ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಂದು ಮಾರಕ ಕರೋನಾ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿದೆ. ಅದರಂತೆ ಜನರು ಮನೆಯಲ್ಲಿ ಕುಳಿತು ಸಹಕಾರ ನೀಡುತ್ತಿದ್ದಾರೆ.
ಆದರೆ ಈ ರೀತಿ ಏಕಾಏಕಿ ಲಾಕ್ಡೌನ್ ಆಗುವ ಮುನ್ಸೂಚನೆ ಇಲ್ಲದೆ ಇದ್ದುದರಿಂದ ಜನರಿಗೆ ಸಾಕಷ್ಟು ಆಹಾರ ಸಾಮಗ್ರಿಗಳ ಅಗತ್ಯ ಔಷಧಿಗಳ ಪೆಟ್ರೋಲ್ ಡೀಸೆಲ್ ಸಂಗ್ರಹಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಕೆಲವರು ಇದ್ದುದ್ದರಲ್ಲಿಯೇ ನೋಡೋಣ ಎಂದು ಸುಮ್ಮನಾದರು. ಯಾವಾಗ ಸರ್ಕಾರದಿಂದ ಒಂದೊಂದಾಗಿ ಕಾನೂನು ಸಡಿಲಗೊಂಡು ದಿನಸಿ ತರಕಾರಿ ಔಷಧಿಗಳು ಯಾವುದೇ ತೊಂದರೆ ಇಲ್ಲದೆ ಸಿಗುತ್ತವೆ ಎಂದು ತಿಳಿಸಿದಾಗ ಸಹಜವಾಗಿ ಜನರು ಮನೆಯಿಂದ ಹೊರಬಂದು ಖರೀದಿಗಾಗಿ ಮುಗಿಬಿದ್ದರು.
ಇಲ್ಲಿ ಜನರ ಹಸಿವು ಮತ್ತು ಸಾಧ್ಯವಾದಷ್ಟು ಖರೀದಿ ಮಾಡಿಕೊಂಡು ಬಿಡೋಣ ಎಂಬ ಆತುರದಲ್ಲಿ ಸೋಂಕು ಹರಡುವ ಮುನ್ನೆಚ್ಚರಿಕೆಯ ಬಗ್ಗೆ ಗಮನ ಹರಿಸಲೇ ಇಲ್ಲ.
ಇದರಿಂದ ಸಹಜವಾಗಿಯೇ ಜನರನ್ನು ನಿಯಂತ್ರಿಸಲು ಪೊಲೀಸರು ಅನಗತ್ಯವಾಗಿ ತಿರುಗುವವರ ಮೇಲೆ ಕ್ರಮ ಕೈಗೊಂಡು ಲಾಠಿ ರುಚಿ ತೋರಿಸಿದ್ದು ಒಮ್ಮೆ ಸರಿ ಎನಿಸಿದರೂ ಈಗ ಅದರ ಹಿಂದಿನ ಕಹಿ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ.
ಡಿಸಿಎಂ ಅಶ್ವತ್ಥನಾರಾಯಣ ಅವರ ನೇರ ಆರೋಪದಂತೆ ಪೊಲೀಸರು ಹಣ ಪಡೆದು ಶಾಪಿಂಗ್ ಮಾಲ್ ಗಳು ತೆರೆಯುವಂತೆ ಮಾಡಿ ಬಡ ತರಕಾರಿ ವ್ಯಾಪಾರಿಗಳನ್ನು ಮನಸೋ ಇಚ್ಛೆ ಲಾಠಿಯಲ್ಲಿ ಥಳಿಸುತ್ತಿದ್ದಾರೆ ಎಂಬ ಆರೋಪ ಜನಸಾಮಾನ್ಯರಲ್ಲೂ ಕೇಳಿಬರುತ್ತಿದೆ.
