ಭದ್ರಾವತಿ: ನಗರದಲ್ಲಿ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರವನ್ನು ದುಸ್ಥರಗೊಳಿಸುತ್ತಿರುವ ತಗ್ಗು ಗುಂಡಿಗಳಿಂದ ಮುಕ್ತಿ ದೊರೆಯುವ ಸೂಚನೆಗಳು ದೊರೆತಿದ್ದು, ಇದಕ್ಕಾಗಿ ಇಂದು ನೂತನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ.
ಮುಖ್ಯಮಂತ್ರಿಗಳ ವಿವೇಚನ ಕೋಟಾದಡಿ ನಗರ ಪ್ರದೇಶಕ್ಕೆ 3 ಕೋಟಿ ರೂ, ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಒಟ್ಟು 6 ಕೋಟಿ ರೂ. ಸೇರಿದಂತೆ ಕ್ಷೇತ್ರದಲ್ಲಿ 18.84 ಕೋಟಿ ರೂ.ಗಳಿಗೂ ವೆಚ್ಚದ ಅಧಿಕ ಡಾಂಬರೀಕರಣ ಮತ್ತು ಕಾಂಕ್ರೀಟ್ ರಸ್ತೆಗಳ ಅಭಿವೃದ್ದಿಗೆ ಇಂದು ಶಂಕುಸ್ಥಾಪನೆ ಕಾರ್ಯ ನೆರವೇರಲಿದೆ. ಲೋಕೋಪಯೋಗಿ ಇಲಾಖೆ ಶೀಘ್ರ ಕಾಮಗಾರಿ ಆರಂಭಿಸಲಿದೆ.
ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕಾಮಗಾರಿ?
- ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪವೃತ್ತದ ವರೆಗೆ 2.30 ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ
- ಶಿವಾಜಿವೃತ್ತದಿಂದ ಅಶ್ವತ್ ನಗರ ಮಾರ್ಗವಾಗಿ ಕಬಳಿಕಟ್ಟೆಗೆ 1.50 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
- ಅಮೃತ್ ಯೋಜನೆಯಡಿ ಉಜ್ಜನಿಪುರ ಹಿಂಭಾಗದ ರಸ್ತೆ
- ಬಂಡಾರಹಳ್ಳಿ ಮತ್ತು ಎನ್‌ಟಿಬಿ ವ್ಯಾಪ್ತಿಗಳಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ
- ನಗರಸಭೆ ವಾರ್ಡ್ ನಂ: 5 ರಲ್ಲಿ 72 ಲಕ್ಷ ರೂ, ವಾರ್ಡ್ ಸಂಖ್ಯೆ 7 ರಲ್ಲಿ 33 ಲಕ್ಷ ರೂ, ವಾರ್ಡ್ ಸಂಖ್ಯೆ 8 ರಲ್ಲಿ 69 ಲಕ್ಷ ರೂ, ವಾರ್ಡ್ ಸಂಖ್ಯೆ
- 30 ರಲ್ಲಿ 48 ಲಕ್ಷ ರೂ, ವಾರ್ಡ್ ಸಂಖ್ಯೆ 24 ರಲ್ಲಿ 25 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ
ಗ್ರಾಮೀಣ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕಾಮಗಾರಿ?
ಸಣ್ಣ ನೀರಾವರಿ ಇಲಾಖೆಯಿಂದ ನಾಗತಿ ಬೆಳಗಲು ಗ್ರಾಮದ ಭದ್ರಾ ನದಿಯಿಂದ ೭೫ ಲಕ್ಷ ರೂ.ಗಳ ವೆಚ್ಚದಲ್ಲಿ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹಾಯಿಸುವುದು, ಗೊಂದಿ ಗ್ರಾಮಕ್ಕೆ 65 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ, 78 ಲಕ್ಷ ರೂ. ವೆಚ್ಚದಲ್ಲಿ ಅರಳಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಒಳಭಾಗದ ಸಿಸಿ ರಸ್ತೆ, ಲೋಕೋಪಯೋಗಿ ಇಲಾಖೆಯಿಂದ 70 ಲಕ್ಷ ರೂ, ಕಾಗೇ ಕೋಡಮಗ್ಗೆಯ ತಿಪ್ಲಾಪುರ ಸಿಸಿ ರಸ್ತೆಗೆ 40 ಲಕ್ಷ ರೂ, ವೀರಾಪುರ ಪಂಚಾಯಿತಿ ಗ್ರಾಮಗಳಲ್ಲಿ 58 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಅತ್ತಿಗುಂದ 20 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಬಸಲೀಕಟ್ಟೆ ಸಿಸಿ ರಸ್ತೆಗೆ 70 ಲಕ್ಷ ರೂ, ಚಿಕ್ಕಗೊಪ್ಪೇನಹಳ್ಳಿ-ಕಾಳನಕಟ್ಟೆ 75 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ನಡೆಯಲಿದೆ.
ಈ ಕುರಿತಂತೆ ಮಾತನಾಡಿರುವ ಶಾಸಕ ಬಿ.ಕೆ. ಸಂಗಮೇಶ್ವರ್, ಇವೆಲ್ಲ ಕಾಮಗಾರಿಗಳು ಚಾಲನೆ ನೀಡಲಾಗುವುದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕರಿಸುವಂತೆ ಮನವಿ ಮಾಡಿದರು.
ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಹಾಗೂ ದೂರ ದೃಷ್ಟಿಹೊತ್ತು ಹೊಸಮನೆ ಮುಖ್ಯರಸ್ತೆ, ಚನ್ನಗಿರಿ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಈಗಾಗಲೆ ಅಧಿಕಾರಿಗಳು ಸಿ.ಎನ್. ರಸ್ತೆಯಲ್ಲಿ ಮಾರ್ಕಿಂಗ್ ಮಾಡಿದ್ದಾರೆ. ಸದ್ಯದಲ್ಲೆ ಅಗಲೀಕರಣ ಕುರಿತು ಜಿಲ್ಲಾಧಿಕಾರಿಗಳು, ಪೌರಾಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳ ಸಭೆ ನಡೆಸಿ ನಿರ್ದಿಷ್ಟ ಅಳತೆ ನಿಗದಿ ಪಡಿಸಲಾಗುವುದು ಎಂದ ಶಾಸಕರು ಕಡದಕಟ್ಟೆ ರೈಲ್ವೇ ಮೇಲ್ಸೇತುವೆ ಕುರಿತು ಹಾಸನದ ರೈಲ್ವೇ ಮುಖ್ಯ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೋರಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post