ಅದ್ಯಾವುದೋ ಸಂಘಟನೆಯವರಂತೆ(?) ಗ್ರಹಣದ ಆಚರಣೆ, ಸಂಪ್ರದಾಯಗಳು ಮೌಢ್ಯ, ಅದನ್ನು ವಿರೋಧಿಸೋಕೆ ಅಂತ ಗ್ರಹಣೋತ್ಸವ ಅಂತ ಮಾಡಿ, ಇವತ್ತು ರಾತ್ರಿ ಸ್ಮಶಾನದಲ್ಲಿ ಉಪಹಾರ ಹಾಗೂ ಮಾಂಸಾಹಾರ ತಿನ್ತಾರಂತೆ…
ಇನ್ನು ಆಯಪ್ಪ ಜಾರಕಿಹೊಳಿ, ಇವತ್ತು ಸ್ಮಶಾನದಲ್ಲೇ ಊಟ ಹಾಕ್ಸಿದಾರಂತೆ, ಅದನ್ನ ಕೆಲವ್ರು ಚಪ್ಪರಿಸಿಕೊಂಡು ಹೆಣಗಳ ಅಂದ್ರೆ ಸಮಾಧಿಗಳ ಮಧ್ಯೆ ನಿತ್ಕೊಂಡು ತಿಂದಿದಾರಂತೆ…
ಎಂತ ಸಾವು ಮಾರ್ರೆ…!
ಈಗ ಮನೆ ಕಟ್ಟಿದರೆ ದೇವರ ಮನೆ, ಲಿವಿಂಗ್ ರೂಂ, ಬೆಡ್ ರೂಂ, ಅಡುಗೆ ಮನೆ, ಸ್ನಾನದ ಕೋಣೆ, ಟಾಯ್ಲೆಟ್(ಕಕ್ಕಸು) ರೂಂ ಅಂತೆಲ್ಲಾ ಕಟ್ಟುತ್ತೇವೆ.. ಅದು ಸಂಪ್ರದಾಯವನ್ನು ನಂಬುವವರು ಆಗಲಿ, ನಂಬದೇ ಇರುವವರು ಆಗಲಿ ಇದೇ ರೀತಿಯಲ್ಲಿ ಕಟ್ಟುವುದು ಸಾಮಾನ್ಯ. ಕಟ್ಟಿದ ಮನೆಯಲ್ಲಿ ಏನು ಮಾಡೋದು? ಬೆಡ್ ರೂಂನಲ್ಲೇ ಮಲಗೋದು, ದೇವರ ಮನೆಯಲ್ಲಿ ಪೂಜೆ ಮಾಡೋದು, ಅಡುಗೆ ಮನೆಯಲ್ಲಿ ಅಡುಗೆ ಮಾಡೋದು, ಸ್ನಾನದ ಮನೆಯಲ್ಲಿ ಶುಭ್ರವಾಗೋದು ಹಾಗೂ ಟಾಯ್ಲೆಟ್‌ನಲ್ಲಿ …. ಮಾಡೋದು…
ನಾವು ಸಂಪ್ರದಾಯ ವಿರೋಧಿಸ್ತೀವಿ, ನಿಯಮ ವಿರೋಧಿಸ್ತೀವಿ ಅಂತ ಯಾರಾದರೂ ….ಮಾಡೋ ಟಾಯ್ಲೆಟ್ ನಲ್ಲಿ ಕೂತು ಊಟ ಮಾಡ್ತಾರಾ? ನೆನಸ್ಕೊಳೋಕೇ ಅಸಹ್ಯ ಆಗತ್ತೆ. ಅದೆಷ್ಟೇ ಪಾರ್ಶ್ ಆಗಿ ಟಾಯ್ಲೆಟ್ ಕಟ್ಟಿದರೂ ಸಹ ಅಲ್ಲಿ ಕೂತು ಯಾರೂ ಊಟ ಮಾಡಲ್ಲ.. ಮಾಡಿದರೆ? ಹಾಗೇ ಆಗಿದೆ ಇವತ್ತು ಸ್ಮಶಾನದಲ್ಲಿ ಊಟ ಮಾಡಿರೋರದ್ದು ಹಾಗೂ ಇವತ್ತು ರಾತ್ರಿ ಊಟ ಮಾಡೋರುದ್ದು.
