ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ದಸರಾ-ಕನ್ನಡ ನಾಡಿನ ಹೆಮ್ಮೆಯ ನಾಡಹಬ್ಬ. ಈ ಉತ್ಸವಕ್ಕೆ ರಾಷ್ಟ್ರದಾದ್ಯಂತ ಮಾನ್ಯತೆಯಿದ್ದರೂ ಕರ್ನಾಟಕದಲ್ಲಿ ಕಂಡು ಬರುವ ಸಡಗರ, ಸಂಭ್ರಮ ಬೇರೆ ಕಡೆ ಕಾಣುವುದಿಲ್ಲ. ಈ ಉತ್ಸವದ ಮೂಲಕ ಪೌರಾಣಿಕ ಸಂಸ್ಕೃತಿ, ಧಾರ್ಮಿಕ ಸಹಿಷ್ಣುತೆ, ಸಾಮಾಜಿಕ ಸಮಾನತೆ ಹಾಗೂ ರಾಜನೈತಿಕ ಚತುರತೆಯ ಶಿಕ್ಷಣವನ್ನು ನಮ್ಮ ಪೂರ್ವಜರು ಕೊಡ ಮಾಡಿದ್ದಾರೆ.
ಮಳೆಗಾಲ ಕಳೆದು ಶರತ್ಕಾಲಕ್ಕೆ ಆಕಾಶ ಬಯಲಾಗುತ್ತದೆ. ಯುದ್ಧಕ್ಕೆ ಹೊರಡಲು ಇದು ಸೂಕ್ತ ಕಾಲ. ಯುದ್ಧಕ್ಕೆ ಹೊರಡುವುದೆಂದರೆ ಅದೊಂದು ದೊಡ್ಡ ಸಾಹಸಕ್ಕೆ ನಾಂದಿ. ಸೂಕ್ತ ಸಿದ್ಧತೆಯಿಲ್ಲದೆ ಹೋಗುವಂತಿಲ್ಲ. ಅಂತೆಯೇ ಸೈನ್ಯ ಜಮಾವಣೆ, ಅರ್ಥಾತ್ ಸಹಸ್ರಾರು ಯೋಧರ ಆಗಮನ. ಅವರ ಜೊತೆಗೆ ಅವರ ನಾಯಕರು. ಸೇನಾಪತಿಗಳು-ಸೇನೆಯ ಯೋಗಕ್ಷೇಮ ನೋಡಿಕೊಳ್ಳುವ ಸಿಬ್ಬಂದಿ; ಎಲ್ಲರೂ ಸೇರಿದಾಗ ಲಕ್ಷೋಪಲಕ್ಷ ಜನಸಂಖ್ಯೆ. ಹೀಗೆ ಸೇರಿದ ಯೋಧಜನ ತಮ್ಮ ತಮ್ಮ ಯೋಗ್ಯತೆಗಳನ್ನು ರಾಜನಿಗೆ ತೋರಿಸಿ ಜನರನ್ನು ಬೆರಗುಗೊಳಿಸಿ ರಾಜನ ಕೈಯಿಂದ ಬಹುಮಾನಗಳನ್ನು ಪಡೆಯುವುದು ಒಂದು ದೊಡ್ಡ ಕಾರ್ಯಕ್ರಮವೇ ಆಗುತ್ತಿತ್ತು. ಬಂದ ರಾಜರು ಸಾಮಂತರು ಮಹಾರಾಜನಿಗೆ ಕಪ್ಪಕಾಣಿಕೆಗಳನ್ನು ಒಪ್ಪಿಸುತ್ತಿದ್ದರು ರಾಜನು, ಅವನ ಪರಿವಾರದವರು ಈ ಅವಧಿಯಲ್ಲಿ ಪ್ರತಿನಿತ್ಯ ಒಂಬತ್ತು ರಾತ್ರಿಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಸೈನ್ಯಗಳ ಕವಾಯತು, ಆಟಪಾಠಗಳು, ನೃತ್ಯಗಳು ಹೀಗೆ – ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ ಎಲ್ಲರ ಕಣ್ಮನಗಳನ್ನು ಸೆಳೆಯುತ್ತಿತ್ತು. ಮುದ ನೀಡುತ್ತಿತ್ತು. ಇದರ ವೀಕ್ಷಣೆಗಾಗಿ ಒಂದು ಉನ್ನತವಾದ ಸುಂದರವಾದ ಮಂಟಪ ವಿಜಯನಗರದಲ್ಲಿ ಕಟ್ಟಲ್ಪಟಿತ್ತು. ಹಾಳುಹಂಪೆಯಲ್ಲಿ ಮೂಕ ಮಹಾನವಮಿ ದಿಬ್ಬಗಳೂ ಇದೆ.
