ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದ ಸಮೀಪವಿರುವ ಬುಡ್ನಹಟ್ಟಿ ಗ್ರಾಮದ ಮೂಲಕ ಹಾದು ಹೋಗಿರುವ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ 40ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿದ್ದು, ಇದರಲ್ಲಿ ಹತ್ತುಕ್ಕೂ ಹೆಚ್ಚು ಕುಟುಂಬಗಳು ಕೆರೆಯಂಗಳದಲ್ಲಿ ಗುಡಿಸಲು ಹಾಕಿಕೊಂಡಿರುವ ಬದುಕ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಶಾಲೆ, ಅಂಗನವಾಡಿ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡಗಳು ನೆಲ ಸಮವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರಿಗೂ, ಮಕ್ಕಳಿಗೂ ನೆಲೆಯಿಲ್ಲದಂತಾಗಿದೆ. ಗ್ರಾಪಂ ಕಚೇರಿಯನ್ನು ತಾತ್ಕಾಲಿಕವಾಗಿ ಸಮುದಾಯ ಭವನಕ್ಕೆ ಶೀಫ್ಟ್ ಮಾಡಲಾಗಿದೆ. ಕೋವಿಡ್‌ನಿಂದ ಮುಚ್ಚಿದ್ದ ಶಾಲೆಗಳು ಜ.1ರಿಂದ 6 ಮತ್ತು 7ನೇ ತರಗತಿಗಳು ಆರಂಭವಾಗಿವೆ. ಹೆದ್ದಾರಿ ವಿಸ್ತರಣೆಯ ನಂತರ ಉಳಿದಿರುವ ಹೊಸದೊಂದು ಕೊಠಡಿಯ ಜತೆಗೆ ಹಳೆ ಎರಡು ಕೊಠಡಿಗಳಲ್ಲಿ ವಿದ್ಯಾಗಮ ನಡೆಸಲಾಗುತ್ತಿದೆ. 1ರಿಂದ 5ನೇ ತರಗತಿಗಳು ಆರಂಭಗೊಂಡಲ್ಲಿ ಕನ್ನಡ ಶಾಲೆಯ ಮಕ್ಕಳ ಜತೆಗೆ ಉರ್ದು ಶಾಲೆ ಮಕ್ಕಳು, ಬಾಲವಾಡಿಯ ಪುಟಾಣಿಗಳಿಗೂ ಕೊಠಡಿಗಳಿಲ್ಲದೆ ಬೀದಿಯಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ವಿಸ್ತೀರ್ಣ ಮಾಡಿದರೆ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಕಳೆದ ವರ್ಷ ಗ್ರಾಮಸ್ಥರು ಹೋರಾಟ ನಡೆಸಿದ್ದರಿಂದ ಜಿಲ್ಲಾಡಳಿತ ಸಂದಾನ ಸಭೆ ನಡೆಸಿ ಊರಿಗೆ ಹೊಂದಿಕೊಂಡಿರುವ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಎಂಟು ಎಕರೆ ಜಾಗದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶ ನೀಡಲಾಗುವುದು. ಉಳಿದ ಜಾಗವನ್ನು ಸಂದಾನ ಸಭೆ ನಡೆಸಿ, ಊರಿಗೆ ಹೊಂದಿಕೊಂಡಿರುವ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಎಂಟು ಎಕರೆ ಜಾಗದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶ ನೀಡಲಾಗುವುದು. ಉಳಿದ ಜಾಗದಲ್ಲಿ ಪಂಚಾಯಿತಿ ಕಚೇರಿಗೆ, ಸರಕಾರಿ ಶಾಲೆಗಳಿಗೆ, ಅಂಗನವಾಡಿ ಕಟ್ಟಡಕ್ಕೆ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು.
ವರ್ಷ ಕಳೆದರೂ ಜಿಲ್ಲಾಡಳಿತ ಇತ್ತ ತಿರುಗಿ ನೋಡಿಲ್ಲ. ಪರಿಣಾಮ ಕೆರೆಯಂಗಳದಲ್ಲೇ ಬದುಕಿನ ಬಂಡಿ ಸಾಗಿಸಬೇಕಿದೆ. ಹೆದ್ದಾರಿಯವರು ಮನೆಗಳಿಗೆ ಮಾತ್ರ ಪರಿಹಾರ ನೀಡಿದರು. ನಿಮ್ಮ ಮನೆಗಳ ಜಾಗ ಗ್ರಾಮ ಠಾಣೆಗೆ ಸೇರಿಲ್ಲವೆಂದು ಯಾವುದೇ ಪರಿಹಾರ ನೀಡಿಲ್ಲ. ಈ ಜಾಗಕ್ಕೆ ಅನೇಕ ವರ್ಷಗಳಿಂದ ಕಂದಾಯ ಪಾವತಿ ಮಾಡಿಕೊಂಡು ಬಂದಿದ್ದೇವೆ. ಆದರೂ ಗ್ರಾಮ ಠಾಣೆಗೆ ಸೇರಿಲ್ಲವೆಂದು ಮನೆಗಳಿಗೆ ಕೊಟ್ಟಿರುವ ಕಡಿಮೆ ಪರಿಹಾರದಲ್ಲಿ 4ರಿಂದ 5 ಲಕ್ಷವಿರುವ ಸೈಟ್ ಕೊಂಡು ಮನೆ ಕಟ್ಟಿಕೊಳ್ಳುವುದು ಸಾಧ್ಯವೇ. ಹಾಗಾಗಿ ಭರವಸೆ ನೀಡಿದಂತೆ ಸರಕಾರ ಊರಿನ ಪಕ್ಕದಲ್ಲಿರುವ ಜಾಗ ನೀಡಿದರೆ ಮನೆ ಕಟ್ಟಿಕೊಳ್ಳುತ್ತೇವೆ.
