ಕಲ್ಪ ಮೀಡಿಯಾ ಹೌಸ್ | ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
ಮಂಗಳೂರಿನ ಮುಂಜಾನೆಯ ಮಂಜಿನ ಹನಿಗಳ ನಡುವೆ, ರೇಡಿಯೋ ಆನ್ ಮಾಡಿದರೆ ಸಾಕು, ಒಂದು ಆತ್ಮೀಯ ಧ್ವನಿ ನಮ್ಮನ್ನು ತಬ್ಬಿಕೊಳ್ಳುತ್ತದೆ. ಆ ಧ್ವನಿಯಲ್ಲಿ ಪ್ರೀತಿಯಿದೆ, ಸ್ನೇಹವಿದೆ, ಸಂಸ್ಕಾರವಿದೆ, ಸಾಮಾಜಿಕ ಕಳಕಳಿಯಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಪ್ರೀತಿಸುವ ಅದಮ್ಯ ಚೈತನ್ಯವಿದೆ.
ಆ ದನಿಯೇ ಕರಾವಳಿಯ ಮನೆಮಾತಾಗಿರುವ ಆರ್.ಜೆ. ನಯನಾ ಸದಾನಂದ್ ಶೆಟ್ಟಿ.
ಕಳೆದ ಹದಿಮೂರು ವರ್ಷಗಳಿಂದ ರೇಡಿಯೋ ಲೋಕದ ನಕ್ಷತ್ರವಾಗಿ ಮಿನುಗುತ್ತಿರುವ ನಯನಾ, ಇದು ಕೇವಲ ಒಂದು ಧ್ವನಿಯಲ್ಲ, ಲಕ್ಷಾಂತರ ಕೇಳುಗರ ಪಾಲಿನ ಭರವಸೆಯ ಕಿರಣ.
ಕರಾವಳಿ ಕಡಲತೀರ ಮತ್ತು ಪಶ್ಚಿಮ ಘಟ್ಟಗಳ ಪ್ರಕೃತಿಯ ನಡುವಿನ ಮಣ್ಣಿನ ಗುಣವೋ ಏನೋ, ನಯನಾ ಅವರ ಮಾತಿನಲ್ಲಿ ಅಪ್ರತಿಮ ಸ್ಪಷ್ಟತೆ ಮತ್ತು ಗಾಂಭೀರ್ಯವಿದೆ.
ಭಂಡಾರ್’ಕರ್ಸ್ ಕಾಲೇಜಿನ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಆಗಿ ಹೊರಬಂದಾಗಲೇ ಅವರಲ್ಲಿ ಒಬ್ಬ ನಾಯಕಿ ಸುಪ್ತವಾಗಿದ್ದರು. ಎಂಬಿಎ ಮುಗಿಸಿ ಬೆಂಗಳೂರಿನ ಕಾರ್ಪೊರೇಟ್ ಲೋಕದ ಎಸಿ ರೂಮಿನ ಉದ್ಯೋಗದಲ್ಲಿದ್ದ ಇವರನ್ನು ಕೈಬೀಸಿ ಕರೆದದ್ದು ಮಾಧ್ಯಮ ಕ್ಷೇತ್ರ. ಟೈಮ್ಸ್ ಗ್ರೂಪ್’ನಿಂದ ಆರಂಭವಾದ ಇವರ ಯಾನ, `ನಮಸ್ಕಾರ ಮಂಗಳೂರು’ ಮೂಲಕ ಜನಪ್ರಿಯತೆಯ ಶಿಖರಕ್ಕೇರಿ, ಇಂದು ರಿಲಯನ್ಸ್ ಬ್ರೋಡ್ ಕಾಸ್ಟ್ ಲಿಮಿಟೆಡ್ ನ 92.7 BIG FM ‘ಕುಡ್ಲ ಮಾರ್ನಿಂಗ್ಸ್’ ಮೂಲಕ ಜನರ ಬೆಳಗಿನ ಕಾಫಿಯಷ್ಟೇ ಅನಿವಾರ್ಯವಾಗಿ ಬಿಟ್ಟಿದ್ದಾರೆ.
