ಆರಂಭದಲ್ಲೇ ಹೇಳುತ್ತೇನೆ.. ಮನುಷ್ಯನಿಗೆ ಸ್ವಾರ್ಥ ಇರಬೇಕು ನಿಜ. ಆದರೆ, ನಿಮ್ಮಗಳ ಅಧಿಕಾರ ದಾಹಕ್ಕೆ ರಾಜ್ಯದ ಆಡಳಿತ ಹಾಗೂ ಅಭಿವೃದ್ಧಿಯನ್ನು ನಿರ್ಲಕ್ಷಿಸಿ, ಮನಸೋಯಿಚ್ಛೆ ನಡೆದುಕೊಳ್ಳುತ್ತಿದ್ದೀರಿ. ನಿಮಗಾರಿಗಾದರೂ ಮಾನ ಮರ್ಯಾದೆ ಇದ್ದರೆ ನೆಗೆದುಬಿದ್ದು ಸಾಯಿರಿ… ಇಂತಹ ಭಂಡಗೇಡಿ ಬದುಕು ಯಾತಕ್ಕಾಗಿ ಬೇಕು ನಿಮಗೆ…
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡದೇ ಇದ್ದರೂ ಅತಿದೊಡ್ಡ ಪಕ್ಷ ಎಂಬ ಸ್ಥಾನವನ್ನು ಕರುನಾಡ ಮತದಾರ ನೀಡಿದ್ದ. ಆದರೆ, ಅಲ್ಲಿಗೂ ಮುನ್ನ ಬೀದಿ ಬೀದಿಗಳಲ್ಲಿ ನಾಯಿ-ನರಿಗಳಂತೆ ಕಚ್ಚಾಡಿಕೊಳ್ಳುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಅಧಿಕಾರದ ದಾಹಕ್ಕಾಗಿ ಕೈಜೋಡಿಸಿ, ಅಪವಿತ್ರ ಮೈತ್ರಿ ಸರ್ಕಾರ ರಚನೆ ಮಾಡಿದ್ದು ಮಾತ್ರವಲ್ಲ ಆರಂಭದಿಂದ ಇಂದಿನವರೆಗೂ ಡೋಲಾಯಮಾನ ಸ್ಥಿತಿಯಲ್ಲೇ ಸರ್ಕಾರವನ್ನು ನಡೆಸಿಕೊಂಡು ಬಂದಿರುವುದು ಮಾತ್ರವಲ್ಲ, ಇದರ ಪರಿಣಾಮವಾಗಿ ರಾಜ್ಯ ಸಮಗ್ರ ಅಭಿವೃದ್ಧಿ ನಿರ್ಲಕ್ಷಕ್ಕೆ ಒಳಗಾಗಿರುವುದು ಸುಳ್ಳಲ್ಲ.
ಅಪವಿತ್ರ ಮೈತ್ರಿಯೊಳಗೆ ಹೊಗೆಯಾಡುತ್ತಿದ್ದ ಕಿಡಿ ಈಗ ಧಗ್ ಎಂದು ಹೊತ್ತಿ ಉರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಸರ್ಕಾರ ಬೀಳುವ ಸ್ಥಿತಿಗೆ ಬಂದು ತಲುಪಿದೆ. ಈಗ ನಿಜಕ್ಕೂ ರಾಜ್ಯದ ಪ್ರತಿಯೊಬ್ಬ ಮತದಾರ ಯೋಚಿಸಬೇಕಾದ ವಿಚಾರವಿದೆ.
ಮೊಟ್ಟ ಮೊದಲನೆಯದಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೆಕೆಂಡ್ ಕ್ಲಾಸ್’ನಲ್ಲಿ ಮತದಾರ ಪಾಸ್ ಮಾಡಿದ್ದರೆ, ಜೆಡಿಎಸ್ ಪಕ್ಷವನ್ನು ಜಸ್ಟ್ ಪಾಸ್’ಗೆ ನಿಲ್ಲಿಸಿದ್ದ. ಆದರೆ, ಮತದಾರನ ಆಣತಿಯನ್ನು ಮೀರಿ, ಅಪವಿತ್ರ ಮೈತ್ರಿ ಮಾಡಿಕೊಂಡ ಈ ಎರಡೂ ಪಕ್ಷಗಳು ಇಂದು ತಮ್ಮ ಅಧಿಕಾರ ದಾಹಕ್ಕೆ ರಾಜ್ಯದ ಹಿತವನ್ನು ಬಲಿ ಕೊಡಲು ಮುಂದಾಗಿವೆ.
