ಬಳ್ಳಾರಿಯ ಗ್ರಾಮದೇವತೆ ಶ್ರೀಕನಕ ದುರ್ಗಮ್ಮ ದೇವಿಗೆ ಸುಮಾರು 200 ವರ್ಷಗಳ ಹಿಂದಿನ ಇತಿಹಾಸ ಬಂಗಾರ ಪ್ರಿಯೆ ಶ್ರೀಕನಕ ದುರ್ಗಮ್ಮ ದೇವಿಯ ಮಹಿಮೆ ಅಪಾರ. ನಂಬಿದ ಭಕ್ತರನ್ನು ಕೈ ಬಿಡುವುದಿಲ್ಲ ಈ ದೇವಿಯ ಸನ್ನಿಧಿಯಲ್ಲಿ ಯಾವುದೇ ಜಾತಿ-ಮತಗಳ ಭೇದವಿಲ್ಲ. ಬೇಡಿ ಬಂದ ಭಕ್ತರಿಗೆ ವರವ ನೀಡುವ ಶ್ರೀ ಕನಕ ದುರ್ಗಾದೇವಿ.
ಸಂತಾನ, ವಿವಾಹ, ವ್ಯಾಪಾರ ಹೀಗೆ ಹಲವು ಇಷ್ಟಾರ್ಥಗಳನ್ನು ಈಡೇರಿಸಿದ್ದಾಳೆ. ಹೀಗಾಗಿ ಈ ದೇವಿಯ ದರ್ಶನ ಪಡೆಯಲು ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಅನೇಕ ಪವಾಡಗಳು ನಡೆಯುತ್ತವೆ.
ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನ ಬಳ್ಳಾರಿ ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನ. ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿದ್ದು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತನ್ನ ಹೆಸರಲ್ಲೇ ಬಂಗಾರವನ್ನು ಹೊಂದಿರುವ ಶ್ರೀ ಕನಕದುರ್ಗ ದೇವಿ, ಭಕ್ತರ ಪಾಲಿಗೆ ಬೇಡಿದ್ದನ್ನು ನೀಡುವ ಮಹಾ ತಾಯಿಯಾಗಿದ್ದಾಳೆ.
ಶಕ್ತಿ ದೇವತೆ ಕನಕದುರ್ಗ ಗಣಿನಾಡು ಬಳ್ಳಾರಿ ಜಿಲ್ಲೆಯ ಅಧಿದೇವತೆಯಾಗಿದ್ದಾಳೆ. ಇಲ್ಲಿನ ಜನರು ಯಾವುದೇ ಕೆಲಸಕ್ಕೆ ಹೋಗಬೇಕಾದರೂ ಈ ದುರ್ಗಮ್ಮ ದೇವಿಯ ದರ್ಶನ ಪಡೆದ ನಂತರವೇ ಮುಂದೆ ಹೆಜ್ಜೆ ಹಾಕುತ್ತಾರೆ.
ಕನಕ ದುರ್ಗೆಗೆ ಬಳ್ಳಾರಿ ಜಿಲ್ಲೆಯ ಗಣಿನಾಡಿನ ಭಕ್ತರಲ್ಲದೆ, ಆಂಧ್ರ ಪ್ರದೇಶದಿಂದಲೂ ಸಹ ಭಕ್ತರು ಬರುತ್ತಾರೆ. ಶ್ರೀ ಕನಕ ದುರ್ಗಮ್ಮ ದೇವಿ ಹುತ್ತದಿಂದ ಹುಟ್ಟಿ ಬಂದಿದ್ದಾಳೆ ಎಂದು ಹೇಳಲಾಗುತ್ತದೆ. ಕನಕ ದುರ್ಗಮ್ಮ ಎನ್ನುವುದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖವಾಗಿದೆ.