ಕರ್ಮ ಕಣ್ರಿ…
ಈಗ ಮನೆಯಂತೆಯೇ ಸಮಾಜ, ಊರೂ ಸಹ… ತಮ್ಮ ಪ್ರೀತಿ ಪಾತ್ರರು ಸತ್ತಿದ್ದಾರೆ, ಅವರ ಮೇಲೆ ನಮಗೆ ತುಂಬಾ ಪ್ರೀತಿ ಇದೆ ಎಂದು ಅವರ ಶವವನ್ನು ಮನೆಯಲ್ಲೇ ಇಟ್ಟುಕೊಳ್ಳೋದಕ್ಕೋ, ಮನೆ ಒಳಗೆ ಸಂಸ್ಕಾರ ಮಾಡೋದಕ್ಕೋ ಸಾಧ್ಯನಾ? ಎಷ್ಟೇ ಮುಂದುವರೆದ ದೇಶ ಅಂದರೂ ಸಹ ಅದನ್ನು ಮಾಡೋದಿಲ್ಲ. ಅದಕ್ಕೆಂದೇ ಎಲ್ಲ ನಾಗರಿಕ ಸಮಾಜದಲ್ಲಿ ಸ್ಮಶಾನ ಎಂಬ ಕಲ್ಪನೆ ಇಟ್ಟುಕೊಳ್ಳಲಾಗಿದೆ. ಸತ್ತ ನಂತರ ಕೊಳೆಯುವ ಹೆಣವನ್ನು ಸುಡಲು, ಹೂಳಲು ಸ್ಮಶಾನ ಎಂದು ಇರುವುದು, ಊಟ ಮಾಡಲಿಕ್ಕೋ, ಆಟ ಆಡಲಿಕ್ಕೋ, ಕಾರ್ಯಕ್ರಮ ಮಾಡಲಿಕ್ಕೋ ಅಲ್ಲ…
ಹಿಂದೂ ಸಂಪ್ರದಾಯವನ್ನು ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ಇವರು ಇಂತಹ ಜಾಗದಲ್ಲಿ ಊಟ ಮಾಡುತ್ತಾರೆ ಎಂದರೆ ನಮ್ಮದೇನೂ ಸಮಸ್ಯೆಯಿಲ್ಲ. ಅವರನ್ನು ಜನರು ಅಬ್ ನಾರ್ಮಲ್ ಎಂದು ಕರೆಯುತ್ತಾರಷ್ಟೇ. ಇದಕ್ಕೆ ಮಹಾನ್ ವ್ಯಕ್ತಿಯಲ್ಲ ಶಕ್ತಿಗಳಾದ ಬುದ್ದ ಬಸವಣ್ಣ, ಅಂಬೇಡ್ಕರ್ ಅವರಂತಹ ಶ್ರೇಷ್ಠರ ಹೆಸರು ಬೇರೆ.
ವಿಷಯ ಏನು ಅಂದರೆ, ಗ್ರಹಣ ಕಾಲದ ಆಚರಣೆಗಳನ್ನು ನಂಬಿಕೊಂಡವರು ಮಾಡುತ್ತಾರೆಯೇ ವಿನಾ, ಯಾರಿಗೂ ಬಲವಂತವಾಗಿ ಮಾಡಿ ಎನ್ನುವುದಿಲ್ಲ. ಆದರೆ, ಈ ಬುಜೀಗಳಿಗೆ ಇದರಿಂದಾದ ಸಮಸ್ಯೆಯೇನು ಎಂಬುದೇ ಪ್ರಶ್ನೆ. ನಮ್ಮ ಸಂಪ್ರದಾಯ ವಿರೋಧಿಸಬೇಕು ಎಂಬ ಒಂದೇ ಒಂದು ಕಾರಣಕ್ಕೆ ನೀವು ಸ್ಮಶಾನದಲ್ಲಿ ಊಟ ಮಾಡುವುದು ಮಾತ್ರವಲ್ಲ ಹೆಣವನ್ನೇ ತಿಂದರೂ ನಮಗೆನೂ ಸಮಸ್ಯೆಯಿಲ್ಲ. ಆದರೆ, ಸುಖಾ ಸುಮ್ಮನೇ ಮೌಢ್ಯಾಚಾರ ಎಂದು ಒಂದು ಧರ್ಮದ ನಂಬಿಕೆಗಳನ್ನು ಮಾತ್ರ ಟಾರ್ಗೆಟ್ ಮಾಡುವುದು ನಿಮ್ಮಲ್ಲಿನ ಆಶಾಢಭೂತಿತವನ್ನು ತೋರಿಸುತ್ತದೆ.
ಅಂತಿಮವಾಗಿ ಒಂದು ಪ್ರಶ್ನೆ: ನೀವು ಮೌಢ್ಯಾಚರಣೆ ಎಂದು ಕರೆಯುವ ಹಾಗೂ ನಿಮ್ಮ ಈ ಜಾಗೃತಿ(?)ಗಳು ಯಾಕೆ ಯಾವಾಗಲೂ ಹಿಂದೂ ಧರ್ಮದ ವಿರುದ್ಧವೇ ಇರುತ್ತವೆ? ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಬೇರೆ ಧರ್ಮಗಳಲ್ಲಿರುವ ಮೌಢ್ಯಗಳ ವಿರುದ್ಧವಿಲ್ಲವೇಕೆ?
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post