ಬೆಂಗಳೂರು: ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 28, 29 ಹಾಗೂ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿತವಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮಗಳು ಸಮಸ್ತ ಹವ್ಯಕ ಸಮಾಜದ ಕಾರ್ಯಕ್ರಮವಾಗಿರುವುದರಿಂದ ಸಮಸ್ತ ಸಮಾಜ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಹವ್ಯಕ ಮಹಾಮಂಡಲ ಕರೆ ನೀಡಿದೆ.
ಈ ಐತಿಹಾಸಿಕ ಬೃಹತ್ ಉತ್ಸವದಲ್ಲಿ ನಮ್ಮ ವಿಶಿಷ್ಟವಾದ ಕೃಷಿ – ಕಲೆ – ಪಾಕಗಳ ಸಮಗ್ರ ದರ್ಶನ, ಯಾಜ ಮಂಟಪ – ಯಾಗ ಮಂಡಲ – ದೇಶೀ ಗೋತಳಿಗಳ ಪ್ರದರ್ಶನ, ಸಮಾಜ ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಹಾಗೂ ಸಮಾಜದ ಹಿರಿಮೆ ಗರಿಮೆಗಳನ್ನು ಪ್ರಸ್ತುತಪಡಿಸುವ ವಿಚಾರ ಸಮ್ಮಿಲನಗಳ ಗೋಷ್ಠಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಡಿ 28 ರಂದು ಬೆಳಗ್ಗೆ 9.00 ಘಂಟೆಗೆ ನಡೆಯುವ ಅಮೃತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವ ಹಿಸಲಿದ್ದಾರೆ.
ಡಿ 29 ರಂದು ಸಭಾ ಕಾರ್ಯಕ್ರಮಗಳು ಹಾಗೂ ಭಗವದ್ಗೀತಾ ಪಠಣ ಕಾರ್ಯಕ್ರಮಗಳು ನಡೆಯಲಿದೆ. ಡಿ.30 ರಂದು ಈ ಮೂರು ದಿನಗಳ ಬೃಹತ್ ಕಾರ್ಯಕ್ರಮಕ್ಕೆ ಕಲಶಪ್ರಾಯವಾಗಿ ಸಮಾರೋಪದ ದಿನದಂದು ಪೂಜ್ಯ ಶ್ರೀಗಳು ನಡೆಸಿಕೊಡುವ ಶ್ರೀರಾಮಕಥಾ ಪ್ರಸ್ತುತಿ 75 ಕಲಾವಿದರ ಭಾಗವಹಿಸುವಿಕೆಯೊಂದಿಗೆ ಬೃಹತ್ ಮಟ್ಟದಲ್ಲಿ ಸಂಪನ್ನವಾಗಲಿದೆ.
ಈ ಐತಿಹಾಸಿಕ ಸಂದರ್ಭದಲ್ಲಿ ಹವ್ಯಕ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮರ್ಥ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಹಾಗಾಗಿ ಗೋಕರ್ಣಮಂಡಲ ವ್ಯಾಪ್ತಿಯ ಪ್ರತಿಯೊಂದು ಮಂಡಲ – ವಲಯ – ಘಟಕಗಳ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ, ಪ್ರತಿಯೊಬ್ಬ ಸಮಾಜದ ಬಂಧುವೂ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭಾಗಿಯಾಗುವಂತೆ ಮಾಡಬೇಕು ಎಂದು ಈ ಮೂಲಕ ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಈಶ್ವರಿ ಬೇರ್ಕಡವು ಕರೆ ನೀಡಿದ್ದಾರೆ.
Discussion about this post