ಬೆಂಗಳೂರು: ಗೋವುಗಳಿಗೆ ಸಹಜ ಜೀವನ ಕಲ್ಪಿಸುವ ಪರಿಕಲ್ಪನೆಯಲ್ಲಿ, ವಿಶಿಷ್ಟ ಗೋಧಾಮ ಗೋಸ್ವರ್ಗವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪರಿಕಲ್ಪಿಸಿ, ಉತ್ತರಕನ್ನಡದ ಭಾನ್ಕುಳಿಯಲ್ಲಿ ಸಾಕಾರಗೊಳಿಸಿದ್ದು, ಗೋಸ್ವರ್ಗದ ಕುರಿತಾದ ಸಂವಾದ ಕಾರ್ಯಕ್ರಮವನ್ನು ಭಾನುವಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.
ವಿಶಿಷ್ಟ ಪರಿಕಲ್ಪನೆಯ ಗೋಸ್ವರ್ಗದ ಕುರಿತಾದ ವಿಚಾರ ವಿನಿಮಯ ಕಾರ್ಯಕ್ರಮ ಗೋಸ್ವರ್ಗ ಸಂವಾದ – ಗೋಸಂಪದ ಸಮರ್ಪಣೆ ಕಾರ್ಯಕ್ರಮ ವಿಜಯನಗರದ ಆರ್ ಪಿ ಸಿ ಬಡಾವಣೆಯಲ್ಲಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಗೋಸ್ವರ್ಗದ ಕುರಿತಾಗಿ ಶ್ರೀಗಳು ಮಾಹಿತಿ ನೀಡಲಿದ್ದು, ಆನಂತರ ಆ ಕುರಿತಾಗಿ ಪ್ರಶ್ನೋತ್ತರಗಳ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಹಸ್ರ ಗೋವುಗಳ ಸ್ವಚ್ಛಂದ ಸಾವ್ರಾಜ್ಯ ಎಂಬ ಪರಿಕಲ್ಪನೆಯಲ್ಲಿ ಗೋಸ್ವರ್ಗವನ್ನು ನಿರ್ಮಿಸಲಾಗಿದ್ದು, ಇಲ್ಲಿ ಗೋವುಗಳಿಗೆ ಯಾವುದೇ ಬಂಧನವಿಲ್ಲದೇ ಇಚ್ಚೆಗನುಸಾರ ಸಂಚರಿಸುವ , ನೆರಳು – ಬಿಸಿಲಿನಲ್ಲಿ ವಿಹರಿಸುವ ವ್ಯವಸ್ಥೆ ಮಾಡಲಾಗಿದೆ. 24/7 ನೀರು ಹಾಗೂ ಆಹಾರ ಲಭ್ಯವಿರುವಂತೆ ಮಾಡಲಾಗಿದ್ದು, ತಾಯಿಯೊಂದಿಗೆ ಕರುವಿರಲು ಅವಕಾಶ ಸೇರಿದಂತೆ ಗೋವುಗಳಿಗೆ ಸಹಜ ಜೀವನದ ಅವಕಾಶವನ್ನು ಕಲ್ಪಿಸಲಾಗಿದೆ. ಅತ್ಯಾಧುನಿಕ ಗೋಸಂಶೋಧನಾ ಕೇಂದ್ರ, ಚಿಕಿತ್ಸಾಲಯ ಹಾಗೂ ಗವ್ಯೋತ್ಪನ ತಯಾರಿಕಾ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಕಸಾಯಿಖಾನೆ ಪಾಲಾಗುತ್ತಿದ್ದ ಗೋವುಗಳಿಗೆ ಗೋಸ್ವರ್ಗದಲ್ಲಿ ಆಶ್ರಯ:
ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗೋವುಗಳು ತಮಿಳುನಾಡಿನ ಆಡಿಜಾತ್ರೆಯಲ್ಲಿ ಕಸಾಯಿಖಾನೆ ಪಾಲಾಗುವ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠ ಮಧ್ಯಪ್ರವೇಶಿಸಿ ಸಾವಿರಕ್ಕೂ ಅಧಿಕ ಗೋವುಗಳನ್ನು ರೈತರಿಂದ ಖರೀದಿಸಿ, ಗೋವುಗಳನ್ನು ಸಂರಕ್ಷಿಸಿತ್ತು. ಕಟುಕರಿಂದ ಸಂರಕ್ಷಿಸಿದ ಈ ಗೋವುಗಳಿಗೂ ಭಾನ್ಕುಳಿಯ ಗೋಸ್ವರ್ಗದಲ್ಲಿ ಅವಕಾಶವನ್ನು ಕಲ್ಪಿಸಲಾಗಿದ್ದು, ಸ್ವರ್ಗ ಸದೃಶ ವ್ಯವಸ್ಥೆಯನ್ನು ಮಾಡಲಾಗಿದೆ.
ಭಾನುವಾರ ಶ್ರೀಭಾರತೀ ವಿದ್ಯಾಲಯದಲ್ಲಿ ನಡೆಯುವ ಸ್ವರ್ಗ ಸಂವಾದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು, ಗೋಸ್ವರ್ಗಕ್ಕೆ ಸೇವಾಕಾಣಿಕೆ ಸಲ್ಲಿಸಲು ಗೋಪ್ರೇಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಮಸ್ತ ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು ಮಾಹಿತಿಗಾಗಿ 9900191186, 9448444446, 9448506897 ಸಂಪರ್ಕಿಸಬಹುದಾಗಿದೆ.
Discussion about this post