ಒಂದು ಕ್ಷಣ ಯೋಚಿಸಿ ನೋಡಿ:
ಮೊದಲು ಪರಮೇಶ್ವರ್, ಡಿಕೆಶಿ ಸೇರಿದಂತೆ 21 ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಲ್ಲಿಗೆ ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಸಾಮೂಹಿಕ ರಾಜೀನಾಮೆ ನಾಟಕವಾಡಿದರು.
ಇನ್ನು, ಅತ್ಯಂತ ಪ್ರಮುಖವಾಗಿ ನೋಡುವುದಾದರೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಇನ್ನೂ ಸರಿಯಾಗಿ ಒಂದು ತಿಂಗಳೂ ಸಹ ಕಳೆದಿಲ್ಲ. ಅಷ್ಟರಲ್ಲೇ ರಾಜೀನಾಮೆ ನೀಡಿದ್ದಾರೆ ರಾಣಿಬೆನ್ನೂರಿನ ಆರ್. ಶಂಕರ್. ಅಲ್ಲರೀ ಸ್ವಾಮಿ, ಸಚಿವ ಸ್ಥಾನ ಎಂದರೆ ನಿಮ್ಮಪ್ಪನ ಮನೆ ಜಹಗೀರ? ಅಥವಾ ರಸ್ತೆ ಬದಿಯ ಟೀ ಅಂಗಡಿ ಕಟ್ಟೆಯಾ? ಬೇಕಾದಾಗ ಬಂದು, ಬೇಡವಾದಾಗ ಹೋಗಲು…
ಇತ್ತ, ಜೆಡಿಎಸ್’ನ 25 ಶಾಸಕರು ನಂದಿ ಬೆಟ್ಟ ರಸ್ತೆಯಲ್ಲಿರುವ ರೆಸಾರ್ಟ್‌ಗೆ ಹೋಗಿ ಬಚ್ಚಿಟ್ಟುಕೊಂಡಿದ್ದರೆ, ಇನ್ನು 13 ಜನ ಸಚಿವ ಹಾಗೂ ಶಾಸಕರು ಗೋವಾಗೆ ಹೋಗಿ ಅಡಗಿದ್ದಾರೆ ಎಂಬ ಸುದ್ದಿಯೂ ಸಹ ಬಂದಿದೆ.
ಇನ್ನೊಂದೆಡೆ ನೋಡಿ: ಒಬ್ಬರು ಸಿದ್ದರಾಮಯ್ಯ ಸಿಎಂ ಆಗಲಿ ಎಂದರೆ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ ಎಂಬರ್ಥದ ಮಾತನ್ನು ದೇವೇಗೌಡರು ಹೇಳುತ್ತಾರೆ. ಇನ್ನೊಂದೆಡೆ ರಾಮಲಿಂಗಾ ರೆಡ್ಡಿ ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ಟವಲ್ ಹಾಕಿ ಕುಳಿತಿದ್ದರೆ, ಇದೆಲ್ಲದರೆ ನಡುವೆ ಡಿಕೆಶಿ ಸಹ ಸಿಎಂ ಸ್ಥಾನಕ್ಕೆ ಹಿಡನ್ ಐ ಇಟ್ಟು, ಗೊಂಬೆ ಆಡಿಸುತ್ತಿರುವುದು ಗೊತ್ತಿಲ್ಲದ ವಿಚಾರವೇನಲ್ಲ…. ಇದೇನೇ ಇರಲಿ.. ಈಗ ಮುಖ್ಯ ವಿಚಾರಕ್ಕೆ ಬರೋಣ.