ನಯನಾ ಅವರ ವ್ಯಕ್ತಿತ್ವಕ್ಕೆ ಕೇವಲ ರೇಡಿಯೋ ಸ್ಟುಡಿಯೋಗಳು ಗಡಿಯಲ್ಲ. ಅವರು ಜಾಗತಿಕ ಮಟ್ಟದ ನಿರೂಪಕಿ ಕೂಡ ಹೌದು. ದುಬೈ, ಮಸ್ಕತ್’ನಂತಹ ಅಂತಾರಾಷ್ಟ್ರೀಯ ವೇದಿಕೆಗಳಿಂದ ಹಿಡಿದು, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು, ಮುಂಬೈ, ಬೆಂಗಳೂರಿನ ಬೃಹತ್ ವೇದಿಕೆಗಳವರೆಗೆ ಅವರ ವಾಕ್ಚತುರ್ಯ ಹರಡಿದೆ.
ಸಂಗೀತ ಲೋಕದ ಧ್ರುವತಾರೆಗಳಾದ ಎಸ್. ಜಾನಕಿ, ಕೆ.ಎಸ್. ಚಿತ್ರಾ, ರಾಜೇಶ್ ಕೃಷ್ಣನ್ ಹಂಸಲೇಖ ಮತ್ತು ವಿಜಯ್ ಪ್ರಕಾಶ್ ಅವರಂತಹ ದಿಗ್ಗಜರ ಕಾರ್ಯಕ್ರಮಗಳಿಗೆ ನಯನಾ ಅವರ ನಿರೂಪಣೆ ಒಂದು ಸಾಂಸ್ಕೃತಿಕ ಕಿರೀಟವಿದ್ದಂತೆ. ಇವರ ಮಾತುಗಳನ್ನು ಕೇಳುತ್ತಿದ್ದರೆ ಸಮಯ ಸರಿಯುವುದೇ ತಿಳಿಯದು; ಅಲ್ಲೊಂದು ಆತ್ಮೀಯತೆ, ಸೂಜಿಗಲ್ಲಿನ ಸೆಳೆತ ಪ್ರೇಕ್ಷಕರನ್ನು ಮೋದಿ ಮಾಡಿಬಿಡುತ್ತದೆ. ಅಷ್ಟರ ಮಟ್ಟಿಗೆ ಶಬ್ದಗಳನ್ನು ಪೋಣಿಸುವ ಕಲೆ ಇವರಿಗೆ ಸಿದ್ಧಿಸಿದೆ.
ಆದರೆ, ನಯನಾ ಅವರನ್ನು ಇತರರಿಗಿಂತ ಭಿನ್ನವಾಗಿ ನಿಲ್ಲಿಸುವುದು ಅವರ ಸಾಮಾಜಿಕ ಬದ್ಧತೆ. ಸಮಾಜವನ್ನು ಬದಲಿಸುವುದು ಕೇವಲ ಭಾಷಣದಿಂದ ಸಾಧ್ಯವಿಲ್ಲ, ಅದು ಕ್ರಿಯೆಯಿಂದ ಸಾಧ್ಯ ಎಂದು ನಂಬಿದವರು ಅವರು. ಮಳೆನೀರು ಕೊಯ್ಲು, ಪರಿಸರ ಸಂರಕ್ಷಣೆ, ಅಂಗದಾನ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಅವರು ನಡೆಸಿದ ಅಭಿಯಾನಗಳು ಕರಾವಳಿಯಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿವೆ.
ಕರಾವಳಿಯ ಸಂಸ್ಕೃತಿ, ಹಬ್ಬಗಳು, ದೇವಸ್ಥಾನ, ಕೃಷಿ ಬದುಕು, ತುಳುನಾಡಿನ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು ಎನ್ನುವ ಹಂಬಲ ಇವರ ರೇಡಿಯೋ ಕಾರ್ಯಕ್ರಮಗಳಲ್ಲಿ ಎದ್ದು ಕಾಣುತ್ತದೆ. ರೇಡಿಯೋ ಜಾಕಿಯಾಗಿ ಒಳ್ಳೆ ವಿಚಾರಗಳನ್ನು ಸಮಾಜಮುಖಿ ಚಿಂತನೆಗಳನ್ನು, ಮನರಂಜನೆಯ ಜೊತೆಗೆ ಬದುಕು ಬದಲಿಸುವ ವಿಚಾರಗಳನ್ನು ಹಂಚಬಹುದು ಎಂದು ತೋರಿಸಿಕೊಟ್ಟ ಬೆರಳೆಣಿಕೆಯ ರೇಡಿಯೋ ಜಾಕಿಗಳಲ್ಲಿ ನಯನಾ ಕೂಡ ಒಬ್ಬರು ಎನ್ನುವುದು ಹೆಮ್ಮೆಯ ವಿಚಾರ.
