ನವದೆಹಲಿ: ಕಳದ ಲೋಕಸಭಾ ಚುನಾವಣೆಯ ವೇಳೆಗಿಂತಲೂ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯಲ್ಲಿ ಏರಿಕೆಯಾಗಿದ್ದು, ಅವರ ಆಸ್ತಿಯಲ್ಲಿ 75 ಲಕ್ಷ ರೂ. ಹೆಚ್ಚಾಗಿದೆ.
ಈ ಕುರಿತಂತೆ ಪ್ರಧಾನಿ ಕಚೇರಿ(ಪಿಎಂಒ) ಮಾಹಿತಿ ಬಿಡುಗಡೆ ಮಾಡಿದ್ದು, ನರೇಂದ್ರ ಮೋದಿ ಸುಮಾರು 2.28 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಬಳಿ 1.5 ಕೋಟಿ ರೂ. ಆಸ್ತಿಯಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಆಸ್ತಿಯಲ್ಲಿ 75 ಲಕ್ಷ ರೂಪಾಯಿ ಹೆಚ್ಚಳವಾಗಿದೆ.
ಪ್ರಧಾನಿ ಮೋದಿ ಅವರು 48,944 ರೂಪಾಯಿ ನಗದು ಹಣವನ್ನು ಹೊಂದಿದ್ದು, ಮಾರ್ಚ್ 31, 2018 ರ ವೇಳೆಗೆ ಗಾಂಧಿನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 11,29,690 ರೂ. ಠೇವಣಿ ಹೊಂದಿದ್ದಾರೆ. ಮತ್ತೊಂದು ಎಸ್ ಬಿಐ ಖಾತೆಯಲ್ಲಿ 1,07,96,288 ರೂ. ಮೊತ್ತದ ಠೇವಣಿ ಹೊಂದಿದ್ದು, ಮೋದಿಯವರ ಬಳಿ 1,38,060 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.
ಗಾಂಧಿನಗರದಲ್ಲಿನ ವಸತಿ ಕಟ್ಟಡವೊಂದರಲ್ಲಿ ಮೋದಿ ನಾಲ್ಕನೇ ಒಂದರಷ್ಟು ಪಾಲು ಹೊಂದಿದ್ದು, ಇದು ಅವರ ಬಳಿ ಇರುವ ಏಕೈಕ ಸ್ಥಿರಾಸ್ತಿಯಾಗಿದೆ.
ಅಕ್ಟೋಬರ್ 2002 ರಲ್ಲಿ ಮೋದಿ ಇದನ್ನು 1,30,488 ರೂಪಾಯಿಗಳಿಗೆ ಖರೀದಿಸಿದ್ದರು. ಪ್ರಸ್ತುತ ಇದರ ಮೌಲ್ಯ ಒಂದು ಕೋಟಿ ರೂ. ಎನ್ನಲಾಗಿದೆ.
ಹೂಡಿಕೆಗಳಿಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ರೂ. 20,000 ಮೌಲ್ಯದ ಎಲ್ ಟಿ ಇನ್ಫ್ರಾಸ್ಟ್ರಕ್ಚರ್ ಬಾಂಡ್, ರೂ. 5,18,235 ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎನ್‌ಎಸ್‌ಸಿ ಮತ್ತು 1,59,281 ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದಾರೆ.
ಇನ್ನು ಪ್ರಧಾನಿ ಅವರ ಬಳಿ ಬಳಿ ಯಾವುದೇ ದ್ವಿಚಕ್ರ ವಾಹನವಾಗಲಿ, ನಾಲ್ಕು ಚಕ್ರದ ವಾಹನವಾಗಲಿ ಇಲ್ಲ. ಪ್ರಧಾನ ಮಂತ್ರಿ ಹುದ್ದೆಗೇರಿದ ಮೇಲೆ ಮೋದಿ ಯಾವುದೇ ಬಂಗಾರ ಖರೀದಿ ಮಾಡಿಲ್ಲ.
Discussion about this post