ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಿಜವಾಗಿ ದುಡಿಯುವ ಜೋಡೆತ್ತುಗಳಂತೆ. ಎಪ್ರಿಲ್ 18ರಂದು ಜೋಡೆತ್ತುಗಳೆಂದು ಯಾರೆಂದು ಜಿಲ್ಲೆಯ ಜನರು ಉತ್ತರ ಕೊಡುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಬೂಕನಕೆರೆಯಲ್ಲಿ ಮಾತನಾಡಿರುವ ಅವರು, ಯಶ್ ಮತ್ತು ದರ್ಶನ್ ನನ್ನ ಮಕ್ಕಳು ಅವರು ಯಾರೇನೇ ಬೆದರಿಕೆ ಹಾಕಿದರೂ ಪ್ರಚಾರ ಸಭೆಗಳಿಗೆ ಬಂದು ಪ್ರಚಾರ ಮಾಡಿ ನನ್ನನ್ನೇ ಬೆಂಬಲಿಸುತ್ತಾರೆ. ನಾನು ಯಾರ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎಂಬುದರ ಅರಿವು ನನಗಿದೆ. ಇಲ್ಲಿರುವ ಜನರು ದುಡ್ಡುಕೊಟ್ಟು ಕರೆತಂದವರಲ್ಲ. ಜಿಲ್ಲೆಯ ಜನರು ಸ್ವಾಭಿಮಾನಿಗಳು, ಏಕಾಂಗಿ ಹೋರಾಟ ನಡೆಸುತ್ತಿರುವ ನನ್ನ ಕೈಬಿಡಲ್ಲ ಎಂದರು.
ನನ್ನ ಹೆಸರಿರುವವರನ್ನೇ ಹುಡುಕಿ ಮೂವರನ್ನು ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಮೂವರಲ್ಲ ನೂರು ಜನ ಕಣದಲ್ಲಿ ನಿಂತರೂ ಪ್ರಜ್ಞಾವಂತ ಮತದಾರರು ತಮಗೆ ಬೇಕಾದವರನ್ನೇ ಆರಿಸುತ್ತಾರೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ರೈತ ಮುಖಂಡ ಅಂಗಡಿನಾಗರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಟಿ. ವೆಂಕಟೇಶ್ ಸುಮಲತಾ ಅವರ ಪರವಾಗಿ ಮತಯಾಚನೆ ಮಾಡಿದರು.
ರೋಡ್ ಷೋ ನೇತೃತ್ವವನ್ನು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಕೆ.ಆರ್. ರವೀಂದ್ರಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮೀ, ಬ್ಲಾಕ್ ಎಸ್’ಸಿ ಘಟಕದ ಅಧ್ಯಕ್ಷರಾದ ಶಿವಣ್ಣ, ರಾಜಯ್ಯ, ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ. ಮಹೇಶ್, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಸಹೋದರನ ಪುತ್ರ ಪಚ್ಚಿ, ಜಿಪಂ ಮಾಜಿ ಸದಸ್ಯೆ ಸರ್ವಮಂಗಳ, ಬಿಜೆಪಿ ಪಕ್ಷದ ತಾಪಂ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ಮುಖಂಡರಾದ ಬೋಳೇಗೌಡ, ಮಧುಸೂದನ್, ಅಡಿಕೆ ಸ್ವಾಮಿಗೌಡ ಸೇರಿದಂತೆ ನೂರಾರು ಜನರು ಸುಮಲತಾ ಅಂಬರೀಶ್ ಅವರ ರೋಡ್ ಷೋನಲ್ಲಿ ಭಾಗವಹಿಸಿದ್ದರು.
ಬೂಕನಕೆರೆ ಗ್ರಾಮ ದೇವತೆ ಆದಿಶಕ್ತಿ ಗೋಗಾಲಮ್ಮದೇವಿಯ ದೇವಸ್ಥಾನಕ್ಕೆ ಲ್ಲಿಕೆ ಭೇಟಿ ನೀಡಿದ್ದ ಸುಮಲತಾ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್ ಆನಂದೇಗೌಡ ಬಿಗಿಪೋಲಿಸ್ ಬಂದೋಬಸ್ಟ್ ಏರ್ಪಡಿಸಿದ್ದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕಣದಲ್ಲಿದ್ದರೂ ಪಕ್ಷೇತರ ಅಭ್ಯರ್ಥಿ, ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದುದು ಕಂಡು ಬಂತು.
Discussion about this post