ರಾಜ ಆ ಮಂಟಪದಲ್ಲಿ ಹೇಮಸಿಂಹಾಸನದಲ್ಲಿ ಮಂಡಿಸುತ್ತಿದ್ದ ಎಲ್ಲರಿಗೂ ಅವರ ಹಿರಿಮೆಗರಿಮೆ, ಅಧಿಕಾರ ಅಂತಸ್ತುಗಳಿಗೆ ತಕ್ಕಂತೆ ಆಸನಗಳನ್ನು ಕಾದಿರಿಸುತ್ತಿದ್ದರು. ಪ್ರತಿದಿನ ಪೂಜೆ ರಣಬಲಿಗಳು ಆದ ಮೇಲೆ ರಾಜನ ಮುಂದೆ ಪಟ್ಟದ ಆನೆ ಕುದುರೆಗಳು ಬಂದು ನಿಲ್ಲುತ್ತಿದ್ದವು. ಪುರೋಹಿತರು ಅವುಗಳನ್ನು ಪೂಜಿಸುತ್ತಿದ್ದರು. ಅವು ಸಾಲಂಕೃತವಾಗಿರುತ್ತಿದ್ದವು. ಕಡೆಯಲ್ಲಿ ರಾಣಿವಾಸದ ಸುಂದರಿಯರಿಂದ ಸುವರ್ಣ ಕಲಶದ ಆರತಿ ಮಷಾಲುಗಳು ಮಹಾಬೆಳಕು. ಅದೆಲ್ಲ ಒಂದು ಕಿನ್ನರಲೋಕದಂತೆ ಭಾಸವಾಗುತ್ತಿತ್ತು. ನವಮಿಯಂದು ಆಯುಧ ಪೂಜೆ ಮುಗಿಸಿ ದಶಮಿಯಂದು ಶಮಿಯನ್ನು ಪೂಜಿಸಿ ಆ ಗಿಡದ ಕೊಂಬೆಯೊಂದನ್ನು ಕತ್ತರಿಸಿ ಸೀಮೋಲ್ಲಂಘನ ಮಾಡುತ್ತಿದ್ದರು. ಅದು ಜೈತ್ರಯಾತ್ರೆಗೆ ನಾಂದಿ. ವಿಜಯನಗರ ಸಾಮ್ರಾಜ್ಯದ ಪತನವಾದ ಮೇಲೆ ಆ ಆಚರಣೆ ಅದೇ ರೀತಿಯಲ್ಲಿ ಅಷ್ಟು ವೈಭವದಿಂದ ಇರದಿದ್ದರೂ ಕರ್ನಾಟಕದ ನಾನಾ ಕಡೆಗೆ ಅನೇಕ ಸಂಸ್ಥಾನಗಳಲ್ಲಿ ಆಯಾ ಸಂಸ್ಥಾನಿಕರ ಯೋಗ್ಯತೆಗೆ ಅನುಗುಣವಾಗಿ ಪಾಳೆಯಪಟ್ಟುಗಳಲ್ಲೆಲ್ಲ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲು ಆರಂಭಿಸಿದರು.ಜಂಬೂ ಸವಾರಿ
ನವರಾತ್ರಿ ಸಮಯದಲ್ಲಿ ಮೈಸೂರು ಅರಮನೆಯಂತೂ ಲಕ್ಷಾಂತರ ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಬೇರೊಂದು ಲೋಕದ ವಿಸ್ಮಯವನ್ನೇ ಧರೆಗಿಳಿಸುತ್ತದೆ. ಅರಮನೆಯ ಮುಂದೆ ಮಲ್ಲಯುದ್ಧ, ಸಂಗೀತ ಕಛೇರಿ, ರಾಜರ ಒಡ್ಡೋಲಗ ಮುಂತಾದವುಗಳ ಸೊಗಸು. ಇವು ಪ್ರತಿದಿನದ ಏರ್ಪಾಟು. ವಿಜಯದಶಮಿಯ ದಿನ ಜಂಬೂಸವಾರಿ. ಅರಸರು ಪಟ್ಟದಾನೆ, ಪಟ್ಟದ ಕುದುರೆ, ಕಾಮಧೇನುಗಳಿಗೆ ಪೂಜೆಯನ್ನು ಸಲ್ಲಿಸಿ, ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಬರುತ್ತಿದ್ದರು. ಸೈನ್ಯಗಳ ಕವಾಯತು, ವಿವಿಧ ವಾಹನಗಳ ಸಾರೋಟು, ಕುದುರೆಯ ಮೇಲೆ ಸವಾರಿ ಮಾಡುತ್ತ ಇರುವ ಅಧಿಕಾರಿಗಳು ಇವುಗಳ ಶಿಸ್ತು ಅತ್ಯಪೂರ್ವ. ಈ ಮೆರವಣಿಗೆಯು ಬನ್ನಿಮಂಟಪಕ್ಕೆ ಹೋಗುತ್ತಿದ್ದರಿಂದ ಆ ಹೆಸರಿತ್ತು. ಆದರೆ ಯಾವಾಗಲೋ ಅದು ಜಂಬೂಸವಾರಿ ಆಯಿತು. ಇದಕ್ಕೆ ಕಾರಣ ಇಂಗ್ಲೀಷ್ ಭಾಷೆಯಲ್ಲಿ ‘Jumbo’ ಶಬ್ಧಕ್ಕೆ ಆನೆ ಎಂಬ ಅರ್ಥವಿದೆ.