ಹುತ್ತದಿಂದ ಹುಟ್ಟಿ ಬಂದಿರುವ ಕನಕ ದುರ್ಗಾ ದೇವಿಗೆ ಹುತ್ತದ ಬಳಿಯಲ್ಲಿ ಇಂದಿಗೂ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ಪೂಜೆಗೊಳ್ಳುವ ಈ ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.
ಪೂರ್ವಜರ ಹೇಳಿಕೆಯ ಪ್ರಕಾರ, ಹಲವಾರು ವರ್ಷಗಳ ಹಿಂದೆ ಒಂದು ಹುತ್ತದ ರೂಪದಲ್ಲಿ ಶ್ರೀ ಕನಕ ದುರ್ಗಿಯು ಹುಟ್ಟಿ ಬಂದಿದ್ದಾಳೆ. ಪ್ರತಿ ಶುಕ್ರವಾರ ದೇವಿಯ ವಾರವಾಗಿರುವುದರಿಂದ ಶುಕ್ರವಾರದ ದಿನ ಭಕ್ತಸಾಗರವೇ ಹರಿದು ಬರುತ್ತದೆ. ಇಲ್ಲಿ ವಿಷೇಷವಾಗಿ ಮಹಿಳೆಯರು ನಿಂಬೆಹಣ್ಣಿನ ದೀಪ ಹಚ್ಚುವ ಮೂಲಕ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊರುತ್ತಾರೆ. ಹೀಗೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ನಂತರ ದೇವಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸುತ್ತಾರೆ.
ಕನಕದುರ್ಗ ಕನಕ ಪ್ರಿಯೆ ಅಂದರೆ ಬಂಗಾರ ಎಂದರೆ ತುಂಬಾ ಇಷ್ಟ. ಹಾಗಾಗಿಯೇ ತಾಯಿಯ ಅಲಂಕಾರಕ್ಕಾಗಿ 8 ಕೆಜಿಗೂ ಹೆಚ್ಚು ಬಂಗಾರ ಅಲಂಕಾರಿಕ ಸಾಮಾಗ್ರಿಗಳನ್ನು ವಿಶೇಷ ದಿನಗಳಲ್ಲಿ ಹಾಕಿ ಅಲಂಕಾರ ಮಾಡಲಾಗುತ್ತದೆ. ಆದರೆ ಬಂಗಾರದ ಆಭರಣಗಳನ್ನು ವರ್ಷಕ್ಕೆ ನಾಲ್ಕು ದಿನಗಳಲ್ಲಿ ಮಾತ್ರ ದೇವಿಗೆ ತೊಡಿಸಲಾಗುತ್ತದೆ. ದಸರಾ, ಯುಗಾದಿ, ವರಮಹಾಲಕ್ಷ್ಮಿ ಹಾಗೂ ಸಿಡಿ ಬಂಡೆ ಉತ್ಸವದ ವೇಳೆಯಲ್ಲಿ ದೇವಿಗೆ ಬಂಗಾರದ ಆಭರಣಗಳ ಮೂಲಕ ಅಲಂಕಾರ ಮಾಡಲಾಗುತ್ತದೆ. ಆ ವೇಳೆಯಲ್ಲಿ ಅಲಂಕಾರಗೊಂಡ ದೇವಿಯ ದರ್ಶನ ಪಡೆಯುವುದೇ ಪುಣ್ಯ. ಉಳಿದ ಎಲ್ಲ ದಿನಗಳಲ್ಲಿ ದೇವಿಗೆ ಬೆಳ್ಳಿಯ ಆಭರಣಗಳ ಅಲಂಕಾರ ಹಾಗೂ ವಿವಿಧ ಹೂವುಗಳ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಅಧಿದೇವತೆ ಕನಕದುರ್ಗ ಮನೆಗೆ ಪ್ರತಿವರ್ಷ ಶಿವರಾತ್ರಿ ಹಬ್ಬದ ಅಮಾವಾಸ್ಯೆಯ ನಂತರ ಬರುವ ಮಂಗಳವಾರದ ದಿನ ದೇವಿಗೆ ಸಿಡಿ ಬಂಡೆ ಉತ್ಸವ ನಡೆಯುತ್ತದೆ. ಈ ಉತ್ಸವದ ಆಚರಣೆಯ ಹಿಂದೆ ನೂರಾರು ವರ್ಷಗಳ ಇತಿಹಾಸವಿದೆ. ಸಾಂಕ್ರಾಮಿಕ ರೋಗಗಳು ಬಂದು ಹೆಚ್ಚಾಗಿ ಜನರು ಸಾಯುತ್ತಿದ್ದಾಗ ಸಿಡಿ ಬಂಡೆ ಉತ್ಸವ ನಡೆಸಿದರಂತೆ. ಆದ್ದರಿಂದ ರೋಗ ನಿರ್ಮೂಲನೆಯಾಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಅಂದಿನಿಂದಲೂ ಇಂದಿನವರೆಗೂ ಶಿವರಾತ್ರಿ ನಂತರ ಬರುವ ಮಂಗಳವಾರದಂದು ದೇವಿಗೆ ಸಿಡಿಬಂಡಿ ಉತ್ಸವ ನಡೆಯುತ್ತದೆ.
