ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್ ಸಾಲು ಸಾಲು ಬಲಿ ಪಡೆಯುತ್ತಿರುವ ಸಂದರ್ಭದಲ್ಲಿ ಶುಚಿತ್ವ, ಆಹಾರ ಪದ್ದತಿಗೆ ಅತ್ಯಂತ ಮಹತ್ವ ಬಂದಿದ್ದು, ಪ್ರಮುಖವಾಗಿ ಭಾರತೀಯ ಸಂಸ್ಕೃತಿ ಹಾಗೂ ಆಚಾರ ವಿಚಾರಗಳು ಶ್ರೇಷ್ಠ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇಂತಹ ಸಾಲಿನಲ್ಲಿ ನಮ್ಮ ಆರ್ಯುವೇದ ಪದ್ದತಿಗೂ ಸಹ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯಬೇಕಾದ ಸಂದರ್ಭ ಇದಾಗಿದ್ದು, ಮಾರಕ ವೈರಸನ್ನು ಹೊಡೆದೋಡಿಸಲು ನಮ್ಮ ವೈದ್ಯ ಪದ್ದತಿಯನ್ನು ಬಳಸಿಕೊಳ್ಳಬೇಕಿದೆ.
ಇಂತಹ ಒಂದು ವಿಚಾರವನ್ನು ಆರ್ಯುವೇದ ಸಂಶೋಧಕ ಹಾಗೂ ಖ್ಯಾತ ಆರ್ಯುವೇದ ತಜ್ಞ ಭದ್ರಾವತಿ ಉದ್ಗೀಥ ಆರ್ಯುವೇದ ಚಿಕಿತ್ಸಾಲಯದ ಡಾ. ಸುದರ್ಶನ್ ಕೆ. ಆಚಾರ್ ಪ್ರಸ್ತಾಪ ಮಾಡಿದ್ದು, ಈ ವೀಡಿಯೋ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಮಾತನಾಡಿರುವ ವೈದ್ಯರು, ನಮ್ಮ ಇತಿಹಾಸವನ್ನೊಮ್ಮೆ ತಿರುವಿ ನೋಡಬೇಕಿದೆ. ನಮ್ಮ ನೆಲದಲ್ಲಿ ಆರ್ಯವೇದದ ಸಾವಿರಾರು ಸಂಶೋಧನೆಗಳು ನಡೆಸಿದ್ದು, ಕಂಡುಹಿಡಿಯಲಾಗಿರುವ ಔಷಧಿಗಳು ಯಶಸ್ವಿಯಾಗಿದೆ. ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾವನ್ನು ಮೂಲದಿಂದಲೇ ಹೊಡೆದೋಡಿಸುವ ಸಾಮರ್ಥ್ಯ ನಮ್ಮ ವೈದ್ಯ ಪದ್ದತಿಗೆ ಇದೆ ಎಂದಿದ್ದಾರೆ.
ಪ್ರಮುಖವಾಗಿ ಅರಿಶಿನ ನಮ್ಮ ಆರ್ಯುವೇದ ಪದ್ದತಿಯ ಮೂಲದಲ್ಲೇ ಇದೆ. ಆದರೆ, ಅದನ್ನು ವಿದೇಶಿಯರು ತಿಳಿಸಿದ ನಂತರ ನಾವು ಅದರ ಬಳಕೆಯ ಮಹತ್ವವನ್ನು ಅರಿತಿದ್ದೇವೆ. ಅದೇ ರೀತಿಯಲ್ಲಿ ಡೆಂಗ್ಯೂಗೂ ಸಹ ಪಪ್ಪಾಯವನ್ನು ಬಳಸಿ ಔಷಧಿ ಮಾಡಿದ್ದು ಈಗ ಇತಿಹಾಸ. ಈ ಹಿನ್ನೆಲೆಯಲ್ಲಿ ಇದರ ಮಹತ್ವವನ್ನು ಅರಿಯಬೇಕಾದ ಕಾಲ ಇದಾಗಿದೆ ಎಂದಿದ್ದಾರೆ.
ದೇಶದಲ್ಲಿ ಆರ್ಯುವೇದದಲ್ಲಿ ಆಳವಾಗಿ ಸಂಶೋಧನೆ ಮಾಡಿದ ತಜ್ಞರಿದ್ದಾರೆ, ವೈದ್ಯರಿದ್ದಾರೆ ಹಾಗೂ ಆರ್ಯುವೇದದ ಲ್ಯಾಬ್‌ಗಳಿವೆ. ಇವುಗಳನ್ನು ಬಳಸಿಕೊಂಡು ತುರ್ತು ಸಂಶೋಧನೆ ಮಾಡಬೇಕಾದ ಅಗತ್ಯವಿದ್ದು, ಆಯುಷ್ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕುರಿತಂತೆ ಗಂಭೀರ ಚಿಂತನೆ ನಡೆಸಿ, ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post