ಮೆಸೂರು ಒಡೆಯರ ಕೆಂಪು ಬಾವುಟದಲ್ಲಿದ್ದ ಗಂಡಭೇರಂಡ ಪಕ್ಷಿಯು ಚಾಮುಂಡೇಶ್ವರಿಯ ಶಿವ ಮತ್ತು ವಿಷ್ಣು ಶಕ್ತಿಗಳ ಸಂಕೇತವಾಗಿದ್ದಿತು. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದಳು. ಆಗ ಆತನ ವಾಹನವಾದ ಮಹಿಷನ ತಲೆ ನೆಲಕ್ಕುರುಳಿಸಿತು. ಅದನ್ನು ಚಾಮುಂಡೇಶ್ವರಿ ವಾಹನವಾದ ಸಿಂಹ ಬಾಯಲ್ಲಿ ಕಚ್ಚಿತು. ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳನ್ನು ಸಂಹರಿಸಲು ವಿಷ್ಣು ನರಿಸಿಂಹಾವತಾರವನ್ನೆತ್ತಿದ. ನರಿಸಿಂಹನ ಉಗ್ರತೆಯನ್ನು ಲಕ್ಷ್ಮೀ ತಾಳಲಾರದಾದಳು. ಈಶ್ವರನು ಶರಭವತಾರ ಮಾಡಿ ನರಸಿಂಹನನ್ನು ಎದುರಿಸಿದ. ಆಗ ವಿಷ್ಣುವು ಶರಭಕ್ಕಿಂತಲೂ ಬಲಿಷ್ಠವಾದ ಗಂಡುಭೇರಂಡವಾದ. ಗಂಡುಭೇರಂಡವು ಮಹಾವಿಷ್ಣುವಿನ ಶಕ್ತಿ ಸ್ವರೂಪ. ಶರಭವು ವಿಜಾತಿಯ ಮಗವಾಗಿದ್ದು ಅದಕ್ಕೆ ಆನೆಯ ಮುಖ, ಸಿಂಹದ ಮೈಕಟ್ಟಿದೆ. ಈ ಮಗವನ್ನು ಯಾಳಿ ವ್ಯಾಳಿ ಎಂದೂ ಕರೆಯುತ್ತಾರೆ. ಗಂಡುಭೇರಂಡವು ವಿಷ್ಣುವಿನ ಶಕ್ತಿ ಸ್ವರೂಪವಾದದು. ಮೆಸೂರನ್ನು ಶಿವನಶಕ್ತಿ ಸ್ವರೂಪವಾದ ಯಾಳಿ ರಕ್ಷಿಸುತ್ತದೆ ಎಂಬ ನಂಬಿಕೆ ಇದ್ದೀತು. ಹೀಗೆ ಕೃತಜ್ಞತೆಯ ಕುರುಹ ಶಿವನ ಶಕ್ತಿ ವಿಷ್ಣು ಕೃಪಾಪೋಷಿತವೂ ಆದ ಮೆಸೂರು ಮೆರೆದಿತ್ತು ಎಂದು ಮೆಸೂರು ಬಾವುಟ ಸಂಕೇತಿಸುತ್ತಿತ್ತು. ಅಂತೆಯೇ ಸತ್ಯಮೇವೋದ್ದರಾಮ್ಯಹಂ ಎನ್ನುವ ಮಹಾವಾಕ್ಯದ ಧ್ಯೇಯ ಪಾಲನೆಗಾಗಿ ಮೈಸೂರು ದೊರೆಗಳು ತಮ್ಮ ಜೀವನವನ್ನು ಮುಡುಪಾಗಿಟ್ಟರು. ಒಟ್ಟಿನಲ್ಲಿ ದಸರಾಹಬ್ಬ ಹಳೇ ಬೇರು ಹೊಸ ಚಿಗುರು ಗಳಿಂದ ಕೂಡಿದ ಒಂದು ಸನಾತನ ಶಮೀವಕ್ಷ. ಅದರಲ್ಲೀಗ ವಿಕಾಸಪರವಾದ ಕೆಲಸವನ್ನು ಕಾಣುತ್ತೇವೆ.