ಈ ಉತ್ಸವಕ್ಕೆ ವಿಶೇಷವಾಗಿ ಸದ್ದಿನ ಗಾಣಿಗ ಸಮುದಾಯದ ಜನರೇ ತಯಾರಿಸಿದ ಸಿಡಿ ಬಂಡಿಯನ್ನು ಬಳಸಲಾಗುತ್ತದೆ. ಗಾಣಿಗ ಸಮುದಾಯದ ಜನರು ಅಂದು 40 ಅಡಿ ಉದ್ದದ ಮರದ ದಿಮ್ಮಿಯನ್ನು ಹಾಗೂ ಮೂರು ಎತ್ತುಗಳ ಬಂಡಿಯನ್ನು ಸಜ್ಜುಗೊಳಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಿಯ ದೇವಸ್ಥಾನದ ಸುತ್ತ ಮೂರು ಸುತ್ತುಗಳ ಸಿಡಿ ಬಂಡಿಯನ್ನು ಓಡಿಸಲಾಗುತ್ತದೆ.
ಜಾತ್ರೆ ನಡೆದಾಗ ಭಕ್ತರು ರಥಕ್ಕೆ ಹಣ್ಣು, ಹೂವು, ಎಸೆದು ದೇವಿಗೆ ಸಂತುಷ್ಟ ಗೊಲಿಸುತ್ತಾರೆ ಎನ್ನುವ ನಂಬಿಕೆ ಇದೆ. ಅಲ್ಲದೆ ಸಿಡಿ ಬಂಡಿ ಉತ್ಸವದ ವೇಳೆಯಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆಯನ್ನು ಹೊತ್ತರೆ ಈ ಹರಕೆಗಳು ಈಡೇರುತ್ತವೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಪ್ರತಿವರ್ಷ ನಡೆಯುವ ಸಿಡಿ ಬಂಡಿ ಉತ್ಸವದ ವೇಳೆ ಸುಮಾರು ಮೂರರಿಂದ ಐದು ಲಕ್ಷ ಜನರು ಭಾಗವಹಿಸಿ ಸಿಡಿ ಉತ್ಸವವನ್ನು ಯಶಸ್ವಿಗೊಳಿಸುತ್ತಾರೆ. ಅಲ್ಲದೆ ತಮ್ಮ ಹರಕೆಯನ್ನು ಪೂರೈಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಸಾಧ್ಯವಾದರೆ ನೀವೂ ಒಮ್ಮೆ ಈ ದೇವಿಯ ದರ್ಶನ ಪಡೆದು ಧನ್ಯರಾಗಿರಿ. ಹೆಚ್ಚಿನ ವಿಚಾರ ಇದ್ದರೆ ಪವಾಡಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಲೇಖನ: ಮುರಳೀಧರ್ ನಾಡಿಗೇರ್
Discussion about this post