1997-2000ನೇ ಇಸವಿ ದಿನಗಳಲ್ಲಿ ನಾನು ಚಾಮರಾಜನಗರದ ವಿಶ್ವಹಿಂದೂ ಪರಿಷತ್ ನ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿ, ಶಾಲೆಗೆ ಕೂಡ್ಲೂರು ಗ್ರಾಮದಿಂದ ಚಾಮರಾಜನಗರಕ್ಕೆ ಬಸ್ ನಲ್ಲಿಯೇ ಹೋಗಬೇಕು.
9.30ರ ಶಾಲೆಗೆ ಬೆಳಗ್ಗೆ 7.00 ಘಂಟೆಗೆ ನಮ್ಮೂರಿನ ಬಸ್ ಸ್ಟ್ಯಾಂಡ್ ಲಿ ನಿಲ್ಲಬೇಕು, 7 ಕಿಮೀ ದೂರದ ಶಾಲೆಗೆ 2 ಘಂಟೆ ಮೊದಲು ಬಿಡಬೇಕು. ಏಕೆಂದರೆ ಆಮೆಲೆ ಬಸ್ ಸರಿಯಾದ ಸಮಯಕ್ಕೆ ಇಲ್ಲ.
7.30ರ ಬಿಎಸ್‌ವಿ ಬಿಟ್ಟರೆ 9.30ರ ಮಾರುತಿ ಬಸ್ ದವರೆಗೆ ಯಾವುದೇ ಬಸ್ ಇಲ್ಲ. ತಮಿಳುನಾಡಿನಿಂದ ಬರುತ್ತಿದ್ದ ಮಾರುತಿ ಫುಲ್‌ರಶ್., ನಮ್ಮೂರಲ್ಲಿ ನಿಲ್ಲಿಸಿತ್ತಿದಿದ್ದೆ ಅಪರೂಪ. ಆದರಿಂದ ನಂಜನಗೂಡಿಗೆ ಆಫೀಸಿಗೆ ಹೋಗಬೇಕಿದ್ದ ಅಪ್ಪ ಮತ್ತು ನಾನು ಬಿಎಸ್‌ವಿ ಬಸ್ ನಿತ್ಯ ಕಾಯುವುದು ಅನಿವಾರ್ಯ.
ಕಾಯುವ ಸಮಯದಲ್ಲಿ ಅಪ್ಪ ಹೇಳುತ್ತಿದ್ದ ಕಥೆಗಳು ಮತ್ತು ಘಟನೆಗಳು ದೇಶದ ರಾಜಕೀಯ ಮತ್ತು ಪ್ರಗತಿ. ನಿತ್ಯ ಅವರು ಹೇಳುತ್ತಿದ್ದ ಎರಡು ಹೆಸರು ವಾಜಪೇಯಿ ಮತ್ತು ಅಡ್ವಾಣಿ. ಕರೆಂಟ್ ಸಂಪೂರ್ಣ ಇಲ್ಲದ ಗ್ರಾಮ, ಇದ್ದ ಟಿವಿ ತೋರುತ್ತಿದುದು ಚಂದನವೊಂದೆ, ನಂತರ ಪಕ್ಕದ ಮನೆಯ ಛತ್ರಿಯಾಕಾರದ ಡಿಶ್ ಗೆ ನಮ್ಮ ಮನೆಯ ಆಂಟೆನಕ್ಕೆ ಕಟ್ಟಿದ್ದ ಕೇಬಲ್ ರಿಮ್‌ನಿಂದ ಕ್ಯಾಚ್ ಆದ ಉದಯ ಟಿವಿ, ಮಧ್ಯಾಹ್ನ ಮನೆಗೆ ತಲುಪುತ್ತಿದ್ದ ವಾರ್ತಾ ಪತ್ರಿಕೆ ಇನ್ನು ಸುದ್ದಿ ತಿಳಿಯುವುದೆಲ್ಲಿ. ಅಪ್ಪ ಬಿಎಸ್‌ವಿ ಬಸ್ ನ ಸತತ ಮೂರು ಘಂಟೆಯ ಪ್ರಯಾಣದಲ್ಲಿ ಓದಿದ ವಿವಿಧ ಪತ್ರಿಕೆಗಳ ಸಾರಾಂಶ ನನಗೆ ಮರುದಿನ ಬಸ್ ಕಾಯುವ ಸಮಯದಲ್ಲಿ ಕಥೆಯಾಗಿ ಬರುತ್ತಿತ್ತು.