ಇಂದು ರಾಜರ ಆಳ್ವಿಕೆಯ ಕಾಲದ ನವರಾತ್ರಿಯ ಸೊಗಡು, ವೈಭವ, ಉತ್ಸಾಹ ಇಲ್ಲವಾದರೂ ಮನೆಮನೆಗಳಲ್ಲಿ ನವರಾತ್ರಿಯ ಆಚರಣೆ ರೂಢಿಯಲ್ಲಿದೆ. ಹಿಂದಿನ ಕಾಲದಲ್ಲಿ ಈಗಿನಂತೆ ಮಕ್ಕಳಿಗೆ ನಾನಾರೀತಿಯ ಮನರಂಜನಾ ಸಾಧನಗಳು ಲಭ್ಯವಿಲ್ಲದ್ದರಿಂದ ಈ ಹಬ್ಬ ಅವರಿಗೆ ಅತ್ಯಂತ ಆನಂದದ ಕ್ಷಣಗಳಾಗಿರುತ್ತಿತ್ತು. ಆದರೆ ಇಂದು ಕಂಪ್ಯೂಟರ್, ಟಿವಿಯಂತಹ ಮನರಂಜನಾ ಸಾಧನಗಳಿಂದಾಗಿ ಕೂಪ ಮಂಡೂಕಗಳAತಾಗಿರುವ ಎಳೆಯರಲ್ಲಿ ಈ ಹಬ್ಬದ ಆಚರಣೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ.ಗೊಂಬೆ ಪೂಜೆ
ನವರಾತ್ರಿಯು ಹಿರಿಯರಿಗೆ ದೇವಿ ಆರಾಧನೆಯ ಹಬ್ಬವಾದರೆ, ಕಿರಿಯರಿಗೆ ಬೊಂಬೆ ಹಬ್ಬ, ಮಕ್ಕಳಿಗೆ ಬೊಂಬೆಗಳೆಂದರೆ ತುಂಬಾ ಪ್ರೀತಿ. ಇದನ್ನು ತಿಳಿದ ನಮ್ಮ ಪೂರ್ವಿಕರು ಮಕ್ಕಳಿಗೋಸ್ಕರ ಈ ಹಬ್ಬದಲ್ಲಿ ಬೊಂಬೆಗಳನ್ನು ಜೋಡಿಸುವ ಪದ್ಧತಿ ಆಚರಣೆಗೆ ತಂದರು.
ಪಟ್ಟದ ಗೊಂಬೆಯನ್ನು ಸಾಮಾನ್ಯವಾಗಿ ಕಡೆಯಲ್ಪಟ್ಟು ನೋಡಲು ನಯನ ಮನೋಹರವಾಗಿರುತ್ತದೆ. ಈ ಗಂಡು ಹೆಣ್ಣಿನ ಪಟ್ಟದ ಬೊಂಬೆಗೆ ದಿನಕ್ಕೊಂದು ಬಗೆಯ ವಸ್ತ್ರ, ಸೀರೆಗಳನ್ನುಡಿಸಿ ಅಲಂಕರಿಸುವುದಿದೆ. ಈ ಪಟ್ಟದ ಗೊಂಬೆ ಲಕ್ಷ್ಮೀನಾರಾಯಣ ಸ್ವರೂಪ ಎಂದೂ ಪೂಜಿಸಲಾಗುತ್ತದೆ.
ಮಕ್ಕಳು ಈ ಹಬ್ಬದಲ್ಲಿ ಬೊಂಬೆ ಇಟ್ಟು ಸಂತೋಷ ಪಡಲೆಂದೇ ಶಾಲೆಗಳಿಗೆ ನವರಾತ್ರಿಯಲ್ಲಿ ರಜೆಗಳಿರುತ್ತದೆ. ಮಕ್ಕಳು ರಾಗ ಹಾಕಿ ಪೈರು ಬೆಳೆಸಿ ಉದ್ಯಾನವನ, ಪ್ರಾಣಿ ಸಂಗ್ರಹಾಲಯ ಮೊದಲಾದವನ್ನು ಮಾಡಲು ಸುಲಭವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸುತ್ತಾರೆ. ಈ ಹಬ್ಬ ಮಕ್ಕಳಿಗೆ ತಮ್ಮ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಸದಾವಕಾಶ ಒದಗಿಸುತ್ತದೆ. ಇಂತಹ ಬೊಂಬೆ ಪ್ರದರ್ಶನದಿಂದ ಮಕ್ಕಳಿಗೆ ಮಾಡಿ ಕಲಿ ಮತ್ತು ನೋಡಿ ಕಲಿಯಲು ಆಸ್ಪದ ಸಿಗುತ್ತದೆ. ನಾವು ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ತಾತ್ಸಾರ ಮಾಡದೆ ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಇತಿಹಾಸ ಪುರಾಣಗಳ ಪರಿಚಯಿಸಿದಾಗ ಮಾತ್ರ ಅವರು ಅದನ್ನು ಗೌರವಿಸಲು ಸಾಧ್ಯ.
