ನವದೆಹಲಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ನೆನಪಿಗಾಗಿ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಇಡಿಯ ದೇಶವೇ ತಲೆಬಾಗಿ ಗೌರವಿಸಬೇಕಾದಂತಹ ಪವಿತ್ರ ಸ್ಥಳದ ಲೋಕಾರ್ಪಣೆ ವೇಳೆ ನಿಯಮದಂತೆ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಇದರ ನೇತೃತ್ವ ವಹಿಸಿದ್ದು ಮಾತ್ರ ಇಡಿಯ ದೇಶವೇ ಹೆಮ್ಮೆ ಪಡುವಂತಹ ವೀರ ಯೋಧೆ ವಿಂಗ್ ಕಮಾಂಡರ್ ಸುಶ್ಮಿತಾ ಸೆಖೋನ್.
ಹೌದು. ಭಾರತೀಯ ಸೇನೆಗೆ ಸೇರಿದ ವಿಂಗ್ ಕಮಾಂಡರ್ ಸುಶ್ಮಿತಾ ಸೆಖೋನ್ ಅವರು ಇಂದು ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆಯ ವೇಳೆ ಗಾರ್ಡ್ ಆಫ್ ಹಾನರ್ ನೇತೃತ್ವ ವಹಿಸಿದ್ದು, ಇಂತಹ ಅಮೂಲ್ಯ ಅವಕಾಶ ದೇಶದಲ್ಲಿ ಒಬ್ಬಿಬ್ಬರಿಗೆ ಮಾತ್ರ ದೊರೆಯುತ್ತದೆ. ಈ ವೇಳೆ ಮಾತನಾಡಿರುವ ಸುಶ್ಮಿತಾ, ದೇಶಕ್ಕಾಗಿ ಹೋರಾಡಿ ವೀರಸ್ವರ್ಗ ಸೇರಿದ ಯೋಧರ ಗೌರವಾರ್ಥದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗಾರ್ಡ್ ಆಫ್ ಹಾನರ್ ನೀಡುವ ನೇತೃತ್ವ ನನಗೆ ದೊರೆತಿದ್ದು ನನ್ನ ಪೂರ್ವ ಜನ್ಮದ ಸುಕೃತ. ನನ್ನ ಜೀವನದಲ್ಲಿ ಇದೊಂದು ಅಮೂಲ್ಯ ಗಳಿಗೆ. ನನ್ನೊಳಗಿರುವ ಭಾವನೆಗಳನ್ನು ಪದಗಳಲ್ಲಿ ಹೇಳಲಾಗುವುದಿಲ್ಲ ಎಂದಿದ್ದಾರೆ.
ಇದೊಂದು ಅದ್ಭುತ ಭಾವನೆ, ಈ ಕ್ಷಣದ ಭಾಗವಾಗಿರಲು ನಾನು ಹೆಮ್ಮೆ ಪಡುತ್ತೇನೆ. ನನ್ನ ಜೀವನದ ಕೊನೆಯ ದಿನವರೆಗೂ ನಾನು ಈ ಭಾವನೆಗಳನ್ನು ಎಂದಿಗೂ ಮರೆಯುವುದಿಲ್ಲ. ಆಯ್ಕೆ ಪ್ರಕ್ರಿಯೆಯ ನಂತರ ನನಗೆ ಅವಕಾಶವನ್ನು ನೀಡಲಾಯಿತು. ಈ ಹಂತಕ್ಕೆ ಹೋಗಲು ಅನೇಕ ಅಭ್ಯಾಸಗಳು ಹೋಗಿವೆ. ಆದರೂ ನನ್ನ ಕುಟುಂಬಕ್ಕೆ ಇದರಿಂದ ಅತ್ಯಂತ ಹೆಮ್ಮೆಯಿದೆ ಎಂದಿದ್ದಾರೆ.
ಸುಶ್ಮಿತಾ ಅವರ ಕೌಟುಂಬಿಕ ಹಿನ್ನೆಲೆ ನೋಡುವುದಾದರೆ, ಇವರದ್ದು ಅಪ್ರತಿಮ ವೀರ ಹಾಗೂ ದೇಶಪ್ರೆÃಮದ ಆಗರದ ಸಂಸಾರ. ಮೂಲತಃವಾಗಿ ರಕ್ಷಣಾ ಕುಟುಂಬಕ್ಕೆ ಸೇರಿದ ಇವರ ತಂದೆ ವಿಜ್ಯುಲೆನ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಸಹೋದರ ಸೇನೆಯಲ್ಲಿದ್ದಾರೆ. ಇನ್ನು, ಇವರು ಹಾಗೂ ಇವರ ಪತಿ ಭಾರತೀಯ ವಾಯು ಸೇನೆಯ ಉನ್ನತ ಹುದ್ದೆಯಲ್ಲಿದ್ದು, ಇವರ ಸೋದರ ಸಂಬಂಧಿ ನೌಕಾಪಡೆಯಲ್ಲಿ ಕರ್ತವ್ಯದಲ್ಲಿದ್ದು, ಇವರ ಮಾವನವರೂ ಸಹ ನೌಕಾಪಡೆಯಲ್ಲೆ ಸೇವೆ ಸಲ್ಲಿಸಿದ್ದ ದೇಶಭಕ್ತರಾಗಿದ್ದರು.
Discussion about this post