ನವದೆಹಲಿ: ವಿಶ್ವ ವಿಖ್ಯಾತ ತಾಜ್ ಮಹಲ್ ನ ಕಳಪೆ ಸ್ಥಿತಿಯಲ್ಲಿದ್ದು, ಇದರ ಸಂರಕ್ಷಣೆಗೆ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾಜ್ ಮಹಲ್ ನ್ನು ರಕ್ಷಿಸಿ ಅಥವಾ ನಾಶಪಡಿಸಿ ಎಂದು ಕಿಡಿಕಾರಿದೆ.
ಈ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ತಾಜ್ ಮಹಲ್ ಸಂರಕ್ಷಿಸುವಲ್ಲಿ ಕೇಂದ್ರಸರ್ಕಾರ ಹಾಗೂ ಭಾರತೀಯ ಪುರಾತತ್ವ ಸಮೀಕ್ಷೆ ನಿರ್ಲಕ್ಷ್ಯ ವಹಿಸಿವೆ ಎಂದು ಕಿಡಿಕಾರಿದೆ. ತಾಜ್ ಮಹಲ್ ಗತವೈಭವವನ್ನು ಮರುಸ್ಥಾಪಿಸಿ ಇಲ್ಲವೇ ಅದನ್ನು ಕೆಡವಿ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಐಫೆಲ್ ಟವರ್ ಗಿಂತಲೂ ತಾಜ್ ಮಹಲ್ ಸುಂದರವಾಗಿದೆ. ಟಿವಿ ಟವರ್ ನಂತಿರುವ ಐಫೆಲ್ ಟವರನ್ನು 80 ಮಿಲಿಯನ್ ಪ್ರವಾಸಿಗರು ವೀಕ್ಷಿಸುತ್ತಾರೆ. ಆದರೆ, ನಮ್ಮ ತಾಜ್ ಮಹಲ್ ಅದಕ್ಕಿಂತಲೂ ಸುಂದರವಾಗಿದೆ. ಆದರೆ, ಕೇಂದ್ರಸರ್ಕಾರದ ನಿರಾಸಕ್ತಿಯಿಂದಾಗಿ ದೇಶಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ನ್ಯಾಯಾಲಯ ಕಿಡಿಕಾರಿದೆ.
ಇನ್ನು, ತಾಜ್ ಮಹಲ್ ರಕ್ಷಿಸಲು ದೂರ ದೃಷ್ಟಿಕೋನ ಹೊಂದಿರುವ ದಾಖಲೆಯನ್ನು ಸಿದ್ದಪಡಿಸಲು ಉತ್ತರ ಪ್ರದೇಶ ಸರಕಾರಕ್ಕೆ ಆದೇಶಿಸಲಾಗಿತ್ತು. ಆದರೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರ ಬಗ್ಗೆ ನ್ಯಾಯಪೀಠ ಆಕ್ರೋಶಗೊಂಡಿದೆ.
ಕಲುಷಿತ ಅನಿಲದಿಂದಾಗಿ ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದಲ್ಲಿನ ಪರಿಸರ ಹಾಳಾಗಿದ್ದು, ಇದನ್ನು ರಕ್ಷಿಸಬೇಕೆಂದು ಪರಿಸರ ತಜ್ಞ ಎಂ. ಜಿ. ಮೆಹ್ತಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
Discussion about this post