ಈ ಆಧುನಿಕ ಯುಗದಲ್ಲಿ ಗೊಂಬೆ ಕೂರಿಸುವ ಪದ್ಧತಿ ತೀರ ಯಾಂತ್ರಿಕವಾಗಿ ನಡೆಯುತ್ತಿದೆ. ಹೀಗಿರುವಾಗ ಗೊಂಬೆ ಜೋಡಿಸುವ ಈ ಕ್ರಿಯೆಯನ್ನು ಕಲಾತ್ಮಕವಾಗಿ, ನಮ್ಮ ಸಂಸ್ಕೃತಿಯನ್ನು ಹೊರಹೊಮ್ಮಿಸುವ ನಮ್ಮ ಬೇರುಗಳನ್ನು ನೆನಪಿಸುವ ವಿಭಿನ್ನ ವಿಷಯಗಳನ್ನು ಆರಿಸಿಕೊಂಡು ಅದಕ್ಕನುಗುಣವಾಗಿ ಗೊಂಬೆಗಳನ್ನು ಜೋಡಿಸುವ ಕೆಲವರಾದರೂ ಇದ್ದಾರೆ ಎನ್ನುವುದು ನಿಜಕ್ಕೂ ಸಂತಸದ ಸಂಗತಿ.ವಿಜಯನಗರದ ದಸರಾ ಕಾಲದಲ್ಲಿ ನಡೆಯುತ್ತಿದ್ದ ಗೊಂಬೆ ಪೂಜೆಯ ಆಚರಣೆಯು ಇಂದಿಗೂ ಉಳಿದು ಬಂದಿದ್ದು ಮೈಸೂರು ದಸರಾದ ಒಂದು ಅಂಗವಾಗಿದೆ. ಮೈಸೂರು ಅರಮನೆಯೊಳಗೆ ಗೊಂಬೆ ಕೂರಿಸಲೆಂದೇ ಗೊಂಬೆ ತೊಟ್ಟಿಯನ್ನು ನಿರ್ಮಿಸಲಾಗಿದ್ದು, ವಿವಿಧ ರೀತಿಯ, ವಿಶೇಷವಾಗಿ ಅಲಂಕರಿಸಲ್ಪಟ್ಟು ಶ್ರೀಮಂತ ಗೊಂಬೆಗಳನ್ನು ಇಟ್ಟು ಪೂಜಿಸಲಾಗುತ್ತದೆ. ದಸರಾದ ಹತ್ತು ದಿನಗಳಲ್ಲೂ ಸಾರ್ವಜನಿಕರಿಗೆ ಪ್ರವೇಶಾವಕಾಶವಿರುತ್ತದೆ. ಇದನ್ನು ಕಂಡು ಪ್ರಭಾವಗೊಂಡ ನಂತರ ಹೈದರಾಬಾದಿನ ಸಾಲಾರ್‌ಜಂಗ್ ಮ್ಯೂಸಿಯಂನಲ್ಲಿ ಬಂದು ಬೊಂಬೆಗಳು ವಿಭಾಗವೇ ಪ್ರಾರಂಭವಾಯಿತಂತೆ.
ಭಾರತಕ್ಕೆ ಸ್ವಾತಂತ್ರ ದೊರೆತ ಮೇಲೆ ದೇಶೀಯ ಸಂಸ್ಥಾನಗಳ ರಾಜರುಗಳು ಆಳ್ವಿಕೆ ಕೊನೆಗೊಂಡಿತು. ಆದರೆ ಕರ್ನಾಟಕದಲ್ಲಿ ದಸರಾ ಆಚರಣೆಯು ನಿಂತು ಹೋಗದೆ ಬದಲಾದ ರೀತಿಯಲ್ಲಾದರೂ ಮುಂದುವರೆಯಿತು. ಈಗ ಸಾರ್ವಜನಿಕ ದರ್ಬಾರ್ ಇಲ್ಲ. ಜಂಬೂ ಸವಾರಿಯ ಮೆರವಣಿಗೆ ಮುಂದುವರೆದಿದೆ. ಅಲಂಕೃತ ಆನೆಯ ಹೊತ್ತ ಬಂಗಾರದ ಅಂಬಾರಿಯಲ್ಲಿ ದೇವಿ ಚಾಮುಂಡೇಶ್ವರಿ ಕುಳಿತಿರುತ್ತಾಳೆ. ಬನ್ನಿ ಮಂಟಪದಲ್ಲಿ ನಡೆಯುವ ಬಾಣಬಿರುಸುಗಳ ಪ್ರದರ್ಶನ. ಪಂಜಿನ ಕವಾಯತು, ಪೋಲೀಸ್ ಬ್ಯಾಂಡ್ ಹಾಗೂ ಜಂಬೂಸವಾರಿಯ ಮಾರ್ಗದಲ್ಲಿ ನಡೆಯುವ ವಿವಿಧ ವಿನೋದಾವಳಿ, ಜಾನಪದ ನತ್ಯ ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಪ್ರಗತಿ ಸೂಚಕ ಸ್ತಬ್ದ ಚಿತ್ರಗಳು ಮೆರವಣಿಗೆ ಇಂದಿನ ದಸರಾದ ಪ್ರಮುಖ ಆಕರ್ಷಣೆಯಾಗಿದೆ.