ಒಬ್ಬ ವ್ಯಕ್ತಿತ್ವ ವಿಕಸನ ತರಬೇತುದಾರಿಯಾಗಿ ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಸೋತು ಸುಣ್ಣವಾದ ಅದೆಷ್ಟೋ ಮನಸ್ಸುಗಳು ಇವರ ಒಂದು ಪ್ರೇರಣಾದಾಯಕ ವೀಡಿಯೋ ನೋಡಿ ಮತ್ತೆ ಎದ್ದು ನಿಂತಿವೆ. ಇವರ ಇತ್ತೀಚಿನ ಕೃತಿ `ಈ ಪಯಣ’ ಪುಸ್ತಕಕ್ಕೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆಯೇ ಇವರ ವಿಚಾರಧಾರೆಗೆ ಸಿಕ್ಕ ಜಯಪ್ರದ ಮುದ್ರೆ. ಇಷ್ಟೆಲ್ಲಾ ಸಾಧನೆಯ ಶಿಖರದಲ್ಲಿದ್ದರೂ ನಯನಾ ಅವರು ಇಂದಿಗೂ ಮಣ್ಣಿನ ಗುಣವನ್ನು ಮರೆತಿಲ್ಲ.
ತೆರೆಯ ಮುಂದೆ ಕಲಾವಿದೆಯಾಗಿ ಎಲ್ಲರ ಮುಖದಲ್ಲಿ ನಗುಅರಳಿಸುವ ನಯನಾ ತೆರೆಯ ಹಿಂದೆ ತನ್ನ ಮಾರ್ಗದರ್ಶನ ಬಯಸಿ ಬರುವ ವಿದ್ಯಾರ್ಥಿಗಳಿಗೆ ಭರವಸೆಯ ಬೆಳಕು. ಸೋತ ಮನಸುಗಳಿಗೆ ದಾರಿದೀಪವಾಗುವ ಆಪ್ತ ಸಮಾಲೋಚಕಿ ಜ್ಞಾನ ಪುಷ್ಪ, ಬಾಂಧವ್ಯಪ್ರಶಸ್ತಿ, ರೋಟರಿ ಲಯನ್ಸ್. ವಿಶ್ವ ಬಂಟರ ಸಮ್ಮೇಳನ, ಬೇರೆ ಸಂಘ ಹಾಗೂ ಸೇವಾ ಸಂಸ್ಥೆಗಳ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆ ಬೈಂದೂರು ನೆಲ್ಯಾಡಿ ನಾರಾಯಣ ಶೆಟ್ಟಿ ಹಾಗೂ ಯರುಕೋಣೆ ಚೀತನಮಕ್ಕಿ ವಿನಯ ಶೆಟ್ಟಿ ದಂಪತಿಗಳ ಹಿರಿಯ ಮಗಳು.
ಉದ್ಯಮಿಯಾಗಿರುವ ಪತಿ ಸದಾನಂದ ಶೆಟ್ಟಿ ಅವರ ಬೆಂಬಲದೊಂದಿಗೆ ಮಕ್ಕಳಾದ ಈಶಾನ್-ವಿಹಾನ್ ಅವರ ಜೊತೆಗೆ ವೃತ್ತಿ ಮತ್ತು ಪ್ರವೃತ್ತಿಯನ್ನು ಅದ್ಭುತವಾಗಿ ಸಮತೋಲನ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಆರ್.ಜೆ. ನಯನಾ ಕೇವಲ ಮಾತುಗಾರ್ತಿಯಲ್ಲ, ಅವರು ಕರಾವಳಿಯ ಸಾಂಸ್ಕೃತಿಕ ರಾಯಭಾರಿ. ಅವರ ಮಾತುಗಳಲ್ಲಿ ಜೇನಿನ ಸವಿ ಇದೆ, ವಿಚಾರಗಳಲ್ಲಿ ವಜ್ರದ ಕಠಿಣತೆ ಇದೆ. ಬದಲಾವಣೆ ತರಲು ಹೊರಟ ಈ ಚೈತನ್ಯದ ಪಯಣ ಹೀಗೆಯೇ ನಿರಂತರವಾಗಿರಲಿ, ಅವರ ಧ್ವನಿ ಜಗತ್ತಿನಾದ್ಯಂತ ಇನ್ನೂ ಹತ್ತು ಹಲವು ಜನರಿಗೆ ಸ್ಫೂರ್ತಿಯಾಗಲಿ ಎನ್ನುವುದೇ ಎಲ್ಲರ ಹಾರೈಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