ಪ್ರತಿ ದಿನ ವಾಜಪೇಯಿ ಅವರ ಯೋಜನೆಗಳನ್ನು ಹೇಳಿ ಸರ್ಕಾರದ ನಿರ್ಧಾರಗಳನ್ನು ಹೇಳಿ ನನ್ನಲ್ಲಿ ವಿಷಯದ ಚಿಂತನೆ ಬಿತ್ತುತ್ತಿದ್ದರು. ವಾಜಪೇಯಿಯವರು ರಸ್ತೆ ಮಾಡಿಸುತ್ತಿದ್ದಾರೆ ನೋಡು ಸ್ವಲ್ಪ ವರ್ಷ ಎಷ್ಟು ಬೇಗ ನಾವು ಬೇರೆ ಊರಿಗೆ ಹೋಗಬಹುದು. ರಸ್ತೆ ಮಾಡಿದರೆ ಬಸ್ ಗಳು ಎಲ್ಲಾ ಕಡೆಗೂ ಹೋಗುತ್ತದೆ, ಲಾರಿಗಳು ಬರುತ್ತವೆ, ಲಾರಿಗಳು ಬಂದರೆ ಬೆಂಗಳೂರಿನಲ್ಲಿ ಸಿಗುವ ಎಲ್ಲಾ ವಸ್ತುಗಳು ಇಲ್ಲಿಯೂ ಸಿಗುತ್ತದೆ, ಡೆಲ್ಲಿಲಿ ಸಿರೋದು ಬೆಂಗಳೂರಿನಲ್ಲಿ ಸಿಗುತ್ತೆ. ಆಗ ಎಲ್ಲದರ ಬೆಲೆಯೂ ಕಡಿಮೆ ಆಗುತ್ತದೆ ಎಂದು ಹೇಳುತ್ತಿದ್ದರು.
ವಾಜಪೇಯಿಯವರು ಪ್ರೈವೇಟ್ ಕಂಪನಿಗಳಿಗೆ ವ್ಯವಹಾರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆಯಂತೆ ಕೊರಿಯರ್ ಅಂತೆ. ಪೋಸ್‌ಟ್ ತರಹ ಕೆಲಸ ಮಾಡುತ್ತದಂತೆ. ಇನ್ನು ಸುಮಾರು ಜನಕ್ಕೆ ಕೆಲಸ ಸಿಗುತ್ತೆ. ಮುಂದೆ ನೋಡು ನಮ್ಮ ದೇಶ ಹೆಂಗಾಗುತ್ತೆ ಅಂತ ಹೇಳೋರು.
ಅವರು ಹೇಳುವ ಪ್ರತಿ ಕಥೆ ನನನ್ನು 6-7ನೇ ತರಗತಿಯಲ್ಲೆ ವಾಜಪೇಯಿ ಅಭಿಮಾನಿಯಾಗಿ ಮಾಡಿತು. ಇವತ್ತು ಈ ಭವ್ಯ ಭಾರತದ ಅಭಿವೃದ್ಧಿ ಪಥ ನೋಡಿದರೆ ಅದರಲ್ಲಿ ಕಾಣುವುದು ವಾಜಪೇಯಿಯವರ ಚಿತ್ರ. ಇಂದು ಅವರ ಮರಣ ಇದೆಲ್ಲವನ್ನು ನೆನಪಿಸಿತು.
ವಾಜಪೇಯಿಯವರು ನನ್ನ ಮಾದರಿ ವ್ಯಕ್ತಿ ಮತ್ತು ರಾಜಕಾರಣಿ. ಅವರ ಅಗಲಿಕೆ ನಮ್ಮನ್ನು ಕಾಡಿದೆ ಆದರೆ ಅವರು ಹಾಕಿದ ಮಾರ್ಗದಲ್ಲಿ ದೇಶಸಾಗುತ್ತಿದೆ, ಈ ದೇಶದ ಪ್ರತಿ ಗ್ರಾಮದಲ್ಲೂ ಪ್ರತಿ ಮನದಲ್ಲೂ ರಾಮನಂತೆ ಅವರು ಅಮರರಾಗಿದ್ದಾರೆ.
– ಪುನೀತ್ ಜಿ. ಕೂಡ್ಲೂರು, ಮೈಸೂರು
Discussion about this post