ಮಹಾನವಮಿಯಂದು ಹಿರಿಯರು ಆಯುಧ ಪೂಜೆಯ ದಿನ ಎಂದು ಗುರುತಿಸಲ್ಪಟ್ಟಿದ್ದು ಸಾಂಕೇತಿಕ. ದೊರೆಗಳು ಕತ್ತಿ, ಗುರಾಣಿ, ಶೂಲ ಮೊದಲಾದವುಕ್ಕೂ, ಬ್ರಾಹ್ಮಣರು, ಲೇಖನಿ, ಗ್ರಂಥಗಳಿಗೂ, ಸಂಗೀತಕಾರರು ವೀಣೆ, ತಂಬೂರಿ, ಕೊಳಲು ಮುಂತಾದವುಗಳಿಗೂ, ವೈಶ್ಯರು ತಕ್ಕಡಿ, ಬೊಟ್ಟು, ಸೇರು, ಪಾವುಗಳಿಗೂ, ಶೂದ್ರಾದಿಗಳು ತಮಗುಚಿತವಾದ ಉಪಕರಣಗಳಿಗೂ, ರೈತ ನೇಗಿಲು, ಕುಡುಗೋಲಿಗೂ, ಕ್ಷೌರಿಕ ಕತ್ತಿಗೂ, ಗಾಣಿಗ ಎಣ್ಣೆ ಯಂತ್ರಕ್ಕೂ, ಕುಂಬಾರ ಚಕ್ರಕ್ಕೂ, ಚಮ್ಮಾರ, ನೇಕಾರ ಹೀಗೆ ಎಲ್ಲಾ ವೃತ್ತಿಗಳವರೂ ತಂತಮ್ಮ ಕಸುಬುಗಳ ಉಪಕರಣಗಳನ್ನು ದೇವಸ್ಥಾನವೆಂದು ಜೀವನಾಧಾರವೆಂದು ಪೂಜಿಸುವ ಸರ್ವಮಾನ್ಯ ಹಬ್ಬ ಈ ಮಹಾನವಮಿ. ವೃತ್ತಿ ಸಾಮರಸ್ಯ, ಕಾಯಕದಿಂದಲೇ ಸಮರಸ ಬದುಕು ಎಂಬ ಕರ್ಮಯೋಗ ಪ್ರಾಶಸ್ತ್ಯ ಉದ್ಯೋಗದಿಂದಲೇ ರಾಷ್ಟ್ರಾಭಿವದ್ಧಿ ಎಂಬ ಸೂತ್ರದ ಹಿರಿಮೆ, ಅದರಲ್ಲೇ ವ್ಯಕ್ತಿಯ ಪರಿಪೂರ್ಣತೆ, ಸಮಾಜ ಸ್ವಾಸ್ಥ. ಪ್ರಗತಿ ಸಾಧ್ಯ ಎಂಬ ಮಹೋನ್ನತ ಸಂದೇಶದ ಹಬ್ಬ ಈ ಮಹಾನವಮಿ. ಸೈನಿಕರಿಗೆ ಫಿರಂಗಿಗಳಿಗೆ, ವಿಮಾನಗಳಿಗೆ, ರಾಷ್ಟ್ರರಕ್ಷಕರಿಗೆ ಗೌರವ ಸಲ್ಲಿಸಬೇಕಾದದ್ದು ಈ ದಿನ.
