ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಪ್ರಕಟಿಸಿರುವ 2023-24ನೇ ಆರ್ಥಿಕ ವರ್ಷದ 14418 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಸಲಹಾ ಹಾಗೂ ಪ್ರಗತಿ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕರುಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಬಾರ್ಡ್ ಹೊರತಂದಿರುವ ಧಾರವಾಡ ಜಿಲ್ಲಾ ಆರ್ಥಿಕ ವರ್ಷದ 14418 ಕೋಟಿ ರೂ.ಗಳ ಸಾಲ ಯೋಜನೆಯಲ್ಲಿ ಬೆಳೆ ಸಾಲಕ್ಕೆ 3820 ಕೋಟಿ ರೂ. ಅವಧಿ ಸಾಲ 1118 ಕೋಟಿ ರೂ. ಕೃಷಿ ಸಂಪನ್ಮೂಲ ಕ್ಷೇತ್ರಕ್ಕೆ 3116 ಕೋಟಿ ರೂ. ಆಹಾರ ಸಂಸ್ಕರಣೆ ಹಾಗೂ ಇತರೆ ಕ್ಷೇತ್ರಕ್ಕೆ 9938 ಕೋಟಿ ಹಾಗೂ ಸಣ್ಣ ಅತೀಸಣ್ಣ ಕೈಗಾರಿಕೆ ಕ್ಷೇತ್ರಕ್ಕೆ 5893 ಕೋಟಿ ರೂ., ರಫ್ತು, ಶಿಕ್ಷಣ, ವಸತಿ ಕ್ಷೇತ್ರ ಸೇರಿದಂತೆ ಒಟ್ಟು 14418 ಕೋಟಿ ರೂ. ಸಾಲ 2023-24 ಕ್ಕೆ ಕ್ಷಮತೆ ವಾರ್ಷಿಕ ಸಾಲ ಯೋಜನೆ ನಬಾರ್ಡ್ ರೂಪಿಸಿದೆ.

ಆರ್ಥಿಕ ನೆರವಿನ ಯೋಜನೆಗಳಿಗೆ ಬ್ಯಾಂಕ್‍ಗಳು ವಿಳಂಬ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಜಿಲ್ಲಾ ಲೀಡ್‍ಬ್ಯಾಂಕ್ ಮುಖ್ಯ ವ್ಯವಸ್ಥಾಪಕರ ಮೂಲಕ ಬ್ಯಾಂಕ್ ಶಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Also read: ಧಾರವಾಡ: ಮಂಗಸೂಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಕಾಮಗಾರಿಗೆ ಚಾಲನೆ
ಜಿಲ್ಲಾ ಲೀಡ್‍ಬ್ಯಾಂಕ್ ವ್ಯವಸ್ಥಾಪಕರಾದ ಪ್ರಭುದೇವ ಅವರು ಈ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
2021-22 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಸೆಪ್ಟೆಂಬರ್ ಅಂತ್ಯಕ್ಕೆ ಪ್ರಗತಿಯನ್ನು ತಿಳಿಸಲಾಯಿತು. ಒಟ್ಟು 8100 ಕೋಟಿಗಳ ಆರ್ಥಿಕ ಸಾಧನೆ ಮಾಡಲಾಗಿದೆ. ವಾಣಿಜ್ಯ ಬ್ಯಾಂಕ್‍ಗಳು. ಶೇ.95, ಕೆವಿಜಿ ಬ್ಯಾಂಕ್ ಶೇ.86, ಕೆಸಿಸಿ ಬ್ಯಾಂಕ್ ಶೇ.80, ಕೆ.ಎಸ್.ಕಾರ್ಡ್ ಶೇ.64 ರಷ್ಟು ಹಾಗೂ ಕೆಎಸ್‍ಎಫ್‍ಸಿ ಕೇವಲ ಶೇ.4 ರಷ್ಟು ಸಾಧನೆ ಮಾಡಿವೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ಜಿಲ್ಲೆಯಲ್ಲಿ ಸೆಪ್ಟೆಂಬರ 2022 ರ ಅಂತ್ಯಕ್ಕೆ ದುರ್ಬಲ ವರ್ಗದವರಿಗೆ ಒಟ್ಟು ರೂ. 3952.75 ಕೋಟಿ ಸಾಲ ವಿತರಣೆ ಆಗಿರುತ್ತದೆ. ಮತ್ತು ಮಹಿಳೆಯರಿಗೆ ರೂ. 3423.69 ಕೋಟಿ ಸಾಲವನ್ನು ವಿತರಿಸಲಾಗಿದೆ. ಹಾಗೂ ಅಲ್ಪ ಸಂಖ್ಯಾತರಿಗೆ ರೂ. 1280.13 ಕೋಟಿ ಸಾಲ ವಿತರಣೆ ಆಗಿರುತ್ತದೆ.

ಪ್ರಧಾನಮಂತ್ರಿ ವಿಮಾ ಯೋಜನೆಗಳಾದ PMSBY ಮತ್ತು PMJJBY ದಾಖಲಾತಿಗಳು ನಿಧಾನಗತಿಯ ಬೆಳವಣಿಗೆಯನ್ನು ದಾಖಲಿಸಿದೆ. ಹೆಚ್ಚಿನ ದಾಖಲಾತಿಗಳಿಗಾಗಿ ಫಲಾನುಭವಿಗಳಿಗೆ ವಿಮಾ ಯೋಜನೆಗಳ ಮಾಹಿತಿ ನೀಡುವಂತೆ ಬ್ಯಾಂಕರ್‍ಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಕೋರಲಾಯಿತು.
ರಿಸರ್ವ್ ಬ್ಯಾಂಕ್ ಅಧಿಕಾರಿ ಪ್ರೊ. ಸನ್‍ಜಿತ್ ಬಿಸ್ವಾಸ್, ಬ್ಯಾಂಕ್ ಆಫ್ ಬರೋಡಾ ಅಧಿಕಾರಿ ಪ್ರದೀಪ ದೇಸಾಯಿ, ಲಿಡ್‍ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ., ನಬಾರ್ಡ್ ಅಧಿಕಾರಿ ಮಯೂರ ಕಾಂಬಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.









Discussion about this post