ಭದ್ರಾವತಿ: ವ್ಯಕ್ತಿಯ ಮರಣಾ ನಂತರ ದೇಹದ ಅಂಗಾಂಗ ದಾನ ಮಾಡುವುದು ನಿಜಕ್ಕೂ ಒಂದು ಮಹಾನ್ ಸೇವಾಕಾರ್ಯ ಎಂದು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ನಿರೀಕ್ಷಕ ಡಾ.ಬಿ. ಶ್ರೀನಿವಾಸ್ ಅಭಿಪ್ರಾಯವ್ಯಕ್ತಪಡಿಸಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಹಾಗೂ ಭದ್ರಾವತಿ ನ್ಯೂಟೌನ್ ಮೇರಿ ಇಮ್ಮಾಕ್ಯುಲೇಟ್ ಚರ್ಚ್ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಹಾಗೂ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿಯ ನಿಧನದ ನಂತರ ದೇಹದ ಅಂಗಾಂಗಗಳನ್ನು ದಾನ ಮಾಡುವುದರಿಂದ ಬದುಕಿರುವ ವ್ಯಕ್ತಿಗಳಲ್ಲಿ ಅಗತ್ಯವಿರುವವರು ಅಂಗಾಂಗ ವೈಫಲ್ಯದಿಂದ ಬಳಲುವುದು ತಪ್ಪುತ್ತದೆ ಎಂದರು.
ಸಮಾಜದಲ್ಲಿ ದೇಹದಾನ, ಅಗಾಂಗಗಳ ದಾನ ಹಾಗೂ ರಕ್ತದಾನದ ಕುರಿತು ಹಲವು ಮೂಢನಂಬಿಕೆಗಳಿವೆ. ರಕ್ತ ಮತು ದೇಹದ ಅಗಾಂಗಗಳನ್ನು ಪ್ರಕೃತಿಕವಾಗಿ ಮರು ಸೃಷ್ಠಿ ಅಥವಾ ಬೆಳವಣಿಗೆ ಅಸಾಧ್ಯವಾಗಿದೆ. ಈ ಕಾರಣ ಪ್ರತಿಯೊಬ್ಬ ವ್ಯಕ್ತಿಯು ನಿಧನದ ನಂತರ ದೇಹದಾನ ಮಾಡುವುದರಿಂದ ಮಹಾನ್ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದುಕೊಳ್ಳಬೇಕು ಎಂದರು.
ಇದೇ ರೀತಿ, ರಕ್ತದಾನ ಮಾಡುವುದೂ ಸಹ ಅತ್ಯಂತ ಪವಿತ್ರ ಸೇವಾ ಕಾರ್ಯವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸುವ ಕಾರ್ಖಾನೆ ಇನ್ನು ಜಗತ್ತಿನಲ್ಲಿ ಎಲ್ಲೂ ಇಲ್ಲ. ಹೀಗಿರುವಾಗ, ಜೀವ ಉಳಿಸುವ ಶಕ್ತಿ ಹೊಂದಿರುವ ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ರಕ್ತದಾನ ಮಾಡಲು ಮುಂದಾಗಬೇಕು. ಹನಿ ರಕ್ತದಿಂದ ಜೀವ ಉಳಿಸುವ ಶಕ್ತಿ ಇದೆ ಎಂದಮೇಲೆ ಆರೋಗ್ಯವಂತ ವ್ಯಕ್ತಿ ಪ್ರತಿ 56 ದಿನಗಳಿಗೊಮ್ಮೆ ರಕ್ತದಾನ ಮಾಡುವುದರಲ್ಲಿ ಯಾವ ಆತಂಕಗಳನ್ನು ಇಟ್ಟುಕೊಳ್ಳಬೇಕಾಗಿಲ್ಲ ಎಂದರು.
ಶಿಬಿರದಲ್ಲಿ ಧರ್ಮಗುರು ವಿಲಿಯಂ ವಿನ್ನಿಫ್ರೆಡ್, ಸ್ನೇಹಜೀವಿ ಉಮೇಶ್, ಡಾ.ಚಂದ್ರಲೇಖ, ಡಾ.ರಾಜೇಶ್, ಡಾ.ಆರತಿ, ಡಾ.ನಿವೇದಿತಾ, ಡಾ.ದಿವಾಕರ್ ಮೊದಲಾದವರು ಭಾಗವಹಿಸಿದ್ದರು.
Discussion about this post