ಮೊನ್ನೆ ಬೆಂಗಳೂರಿನ ತರಕಾರಿ ವ್ಯಾಪಾರಿಯೊಬ್ಬ ಸಂಜಯನಗರದ ಪೊಲೀಸರ ಮೇಲೆ ಕೈ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆತ ನಿಜವಾಗಿಯೂ ಪೊಲೀಸರ ಮೇಲೆ ಕೈ ಮಾಡಿದನೋ..? ಅಥವಾ ಪೊಲೀಸರು ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದು ತಿರುಗಿಬಿದ್ದನೋ ಎಂಬುದನ್ನು ಮಾನವ ಹಕ್ಕು ಆಯೋಗ ತನಿಖೆಯಿಂದ ಮಾಡಬೇಕಿದೆ. ಅಲ್ಲದೆ ಹಲ್ಲೆ ಮಾಡಿದ ಮಾರನೇ ದಿನ ಅವನ ಕಾಲಿಗೆ ಗುಂಡೇಟು ಹಾಕಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.
ಅಲ್ಲದೆ ರಸ್ತೆಯಲ್ಲಿದ್ದ ಜನರು ಯಾವ ಕಾರಣದಿಂದ ಬಂದಿದ್ದಾರೆ ಎಂದು ಪ್ರಶ್ನೆ ಮಾಡದೆ ಏಕಮುಖವಾಗಿ ಸಿಕ್ಕಸಿಕ್ಕವರ ಮೇಲೆ ಲಾಠಿ ಪ್ರಹಾರ ಮಾಡಿ ಸಾಮಾನ್ಯ ಜನರ ಮೇಲೆ ಕೆಲವು ಪೊಲೀಸರು ವಿಕೃತಿ ನಡೆಯುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.
ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋದವರು ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲದೇ ಕಾಲ್ನಡಿಗೆಯಲ್ಲೇ ತಮ್ಮ ಊರು ಸೇರುವ ಉದ್ದೇಶಕ್ಕಾಗಿ ನಡೆದುಕೊಂಡೆ ಹೋಗುತ್ತಿರುವವರ ಮೇಲೆ ಪೊಲೀಸ್ ದರ್ಪ ತೋರಿಸುವುದು, ಕುಂದಾಪುರದಲ್ಲಿ ಒಬ್ಬ ಇಂಜಿನಿಯರಿಂಗ್ ಯುವಕ ಕೈಯಲ್ಲಿ ಅಗತ್ಯವಸ್ತುಗಳ ಚೀಟಿ ಹಿಡಿದು ಹೊರಗೆ ಬಂದಾಗ ಅವನನ್ನು ತಮ್ಮ ಮೂಗಿನ ನೇರಕ್ಕೆ ತಪ್ಪಿತಸ್ಥ ಎಂದು ತೀರ್ಮಾನಿಸಿ ಅವನ ಕಡೆಯಿಂದ ಯಾವುದೇ ಮಾತನ್ನು ಕೇಳಿಸಿಕೊಳ್ಳದೆ ಹೊಡೆದು ದೌರ್ಜನ್ಯ ನಡೆಸಿರುವುದು ಇಂದಿನ ಸಾಮಾಜಿಕ ಜಾಲತಾಣದ ಪ್ರಮುಖ ಚರ್ಚಾ ವಿಷಯವಾಗಿದೆ.
ಮಾನ್ಯ ಗೃಹ ಸಚಿವರೇ, ಇಂಥ ಸೋಂಬೇರಿ ಕೆಲಸಗಳ್ಳ ದುರಹಂಕಾರಿ ಪೊಲೀಸರನ್ನು ಹದ್ದುಬಸ್ತಿನಲ್ಲಿಡಿ. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ವರೆ ಹೀಗೆ ದೌರ್ಜನ್ಯ ನಡೆಸಿದರೆ ಹೇಗೆ. ..?