ಈ ಎಲ್ಲಾ ಬೆಳವಣಿಗೆಗಳನ್ನು ನೀವು ಗಮನಿಸಿ ಮುಂದೆ ಓದಿ:
ಅಪವಿತ್ರ ಮೈತ್ರಿ ಮಾಡಿಕೊಂಡು ಅಕ್ರಮ ಸಂಸಾರ(ಸರ್ಕಾರ) ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು(?)ಗಳೇ ನಿಮಗೆ ನಿಜಕ್ಕೂ ಮಾನ ಮರ್ಯಾದೆ ಇರುವುದು ಬೇಡ, ಅದರ ಅರ್ಥವಾದರೂ ಗೊತ್ತೇ? ಜನ ನಿಮಗೆ ಅಧಿಕಾರ ನೀಡದೇ ಇದ್ದರೂ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದರೂ ಜನ ಸುಮ್ಮನೆ ಇರುವುದು ಯಾತಕ್ಕಾಗಿ? ಏನಾದರಾಗಲಿ ರಾಜ್ಯದ ಆಡಳಿತ ಸುಗಮವಾಗಿ ನಡೆದು, ಅಭಿವೃದ್ಧಿ ಕೆಲಸಗಳು ಆಗಲಿ ಎಂದು.
ಆದರೆ, ನೀವು ಮಾಡುತ್ತಿರುವುದು ಏನು? ಮನುಷ್ಯನಿಗೆ ಆಸೆ ಇರಬೇಕು ನಿಜ. ಆದರೆ, ನಿಮ್ಮ ಅಧಿಕಾರ ದಾಹದ ತೀಟೆಗೆ ರಾಜ್ಯದ ಆಡಳಿತ ಯಂತ್ರವನ್ನು ಬಲಿ ಕೊಟ್ಟು, ಇಡಿಯ ಅಭಿವೃದ್ಧಿಯನ್ನು ಕಡೆಗಣಿಸಿದ್ದೀರಲ್ಲಾ ನೀವು ನಾಗರಿಕತೆಯಿರುವ ಮನುಷ್ಯರೋ ಅಥವಾ ಕಾಡುಜನಗಳೋ?
ನಿಮ್ಮ ಮೈತ್ರಿ ನಡುವೆ ಬೇಕಾದಷ್ಟು ಒಳಜಗಳು ಇರಬಹುದು. ಆದರೆ, ರಾಜ್ಯದ ಜನರಿಗೆ ಅದೆಲ್ಲವೂ ಬೇಡದ ವಿಚಾರ. ರಾಜ್ಯದ ಜನ ನಿಮಗೆ ಮತ ಹಾಕಿರುವುದು ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು. ಆದರೆ, ಅದನ್ನೆಲ್ಲಾ ಕಡೆಗಣಿಸಿ ಒಂದಷ್ಟು ಜನ ಗೋವಾದಲ್ಲಿ, ಒಂದಷ್ಟು ಜನ ನಂದಿ ಬೆಟ್ಟದ ರೆಸಾರ್ಟ್‌ನಲ್ಲಿ ಅಡಗಿ ಕುಳಿತಿದ್ದೀರಿ. ಹೀಗಿರುವಾಗ, ನಿಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸ, ಹಿತ ಚಿಂತನೆ, ಜನರ ಕಷ್ಟಸುಖಗಳನ್ನು ಕೇಳುವವರು ಯಾರು?
