ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆಯನ್ನು ಉಳಿಸುವುದಾಗಿ ಹೇಳಿ ವಚನ ಭ್ರಷ್ಟರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಇಬ್ಬರನ್ನು ಊರೊಳಗೆ ಬಿಡದೆ ತಡೆಯಿರಿ. ಹೋರಾಟಕ್ಕೆ ಬರುವುದಾಗಿ ಹೇಳಿ ಕಾರ್ಮಿಕರ ಆಕ್ರೋಶಕ್ಕೆ ಹೆದರಿ ಸಂಸದ ಪಲಾಯನರಾಗಿದ್ದಾರೆಂದು ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಆರೋಪಿಸಿದರು.
ಅವರು ಭಾನುವಾರ ಕೇಂದ್ರ ಸರಕಾರ ವಿಐಎಸ್‍ಎಲ್ ಕಾರ್ಖಾನೆಯನ್ನು ಮಾರಾಟ ಮಾಡಲು ಜಾಗತಿಕ ಟೆಂಡರ್ ಕರೆದಿರುವ ವಿರುದ್ದ ಕಾರ್ಖಾನೆಯ ಮುಖ್ಯದ್ವಾರ ಮುಂಭಾಗ ಕಾರ್ಮಿಕ ಸಂಘ, ಗುತ್ತಿಗೆ ಕಾರ್ಮಿಕ ಸಂಘ, ನಿವೃತ್ತ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಹಾಗು ಸರ್ವ ಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ನಗರದ ಅವಳಿ ಕಾರ್ಖಾನೆಗಳಲ್ಲಿ ಈಗಾಗಲೆ ಎಂಪಿಎಂ ಅದೋಗತಿಗೆ ತಳ್ಳಲ್ಪಟ್ಟಿದೆ. ಉಸಿರಾಟ ನಡೆಸುತ್ತಿದ್ದ ವಿಐಎಸ್‍ಎಲ್ ಉಳಿಸುವುದಾಗಿ ಭರವಸೆ ನೀಡಿ ಮತಗಳನ್ನು ಪಡೆದ ನಂತರ ಕೈ ಚೆಲ್ಲಿ ಕುಳಿತಿರುವ ಯಡಿಯೂರಪ್ಪ ಮತ್ತು ರಾಘವೇಂದ್ರ ಇಬ್ಬರು ವಚನ ಭ್ರಷ್ಟರಾಗಿದ್ದಾರೆ. ಕೇಂದ್ರ ಸರಕಾರ ಜಾಗತಿಕ ಟೆಂಡರ್ ಕರೆದ ಹಿನ್ನಲೆಯಲ್ಲಿ ಹೋರಾಟ ಮಾಡಿ ಎಂದು ಹೇಳಿದ ಸಂಸದ ಬಿವೈಆರ್ ಗೈರಾಗಿರುವುದು ವಿಷಾಧಿನೀಯ. ಕಾರ್ಮಿಕರ ಆಕ್ರೋಶಕ್ಕೆ ಹೆದರಿ ಪಲಾಯನರಾಗಿದ್ದಾರೆ. ಹೋರಾಟಗಳಲ್ಲಿ ಯಾರು ರಾಜಕೀಯ ಮಾಡಬಾರದು. ಈ ಕಾರ್ಖಾನೆಯನ್ನು ಉಳಿಸುವ ಶಕ್ತಿ ಅಪ್ಪ ಮಕ್ಕಳಿಗೆ ಮಾತ್ರ ಇದೆ. ಭಾರಿ ಅಂತರಗಳ ಮತಗಳನ್ನು ಪಡೆದು ರಾಜಕೀಯ ಶಕ್ತಿಯನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
ಯಡಿಯೂರಪ್ಪ ಮತ್ತು ರಾಘವೇಂದ್ರ ಅವರ ಅಧಿಕಾರದಲ್ಲಿ ಕಾರ್ಖಾನೆಯ ಉಳಿವಿಗೆ ಏನು ಮಾಡಿಲ್ಲ. ಸಂಸತ್ತಿನಲ್ಲಿ ಬಿವೈಆರ್ ಮಾತನಾಡಿದ್ದು ಗಿಮಿಕ್ ಅಷ್ಟೆ. ಮಾನ ಮರ್ಯಾದೆ ಇಲ್ಲದ ರಾಜಕಾರಣಿಗಳಾಗಿ ಕಾರ್ಮಿಕರ ಅನ್ನಕ್ಕೆ ಮಣ್ಣು ಹಾಕಿದ್ದಾರೆ. ತಾಯಿ ಆಣೆಗೂ ಇವರು ಕಾರ್ಖಾನೆಯನ್ನು ಉಳಿಸಲ್ಲ. ಅವರಿಗೆ ಇಚ್ಚಾಶಕ್ತಿ ಇಲ್ಲ. ಕೇಂದ್ರದ ಮೂರು ಮಂದಿ ಸಚಿವರನ್ನು ಕರೆತಂದು ಬಂಡವಾಳ ಹೂಡುವುದಾಗಿ ಹೇಳಿಸಿ ಕಾರ್ಖಾನೆಯನ್ನು ಅದೋಗತಿಗೆ ತಂದು ಮಾರಾಟದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಇಚ್ಚಾ ಶಕ್ತಿ ಇದ್ದಲ್ಲಿ ಪ್ರಧಾನಿ ಮೋದಿ ರವರ ಬಳಿ ಕುಳಿತು ಚರ್ಚಿಸಿ ಕಾರ್ಖಾನೆ ಉಳಿಸಲಿ ಎಂದು ಹೇಳಿ ಭದ್ರಾವತಿ ಬಂದ್‍ಗೆ ಕರೆ ನೀಡಿ ಕೇಂದ್ರದ ಗಮನ ಸೆಳೆಯಬೇಕೆಂದರು.
