ಮಡಿಕೇರಿ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ಅಕ್ಷರಶಃ ತತ್ತರಿಸಿ ಹೋಗಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಸಾವಿರಾರು ಕುಟುಂಬಗಳನ್ನು ಭಾರತೀಯ ಸೇನೆ ರಕ್ಷಿಸುತ್ತಿದೆ.
ಈಗಾಗಲೇ ನೂರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಇನ್ನೂ ಸುಮಾರು 300ಕ್ಕೂ ಅಧಿಕ ಮಂದಿ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಕೊಡಗಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಪರಿಸ್ಥಿತಿಗೆ ಈ ವರ್ಷ ಸಾಕ್ಷಿಯಾಗಿದ್ದು, ಇದುವರೆಗೆ ಆರು ಮಂದಿ ಸಾವಿಗೀಡಾಗಿರುವುದು ಅಧಿಕೃತವಾಗಿ ಗೊತ್ತಾಗಿದೆ. ಕೆಲವು ಗ್ರಾಮಗಳೇ ಕಾಣಸಿಗದಂತಿವೆ. ಈ ಗ್ರಾಮಗಳಲ್ಲಿದ್ದ ಜನರ ಸ್ಥಿತಿ ಏನಾಗಿದೆ ಎಂದೇ ತಿಳಿದುಬಂದಿಲ್ಲ.
ಇನ್ನು, ಮಳೆ ಗಾಳಿ ನಿರಂತರವಾಗಿ ಏರಿಕೆಯಾಗುತ್ತಲೇ ಇದ್ದು, ಪರಿಸ್ಥಿತಿ ಮತ್ತಷ್ಟು ಭೀಕರವಾಗುವ ಆತಂಕ ಎದುರಾಗಿದೆ. ಹಲವು ರಸ್ತೆಗಳು ಕೊಚ್ಚಿ ಹೋಗಿದ್ದರೆ, ಇನ್ನೂ ಹಲವಾರು ರಸ್ತೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಆದುದರಿಂದ ಸಂತ್ರಸ್ತರನ್ನು ಸಂಪರ್ಕಿಸುವುದೇ ಅಸಾಧ್ಯವಾಗಿದೆ. ಪ್ರಸ್ತುತ ಹೆಲಿಕಾಪ್ಟರ್ ಮೂಲಕ ಮಾತ್ರವೇ ಅಲ್ಲಿಗೆ ತೆರಳಬಹುದಾಗಿದೆ. ಆದರೆ ಅದಕ್ಕೂ ಪ್ರಕೃತಿಯ ಮುನಿಸು ಅಡ್ಡವಾಗಿದೆ. ದ್ವೀಪದಂತಾಗಿರುವ ಕೊಡಗಿನಲ್ಲಿ ವಿದ್ಯುತ್ ಕೂಡ ಇಲ್ಲದೆ ಕಗ್ಗತ್ತಲಲ್ಲಿ ಮುಳುಗಿದೆ.
ಮಡಿಕೇರಿ ನಗರದ ಬಹುತೇಕ ಬಡಾವಣೆಗಳಲ್ಲಿ ಗುಡ್ಡ ಕುಸಿತದಿಂದ ಮನೆಗಳು ನಾಶವಾಗಿವೆ. ಪ್ರಮುಖವಾಗಿ ಎತ್ತರದ ಪ್ರದೇಶವಾಗಿರುವ ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಸಾಲು ಸಾಲಾಗಿ ಮನೆಗಳು ಕುಸಿಯುತ್ತಿದ್ದು, ಗುಡ್ಡ ಸಹಿತ ಮಂಗಳೂರು ರಸ್ತೆಯನ್ನು ಆವರಿಸಿಕೊಂಡಿವೆ.
ಶುಕ್ರವಾರ ಬೆಳಗ್ಗೆ ಗಾಳಿಬೀಡು ಬಳಿಯ ಹೆಬ್ಬೆಟ್ಟಗೇರಿ ಗ್ರಾಮದ ಎನ್ನಂಡ ಕುಟುಂಬಕ್ಕೆ ಸೇರಿದ ವೃದ್ಧೆಯೊಬ್ಬರು ಭಾರೀ ಪ್ರಮಾಣದ ಗುಡ್ಡ ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.
ಸೇನೆ ಕಾರ್ಯಾಚರಣೆ
ಈಗಾಗಲೇ ಜಿಲ್ಲೆಗೆ ಆಗಮಿಸಿರುವ 80ಕ್ಕೂ ಹೆಚ್ಚಿನ ಸೈನಿಕರನ್ನು ಒಳಗೊಂಡ ತುಕುಡಿ ಮಕ್ಕಂದೂರಿನ ತಂತಿಪಾಲ, ಮೇಘತ್ತಾಳು ಭಾಗದಲ್ಲಿ ಸಮರೋಪಾದಿಯ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ಮಡಿಕೇರಿ ನಗರದ ಸನಿಹದಲ್ಲಿರುವ ದೇವಸ್ತೂರಿನಲ್ಲಿ ಹೊಳೆ ಉಕ್ಕಿ ಹರಿಯುತ್ತಿದ್ದರೆ, ಕಾಲೂರು, ಮುಕ್ಕೋಡ್ಲು ಭಾಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತದಿಂದ ಜನತೆ ಕಂಗಾಲಾಗಿದ್ದು, ಉಟ್ಟ ಬಟ್ಟೆಯಲ್ಲೆ ನೂರಾರು ಕುಟುಂಬಗಳು ಕುಸಿದ ಬರೆ, ಉಕ್ಕಿಹರಿಯುತ್ತಿರುವ ಕಿರುತೊರೆಗಳ ನಡುವೆ ಕಾಲ್ನಡಿಗೆಯಲ್ಲೆ ಗ್ರಾಮ ತೊರೆದಿದ್ದಾರೆ.
ಕಾಲೂರು ಮತ್ತು ಪ್ರವಾಸಿ ತಾಣ ಮಾಂದಲಪಟ್ಟಿಯ ನಡುವಿನ ಬಾರಿಬೆಳ್ಳಚ್ಚ ಎಂಬಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತಗಳಿಂದ 40 ಕುಟುಂಬದ ಇನ್ನೂರಕ್ಕೂ ಹೆಚ್ಚಿನ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
Discussion about this post