ಹೇಗೂ ನಿಮ್ಮ ಈ ಕಚ್ಚಾಟದ ನಡುವೆ, ರಾಜ್ಯ ಆಡಳಿತವನ್ನು ಅಧಿಕಾರಿಗಳ ವರ್ಗ ನಡೆಸುತ್ತಿದೆ. ಅದು ಹಾಗೇ ನಡೆಯಲಿ. ಜನಸೇವೆಗಾಗಿ ಸಂವಿಧಾನ ನೀಡಿರುವ ಅಧಿಕಾರವನ್ನು ನೀವು ಈ ರೀತಿ ದುರುಪಯೋಗ ಮಾಡಿಕೊಂಡು ನಿಮ್ಮ ಸ್ವಾರ್ಥ ಸಾಧನೆಗಾಗಿ ಮುಂದಾಗಿ ಈ ರೀತಿ ಮಾನ ಮರ್ಯಾದೆ ಬಿಟ್ಟು ಬದುಕುವುದಕ್ಕಿಂತಲೂ ಎಲ್ಲಾದರೂ ಹೋಗಿ ನೆಗೆದುಬಿದ್ದು ಸಾಯಿರಿ. ರಾಜ್ಯದ ಜನವಾದರೂ ನೆಮ್ಮದಿಯಿಂದ ಬದುಕುತ್ತಾರೆ. ಅಧಿಕಾರಿಗಳೇ ಆಡಳಿತ ಯಂತ್ರ ನಡೆಸಿಕೊಂಡು ಹೋಗಲಿ. ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ…
ನಿಮ್ಮಗಳ ಸ್ವಾರ್ಥಕ್ಕೆ ವೆಚ್ಚವಾಗುವುದು ಜನರು ಕಷ್ಟಪಟ್ಟು ದುಡಿದು ಸರ್ಕಾರಕ್ಕೆ ತೆತ್ತ ತೆರಿಗೆ ಹಣ. ಇಂತಹ ಹಣವನ್ನು ನಿಮ್ಮ ತೀಟೆಗೆ ದುರುಪಯೋಗ ಮಾಡಿಕೊಳ್ಳುತ್ತೀರಿಲ್ಲ, ಜನರ ಶ್ರಮದ ಬೆವರಿನ ಬಿಸಿ ನಿಮ್ಮನ್ನು ಸುಡದೇ ಬಿಟ್ಟೀತೆ?
ಇನ್ನು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ.. ರಾಜ್ಯದಲ್ಲಿ ನಿಮ್ಮ ಪಕ್ಷವನ್ನು ಬಹುಮತದ ಸನಿಹಕ್ಕೆ ತಂದು ನಿಲ್ಲಿಸಿತು. ನಿಮಗೆ ಸರ್ಕಾರ ರಚನೆ ಮಾಡುವ ಅವಕಾಶ ಕೈತಪ್ಪಿ ಹೋಯಿತು ಎನ್ನುವುದು ನಿಜ. ಆದರೆ, ಇಂತಹ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದ್ದರೂ ನೀವು ಸುಮ್ಮನೆ ನೋಡಿಕೊಂಡು ಕುಳಿತಿರುವುದು ನೀವೂ ಸಹ ರಾಜ್ಯದ ಅಭಿವೃದ್ಧಿಯನ್ನು ಪರೋಕ್ಷವಾಗಿ ಕಡೆಗಣಿಸಿದಂತೆಯೇ ಆಗುತ್ತದೆ ನೆನಪಿಡಿ. ಮೈತ್ರಿ ಸರ್ಕಾರ ಈ ಕಚ್ಚಾಟದ ಪೆಟ್ಟು ಕಾಂಗ್ರೆಸ್-ಜೆಡಿಎಸ್’ಗೆ ಮಾತ್ರವಲ್ಲ, ತಮಾಷೆ ನೋಡಿಕೊಂಡು ಕುಳಿತ ನಿಮಗೂ ತಪ್ಪಿದ್ದಲ್ಲ ನೆಪಪಿಡಿ.
ನೆನಪಿಡಿ: ಯಾವುದೇ ರಾಜಕೀಯ ಪಕ್ಷಗಳಿರಬಹುದು, ನೀವು ಸರಿಯಾಗಿ ಕೆಲಸ ಮಾಡುವವರೆಗೂ ರಾಜ್ಯದ ಜನ ನಿಮ್ಮ ಜೊತೆಗೆ ಇರುತ್ತಾರೆಯೇ ವಿನಾ.. ನೀವು ಏನು ಮಾಡಿದರೂ ಜನರು ಸುಮ್ಮನೆ ಇರುತ್ತಾರೆ ಎಂದುಕೊಳ್ಳಬೇಡಿ. ಸರಿಯಾದ ಸಮಯದಲ್ಲಿ ಮತದಾರ ಕೊಡುವ ಪೆಟ್ಟನ್ನು ನಿಮ್ಮಿಂದ ತಡೆದುಕೊಳ್ಳಲು ಸಾಧ್ಯವಿಲ್ಲ…
Discussion about this post