ಈ ಮಹಾನವಮಿ, ದಾನ ಧರ್ಮದ ದಿನ. ಗುರುಗಳಿಗೆ, ಮಠಗಳಿಗೆ, ಹಿರಿಯರಿಗೆ ಉಡುಗೊರೆ ಸಲ್ಲುತ್ತಿದ್ದ ದಿನ. ಅಂದು ಕೊಟ್ಟಿದ್ದು ಬೆಳೆಯುತ್ತದೆ ಎಂಬ ಭಾವದಿಂದ 9 ಹತ್ತಾಗುವುದು. ಆರೋಹಣ ಹೊಂದುವ ಪರ್ವಕಾಲ ಅಲ್ಲವೇ? ಕೊಟ್ಟವನಿಗೆ, ಪಡೆದವನಿಗೆ ಇಬ್ಬರಿಗೂ ಸಮದ್ಧಿ.ವಿಜಯದಶಮಿ ಹಿನ್ನೆಲೆ-ವಿಶೇಷ
ರಾಷ್ಟ್ರದ ಹೊರವೈರಿಗಳ ದಮನಕ್ಕೆ ದೊರೆಗಳು ದಿಗ್ವಿಜಯಕ್ಕೆ ಹೊರಡುವ ದಿನ. ಅಂದು ಶಮೀವಕ್ಷ, ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಬಲಿಕೊಟ್ಟು ಮುಂದಡಿಯಿಡುತ್ತಿದ್ದ ಆಚರಣೆ ಇತ್ತು. ವಿಜಯದಶಮಿ ಎಂಬುದನ್ನು ಹಿರಿಯರು ವಿಜಯದ+ಶಮೀ ಎಂದೆನ್ನುತ್ತಾರೆ. ಶಮೀ ಎಂದರೆ ಶಾಂತಿಕಾರಕ, ಶಮನ ಮಾಡುವುದು, ಸಾಮರಸ್ಯ ಕೊಡುವುದು, ಉಲ್ಬಣಗಳ ಅಧಿವ್ಯಾಧಿ, ಕೋಲಾಹಲ, ಚಳವಳಿ, ರಕ್ತಪಾತ, ಉತ್ಪಾತಗಳನ್ನು ಶಮನ ಮಾಡುವುದು ಎಂಬ ಸಂಕೇತ ಈ ಬನ್ನಿ ಚಿಗುರು, ಎದುರು ಬಂದವರನ್ನು ಬನ್ನಿ ಎಂದು ಕರೆಯುವ ಕಳಕಳಿಯ ಸಂಕೇತ. ಬನ್ನಿ ಮರ ಚಿಗುಟು, ಕೊಡಲಿಗೆ, ಕತ್ತರಿಗೆ, ಗರಗಸಕ್ಕೆ ಸುಲಭವಾಗಿ ಬಗ್ಗುವುದಿಲ್ಲ, ಹೋಮದ ಸೌಟುಗಳನ್ನು ಇದರಿಂದ ಮಾಡುತ್ತಾರೆ.
ಅಂತರ್ಬಹಿಶತೃಗಳ ದಮನದ ಸಂಕೇತ ಇದು. ಶಾಂತಿ ಸ್ಥಾಪನೆಗೆ ಸರ್ಕಾರ ಪಣತೊಡಬೇಕಾದ ದಿನ ಇದು. ಬನ್ನಿಯನ್ನು ಕೂಡಿಸಿ ಬಾಳೆಯನ್ನು ಕಡಿಯುವುದು ಬರೀ ಸಂಕೇತ. ಕಡಿಯಬೇಕಾದದ್ದು ನಕ್ಸಲ್, ಉಲ್ಫಾ, ಸ್ವದೇಶಿ-ವಿದೇಶಿ ಉಗ್ರರ ಅಟ್ಟಹಾಸ.
ಮಹಾಭಾರತದಲ್ಲಿ ಪಾಂಡವರು ವಿರಾಟನಗರಿಯನ್ನು ಪ್ರವೇಶಿಸಿದ್ದು, ದುರ್ಗಾಷ್ಟಮಿಯೆಂದು. ಆಯುಧಗಳನ್ನು ಊರ ಸ್ಮಶಾನದ ಬನ್ನಿ ಮರದ ಮೇಲೆ ಕಟ್ಟಿ, ಮೆರೆಸಿ, ಪೂಜಿಸಿ, ಊರಿಗೆ ಛದ್ಮದಲ್ಲಿ ಹೊರಟ ವರ್ಣನೆ ದುರ್ಗಾಸ್ತುತಿ ಸಮೇತ ಇಲ್ಲಿದೆ. ಪಾಂಡವರಿಗೆ ವಿಜಯ ಪ್ರಾಪ್ತಿಯಾದದ್ದು ಈ ವಿಜಯ ದಶಮಿಯಂದೇ, ಎಷ್ಟು ಹಳೆಯ ಹಬ್ಬ! ಅಂತೆಯೇ ಹಿಂದೂ ಅಜ್ಞಾತವಾಸ ಮುಗಿದು, ರಾಮರಾಜ್ಯ, ಧರ್ಮರಾಜ್ಯ ಸಂಕಲ್ಪಕ್ಕೆ ಎಲ್ಲರೂ ಕಟಿಬದ್ಧರಾಗಬೇಕಾದ ಆಚರಣೆ ಇದು.
