆಯಾಗುವ ಬೇಡಿಕೆ ಪಟ್ಟಿ ಅನ್ವಯ, ಶನಿವಾರದಿಂದ ಹಾಲು ವಿತರಣೆ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಎಲ್ಲ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳೊಡಗೂಡಿ, ಎಲ್ಲರ ಸಹಕಾರದೊಂದಿಗೆ ಬಡ ಕುಟುಂಬಗಳಿಗೆ ಹಾಲು ವಿತರಣೆ ಪ್ರಾರಂಭವಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳು ಯೋಜನೆಯ ಸಮರ್ಪಕ ಜಾರಿ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಅವರ ಸೂಚನೆಯಂತೆ ಯೋಜನೆ ಜಾರಿಗೊಳಿಸಲಾಗುವುದು. ಹಾಲು ವಿತರಣೆಯಲ್ಲಿ ದುರ್ಬಳಕೆ ತಡೆಗಟ್ಟುವ ಸಲುವಾಗಿ ಹಾಲಿನ ಪಾಕೆಟ್ ಮೇಲೆ ಕೋವಿಡ್-19, ಮಾರಾಟಕ್ಕೆ ಅಲ್ಲ, ಉಚಿತ ವಿತರಣೆ ಯೋಜನೆಗಾಗಿ’ ಎಂಬ ಮೊಹರನ್ನು ಹಾಕಲಾಗಿದೆ. ಇದಕ್ಕೆ ತಗಲುವ ವೆಚ್ಚದ ಮೊತ್ತವನ್ನು ಕೆಎಂಎಫ್ ನವರಿಗೆ ರಾಜ್ಯ ಸರ್ಕಾರದ ಪಶುಸಂಗೋಪನೆ ಇಲಾಖೆ ಮೂಲಕ ಹಣ ಪಾವತಿಯಾಗಲಿದೆ ಎಂದರು.
Get in Touch With Us info@kalpa.news Whatsapp: 9481252093
Discussion about this post