ಈ ಹಿಂದೆ ಮಾನ್ಯ ರವಿ ಚನ್ನಣ್ಣನವರ್ ತಮ್ಮ ಸಿಬ್ಬಂದಿಗಳಿಗೆ ಹೇಗೆ ಜನರೊಂದಿಗೆ ವರ್ತಿಸಬೇಕು ಎಂಬುದನ್ನು ತಿಳಿಸಿ ಕೊಡುತ್ತಿರುವ ವಿಡಿಯೋ ಕೂಡ ಬಹಳ ಜನರ ಮನಸ್ಸನ್ನು ಗೆದ್ದಿದೆ.
ಪೊಲೀಸರು ತಾವು ಹಗಲಿರುಳು ಕೆಲಸ ಮಾಡುತ್ತೇವೆ. ತಮಗೆ ಒತ್ತಡ ಜಾಸ್ತಿ. ನಮ್ಮ ಕಷ್ಟ ಕೇಳುವವರ್ಯಾರು. ಆದ್ದರಿಂದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಎಂದು ಸಮಜಾಯಿಷಿ ನೀಡುತ್ತಾ ತಮ್ಮ ವಿಕೃತ ಲಾಠಿ ಪ್ರಹಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ನೆನಪಿಡಿ. ಪೊಲೀಸ್ ಕೆಲಸದ ಸಂಬಳಕ್ಕಿಂತ ಅತಿ ಕಷ್ಟಪಡುವ ರೈತರು ಬಡ ಕೂಲಿಕಾರ್ಮಿಕರು ಅನಕ್ಷರಸ್ಥರು ಶ್ರಮಜೀವಿಗಳು ಮುಗ್ಧರು ಇನ್ನು ಭೂಮಿ ಮೇಲೆ ಬದುಕಿದ್ದಾರೆ. ನೀವು ಅವರಿಗಿಂತ ತೀರಾ ಕಷ್ಟ ಪಡುತ್ತಿಲ್ಲ.
ಸದ್ಯದ ಲಾಕ್ಡೌನ್ ಪರಿಸ್ಥಿತಿಯಲ್ಲಿ ಜನರು ಅಕ್ಕಿ ಬೇಳೆಗಾಗಿ, ಔಷಧಿಗಳಿಗಾಗಿ, ಹಣಕ್ಕಾಗಿ ಎಟಿಎಂಗಳಿಗೆ, ಎಲ್ಲೋ ಸಿಕ್ಕಿ ಹಾಕಿಕೊಂಡಿರುವ ಕುಟುಂಬ ಸದಸ್ಯರನ್ನು ಕರೆ ತರುವ ಸಲುವಾಗಿ, ಆಸ್ಪತ್ರೆಗಳಿಗೆ, ಪೆಟ್ರೋಲ್ ಡೀಸೆಲ್ ಗಳಿಗೆ, ತಮ್ಮ ಯಾವುದೋ ಸಂಬಂಧಿಕರನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ, ತುರ್ತುಸೇವೆ ಡ್ರೈವರ್ ಗಳಾಗಿ ರಿಪೇರಿಗಳಿಗಾಗಿ ಹೊರಗೆ ಬರಬೇಕಾದ ಅನಿವಾರ್ಯತೆಯಿಂದ ಬಂದಿರಬಹುದು. ಸರಿಯಾಗಿ ಯೋಚಿಸಿ ಪ್ರಶ್ನೆ ಮಾಡಿ ನಂತರ ಕ್ರಮ ಕೈಗೊಳ್ಳಿ.
ಕೊನೆಯದಾಗಿ ಜನರನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ರಸ್ತೆಯಲ್ಲಿರುವ ಅವರ ಮಾತನ್ನು ಒಮ್ಮೆ ಕೇಳಿ ನಂತರ ಅವರಿಗೆ ತಿಳಿಹೇಳಿ.
ಲೇಖನ: ಮಧುರಾಮ್, ಸೊರಬ
Get in Touch With Us info@kalpa.news Whatsapp: 9481252093
Discussion about this post