ಹೌದು… ಇಡಿಯ ಕನ್ನಡ ಚಿತ್ರರಂಗ ಡಬ್ಬಿಂಗ್ ಕುರಿತಾಗಿ ನಿರಂತರವಾಗಿ ಚರ್ಚೆ ನಡೆಸುತ್ತಲೇ ಇರುತ್ತದೆ. ಕನ್ನಡಕ್ಕೆ ಡಬ್ಬಿಂಗ್ ಬೇಕು-ಬೇಡ ಎಂಬ ವಿರೋಧಗಳ ನಡುವೆಯೇ ದಕ್ಷಿಣ ಭಾರತದ ಗ್ಲಾಮರ್ ಕ್ವೀನ್ ಲಕ್ಷ್ಮೀ ರೈ ಡಬ್ಬಿಂಗ್ ಬೇಕು ಎಂದಿದ್ದಾರೆ.
ಈಗಾಗಲೇ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ, ಬ್ರೇಕ್ ಪಡೆದುಕೊಂಡಿದ್ದ ಲಕ್ಷ್ಮೀ ರೈ ಝಾನ್ಸಿ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್‌ಗೇ ರಿಎಂಟ್ರಿ ಕೊಡುತ್ತಿರುವ ವೇಳೆಯೇ ಇಂತಹ ಹೇಳಿಕೆ ನೀಡಿದ್ದಾರೆ.
ಯಾವ ಕಾರಣಕ್ಕೆ ಕನ್ನಡದಲ್ಲಿ ಡಬ್ಬಿಂಗ್ ನಿಷೇಧ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಕನ್ನಡಕ್ಕೆ ಡಬ್ಬಿಂಗ್ ಬರಬೇಕು. ಭಾರತೀಯ ಚಿತ್ರರಂಗದವರೆಲ್ಲಾ ಒಂದೇ ಎಂದು ತಿಳಿದು, ಎಲ್ಲ ಭಾಷೆಯ ಚಿತ್ರಗಳನ್ನು ಆಯಾ ಭಾಷೆಯಲ್ಲೇ ನೋಡುವಂತಾಗಬೇಕು. ಈ ರೀತಿ ವಿಭಜನೆ ಸರಿಯಲ್ಲ ಎಂದಿದ್ದಾರೆ.
ಎಲ್ಲರೂ ತಮಿಳು, ತೆಲುಗು ಸಿನೆಮಾಗಳ ಕುರಿತಾಗಿ ಮಾತನಾಡುತ್ತಾರೆಯೇ ವಿನಾ ಕನ್ನಡ ಚಿತ್ರಗಳ ಬಗ್ಗೆ ಅಲ್ಲ. ಕನ್ನಡ ಚಿತ್ರಗಳು ಗಡಿ ದಾಟಿ ಬರುವುದಿಲ್ಲ. ವಿದೇಶಗಳಲ್ಲಿ ಕನ್ನಡ ಚಿತ್ರಗಳನ್ನು ಹೆಚ್ಚು ನೋಡುತ್ತಿಲ್ಲ. ನಮ್ಮ ಕನ್ನಡ ಚಿತ್ರಗಳು ಗಡಿ ದಾಟಿ ಬಂದಾಗ ಮಾತ್ರ ಎಲ್ಲೆಡೆ ನೋಡಲು ಸಾಧ್ಯ. ದಕ್ಷಿಣ ಭಾರತದ ಹಲವು ಚಿತ್ರಗಳು ಹಿಂದಿಗೆ ಡಬ್ಬಿಂಗ್ ಆಗುತ್ತವೆ. ಇದೇ ರೀತಿ ಕನ್ನಡ ಚಿತ್ರಗಳೂ ಸಹ ಡಬ್ ಆಗಬೇಕು ಎನ್ನುತ್ತಾರೆ ಲಕ್ಷ್ಮೀ.
ಜನರು ಒಳ್ಳೆಯ ಸಿನಿಮಾಗಳನ್ನು ನೋಡಲು ಬಯಸುತ್ತಾರೆ. ಸಿನಿಮಾಗೆ ಭಾಷೆಯ ಗಡಿ ಇಲ್ಲ. ಜನರಿಗೆ ಒಳ್ಳೆಯ ವಿಷಯ ಇರುವ ಸಿನಿಮಾ ಮಾತ್ರ ಬೇಕು. ಜನರು ಡಿಫರೆಂಟ್ ಸಿನಿಮಾಗಳನ್ನು ನೋಡಲು ಬಯಸುತ್ತಾರೆ ಎಂದಿದ್ದಾರೆ ರೈ.
Discussion about this post