-ತಿಪ್ಪೇಸ್ವಾಮಿ.
ಮನೆ ಕಳೆದುಕೊಂಡ ಲಕ್ಷ್ಮಿ ಕಾಟೇಶ್ ದಂಪತಿಗೆ 2.50 ಲಕ್ಷ ರೂ. ಕೊಟ್ಟಿದ್ದಾರೆ. ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಒಂದು ಎಕರೆ ಜಮೀನು ಇದೆ. ಜೀವನ ಮಾಡುವುದು ಹೇಗೆ. ಸೈಟು ಹೆಸರಿನಲ್ಲಿದ್ದರೂ ಪರಿಹಾರ ಕೊಡಲಿಲ್ಲ. ಇನ್ನೂ ಪ್ರೇಮ-ಬಸವರಾಜು ದಂಪತಿಯ ಗುಡಿಸಲು ಇತ್ತು. ಇದಕ್ಕೆ 10 ಸಾವಿರ ಪರಿಹಾರ ನೀಡಿದ್ದಾರೆ. ಸೈಟಿನ ಇ-ಸ್ವತ್ತು ಇದ್ದರೂ ಸಹಾ ಪರಿಹಾರ ನೀಡಿಲ್ಲ.
-ವಿಶ್ವ.
ನಮ್ಮ ಹೆಸರಿನಲ್ಲಿ ನಿವೇಶನ, ಇ-ಸ್ವತ್ತಿದೆ. ಕಂದಾಯ ಪಾವತಿಸುತ್ತಿರುವಾಗ ಹೆದ್ದಾರಿಯವರು ನಿವೇಶಕ್ಕೆ ಪರಿಹಾರ ನೀಡದೆ ಮನೆಗೆ ಮಾತ್ರ ಕೊಟ್ಟು ಅನ್ಯಾಯ ಮಾಡಿದ್ದಾರೆ. ಇತ್ತ ನಿವೇಶ ಕೊಡುವುದಾಗಿ ಸರಕಾರ ಹೇಳಿ ಮನೆ ಖಾಲಿ ಮಾಡಿಸಿತು. ಈಗ ಕೆರೆಯಂಗಳದಲ್ಲಿ ಬದುಕುವಂತಾಗಿದೆ.
-ನಿಲಾಂಬರಿ ಬುಡ್ನಹಟ್ಟಿ
ಮನೆ ಕಳೆದುಕೊಂಡು ಚಿಕ್ಕ ಮಕ್ಕಳೊಂದಿಗೆ ಕೆರೆಯಂಗಳದಲ್ಲಿ ಗುಡಿಸಲು ಕಟ್ಟಿಕೊಳ್ಳುವಂತಾಗಿದ್ದು, ಕೆರೆಗೆ ಮಳೆ ನೀರು ಬಂದಾಗ ಮಕ್ಕಳು ಹೋಗಿ ಜೀವ ಹೋದರೆ ಯಾರು ಹೊಣೆಯಾಗುವರು. ಮನೆ ಕಳೆದುಕೊಂಡವರಿಗೆ ನಿವೇಶನ ನೀಡುವುದಾಗಿ ತಿಳಿಸಿದಂತೆ ಸರಕಾರ ಕೂಡಲೇ ಜಾಗ ಕಲ್ಪಿಸಬೇಕು.
-ಗಿರಿಯಮ್ಮ ಬುಡ್ನಹಟ್ಟಿ.
ಸೀಟಿನ ಮನೆಯೆಂದು 3.60 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸೈಟಿಗೆ ಕೊಡಲಿಲ್ಲ. ಇವರು ಕೊಟ್ಟ ದುಡ್ಡಿನಲ್ಲಿ ಒಂದು ಸೈಟು ಬರುವುದಿಲ್ಲ. ಮನೆ ಕಟ್ಟಿಕೊಳ್ಳಲು ಆಗುವುದೇ. ಸರಕಾರದವರೂ ಮನೆ ಖಾಲಿ ಮಾಡಿ ಸೈಟು ಕೊಡುವುದಾಗಿ ತಿಳಿಸಿದ ಅಧಿಕಾರಿಗಳು ಈವರೆಗೆ ಇತ್ತ ತಿರುಗಿ ನೋಡುತ್ತಿಲ್ಲ. ಸಣ್ಣ ಮಕ್ಕಳೊಂದಿಗೆ ಕೆರೆಯಂಗಳದಲ್ಲಿ ಗುಡಿಸಲು ಹಾಕಿಕೊಂಡು ಬದುಕುವಂತಾಗಿದೆ
-ಆಶಾ ಬುಡ್ನಹಟ್ಟಿ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post