ಬಿಜೆಪಿ ಮುಖಂಡ ಜ್ಯೋತಿಪ್ರಕಾಶ್, ಮಾತನಾಡಿ ಕಾರ್ಖಾನೆ ಉಳಿಸಲು ಹಂಬಲ ತೊಟ್ಟಿದ್ದೇವೆ. ಸಂಸದ ರಾಘವೇಂದ್ರ ಸಹ ಬಹಳಷ್ಟು ಶ್ರಮ ಪಡುತ್ತಿದ್ದಾರೆ. ನಗರದ ಅವಳಿ ಕಾರ್ಖಾನೆಗಳಿಂದ ನಾವು ಸಹ ಅನ್ನ ತಿಂದಿದ್ದೇವೆ. ಅದರ ಋಣ ತೀರಿಸಬೇಕಿದೆ. ಸದ್ಯದಲ್ಲೆ ರಾಜ್ಯದ ಬಿಜೆಪಿ ಎಂಪಿಗಳನ್ನು ಒಗ್ಗೂಡಿಸಿ ಪ್ರಧಾನಿ ಮೋದಿ ರವರ ಬಳಿ ನಿಯೋಗ ಕೊಂಡೊಯ್ದು ಕಾರ್ಖಾನೆ ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಬಿಜೆಪಿ ಮುಖಂಡ ದತ್ತಾತ್ರಿ, ಮಾತನಾಡಿ ಜಾಗತಿಕ ಟೆಂಡರ್ ಕರೆಯಬಾರದಿತ್ತು. ಹೋರಾಟದ ಸಭೆಗೆ ಸಂಸದ ಬಿ.ವೈ.ರಾಘವೇಂದ್ರ ಬರಬೇಕಿತ್ತು. ಆದರೆ ಜರೂರು ಕಾರಣಗಳಿಂದ ಬಂದಿಲ್ಲ. ಕಾರ್ಮಿಕರ ಬಳಿ ಕ್ಷಮೆ ಕೋರುವಂತೆ ಹೇಳಿದ್ದಾರೆ. ನೀವು ನೀಡಿದ ಮತದ ಋಣ ತೀರಿಸಬೇಕಿದೆ. ಬಿವೈಆರ್ ಹಾಗು ಬಿಎಸ್‍ವೈ ಇಬ್ಬರಿಂದ ಮಾತ್ರ ಸಾಧ್ಯವಿಲ್ಲ. ರಾಜ್ಯದ 26 ಮಂದಿ ಎಂಪಿಗಳನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿ ಮೋದಿ ರವರ ಬಳಿ ನಿಯೋಗ ಹೋಗಲು ಇತ್ತೀಚಿಗೆ ನಡೆದ ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಸಮಿಶ್ರ ಸರಕಾರ ಪತನಗೊಂಡು ಯಡಿಯೂರಪ್ಪ ಸಿಎಂ ಆದರೆ ಈ ಹೋರಾಟಕ್ಕೆ ಮತ್ತಷ್ಟು ಬಲ ಬರವುದಾಗಿ ಹೇಳುತ್ತಿದ್ದಂತೆ ಕಾರ್ಮಿಕರು ಬಿಜೆಪಿ ಮುಖಂಡರುಗಳ ವಿರುದ್ದ ಕೆಂಡ ಕಾರಿ ವಿರೋಧಿಸಿದರು.
ಮುಖಂಡರಾದ ಟಿ.ಚಂದ್ರೇಗೌಡ, ಡಿ.ಟಿ.ಶ್ರೀಧರ್, ಕೆ.ಎನ್.ಬೈರಪ್ಪಗೌಡ, ಎಚ್.ಜಿ.ಉಮಾಪತಿ, ಬಿ.ಕೆ.ಮೋಹನ್, ಅಂಜನಿ, ಎಸ್.ಎನ್.ಬಾಲಕೃಷ್ಣ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್ ಮುಂತಾದವರು ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಮಾತನಾಡಿದರು. ಮುಖಂಡರಾದ ಆರ್.ಕರುಣಾಮೂರ್ತಿ, ವಿಶಾಲಾಕ್ಷಿ, ಎಂ.ಎಸ್.ಸುಧಾಮಣಿ, ಬದರಿನಾರಾಯಣ, ರವಿಕುಮಾರ್, ಜೆ.ಪಿ.ಯೋಗೀಶ್, ಮಣಿಶೇಖರ್, ಕರಿಯಪ್ಪ, ಕೃಷ್ಣೇಗೌಡ, ರಾಮಲಿಂಗಯ್ಯ, ಮಹಮದ್ ಸನಾವುಲ್ಲಾ, ನರಸಿಂಹಚಾರ್, ರಾಮಕೃಷ್ಣ, ವಿ.ಕದಿರೇಶ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್ ಸೇರಿದಂತೆ ಕಾರ್ಮಿಕ ಕುಟುಂಬ ಮಹಿಳೆಯರು, ಮಕ್ಕಳು ನೂರಾರು ಮಂದಿ ಇದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post