ಮಹಿಷಾಸುರ ಮರ್ದಿನಿಯ ಆರಾಧನೆಯ ಹಬ್ಬವಾಗಿಯೂ ಪ್ರಸಿದ್ಧ. ಮಹಿಷ (ಎಮ್ಮೆಯ ಮುಖವಾಡದ) ರಾಕ್ಷಸನನ್ನು ಅವರ ಸೇನಾಪತಿ, ರಕ್ತಬೀಜಾಸುರನೊಡನೆ ಸಕಲ ದೇವತಾ ಸಂಪನ್ನೆಯಾದ ದುರ್ಗಾದೇವಿ ಸಂಹರಿಸಿದ್ದು ಈ ಪರ್ವಕಾಲದಲ್ಲಿಯೇ.ಈ ಮಹಿಷಿ ಮುಖವಾಡದ ಆದಿ ಮಹಿಷಿ ಯಾರು? ಅವರ ಹೆಸರೇನು? ಎಲ್ಲಿಯವನು? ಎಂಬ ಕುತೂಹಲದ ಪ್ರಶ್ನೆಗೆ ಶ್ರೀ ವಾಲ್ಮೀಕಿ ರಾಮಾಯಣದ (ಕಿಷ್ಕಿಂಧಾ ಕಾಂಡ) ದಲ್ಲಿ ಉತ್ತರವಿದೆ. ಚಾಮುಂಡೇಶ್ವರಿ ಮೈಸೂರಿನವಳು ಎಂದ ಮೇಲೆ, ಮಹಿಷನು ಮೈಸೂರಿನವನೆ, ಮಹಿಷೂರ ದೊರೆಗಳು. ಮಹೀಸಾರ ಬ್ರಾಹ್ಮಣರು ಇದ್ದೂ ಈ ಊರಿಗೆ ಮಹಿಷೂರು ಎಂಬ ಹೆಸರು ಆದದ್ದು ಇತಿಹಾಸ.
ಮಾನವನು ಈ ಪ್ರಪಂಚಕ್ಕಿಳಿಯುವಾಗ ಕಾಣುವ ಮೊದಲು ಮುಖವೇ ತಾಯಿಯದು. ಮಗುವಿನ ಬಾಯಿಂದ ಹೊರಡುವ ಮೊದಲ ಶಬ್ದವೇ ಅಮ್ಮಾ. ತಾಯಿಯೊಂದಿಗೆ ಯಾರಿಗೂ ಲಜ್ಜೆ, ದಾಕ್ಷಿಣ್ಯಗಳಿಲ್ಲ. ನೊಂದಾಗ, ಹಸಿದಾಗ, ದುಃಖಿತನಾದಾಗ, ಸಂತಸಪಟ್ಟಾಗ ಎಲ್ಲ ಸಂದರ್ಭಗಳಲ್ಲೂ ಹೊರಹೊಮ್ಮುವ ನುಡಿಯೇ ಅಮ್ಮಾ. ಮಾತೆಯ ಮೂಲಕ ಪ್ರಪಂಚವನ್ನು ಕಾಣುವಂತೆ ಕೊನೆಗೆ ಪ್ರಕೃತಿ ಮಾತೆಯಲ್ಲೇ ಐಕ್ಯವಾಗುತ್ತೇವೆ. ಅದಕ್ಕೆ ಹುಟ್ಟಿದ ನಾಣ್ಣುಡಿ ಮಾತೃದೇವೋ ಭವ. ಇಂತಹ ವಾತ್ಸಲ್ಯಮಯಿಯನ್ನು ವರ್ಷದಲ್ಲಿ ಒಂಭತ್ತು ದಿನ ಆರಾಧಿಸುವ ರೂಢಿ. ನವಮಾಸ ಧರಿಸಿದವಳಿಗೆ ನವರಾತ್ರಿಯ ಆರಾಧನೆಯಾದರೂ ಬೇಡವೇ. ಅದೂ ಅವರವರ ಭಾವಕ್ಕೆ ತಕ್ಕಂತಹ, ವಿಭಿನ್ನ ರೂಪ, ರಸ, ಗಂಧ, ತತ್ವ ಸಿದ್ಧಾಂತಗಳ ಸಹಿತವಾಗಿ.ನಾಡಿನ ಜನರನ್ನು ಸಾಮಾಜಿಕವಾಗಿ ಧಾರ್ಮಿಕವಾಗಿ ಒಂದುಗೂಡಿಸುವ ಈ ನಾಡಹಬ್ಬವನ್ನು ಉಳಿಸಿ, ಬೆಳೆಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post