ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಇಂದು ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟೀಯ ಮಾಧ್ಯಮಗಳು ವರದಿ ಮಾಡಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿಯಲ್ಲಿ ಡಿಕೆ ಶಿವಕುಮಾರ್, ನವದೆಹಲಿ ಕರ್ನಾಟಕ ಭವನದ ಉದ್ಯೋಗಿ ಹನುಮಯ್ಯ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ.
ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಡಿಕೆಶಿ ಅವರನ್ನು ಬಂಧಿಸಲಾಗುತ್ತದೆ ಎಂದು ಊಹಿಸಲಾಗಿದ್ದು, ಈ ಕುರಿತಂತೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಕೋಟ್ಯಂತರ ರೂಪಾಯಿ ಹವಾಲಾ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಪ್ರಕರಣದ ಬಗ್ಗೆ ಬೆಂಗಳೂರಿನ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಮಧ್ಯಂತರ ಜಾಮೀನು ನೀಡಿತ್ತು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಏತನ್ಮಧ್ಯೆ ಆರೋಪಿಗಳ ಹೇಳಿಕೆನ್ನು ದಾಖಲು ಮಾಡಿಕೊಳ್ಳಲು ಅಧಿಕಾರಿಗಳು ಡಿಕೆಶಿ ಹಾಗೂ ಇತರರಿಗೆ ಕೂಡಲೇ ಸಮನ್‌ಸ್ ಜಾರಿ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇನ್ನು ಈಗಾಗಲೇ ಕಲೆ ಹಾಕಿರುವ ಸಾಕ್ಷ್ಯಾಧಾರಗಳ ಪ್ರಕಾರ, ಆರೋಪಿ ನಂಬರ್ ಒಂದು(ಡಿಕೆಶಿ) ದೆಹಲಿ, ಬೆಂಗಳೂರಿನಲ್ಲಿ ಬೃಹತ್ ನೆಟ್ ವರ್ಕ್ ಗಳ ಮೂಲಕ ಅಕ್ರಮ ಹಣವನ್ನು ಹವಾಲಾ ಮೂಲಕ ವರ್ಗಾಯಿಸಿರುವುದಾಗಿ ದೂರಿದೆ. ಇದರಲ್ಲಿ ಸಚಿನ್ ನಾರಾಯಣ್, ಆಂಜನೇಯ ಹನುಮಂತಯ್ಯ ಮತ್ತು ಎನ್ ರಾಜೇಂದ್ರ ಇತರ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.
Discussion about this post