ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ತೆರಳಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದೆ.
ಪ್ರಕರಣ ದಾಖಲಾದ ನಂತರ ವಿಚಾರಣೆಗೆ ಹಾಜರಾಗಲು ಬೆಳ್ತಂಗಡಿ ಎಸ್’ಐಟಿ ಠಾಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದರು. ಕೆಲ ಕಾಲ ಪೊಲೀಸರು ವಿಚಾರಣೆ ನಡೆಸಿ ಮಟ್ಟಣ್ಣನವರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಉಜಿರೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ತೆರಳಿದ್ದ ಪೊಲೀಸರು ನಿನ್ನೆ ಬಂಧಿಸಿದ್ದರು. ತಿಮರೋಡಿ ಮನೆಗೆ ಪೊಲೀಸರು ತೆರಳಿದ ವೇಳೆ ದೊಡ್ಡ ಹೈಡ್ರಾಮಾ ನಡೆದಿತ್ತು. ಆ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಮತ್ತು ಇತರರು ಪೊಲೀಸರಿಗೆ ಅಡ್ಡಿ ಪಡಿಸಿದ್ದರು. ಈ ಕಾರಣಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಮೇಲೆ ಎಫ್’ಐಆರ್ ದಾಖಲಾಗಿದೆ.
ಎಫ್’ಐಆರ್ ದಾಖಲಾಗಿದ್ದಂತೆ ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಠಾಣೆಗೆ ಬಂದಿದ್ದಾರೆ. ಠಾಣೆಗೆ ಆಗಮಿಸಿ, ವಿಚಾರಣೆಗೆ ಒಳಪಟ್ಟು ಹೊರಬಂದ ನಂತರ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ಬಂಧನ ಬೇಡ, ನಾನೇ ಸರೆಂಡರ್ ಆಗುವೆ ಎಂದು ಹೈಡ್ರಾಮಾ ಸೃಷ್ಟಿಸಿದ್ದಾರೆ.
ನಮಗೆ ಕೋರ್ಟ್, ಸ್ಟೇಷನ್ ಬೀಗರ ಮನೆಯಾಗಿದೆ. ನಿನ್ನೆ ತಿಮರೋಡಿ ಬಂಧನಕ್ಕೆ 100 ಜನ ಪೊಲೀಸರು ಬಂದಿದ್ದರು. ಮನೆಯವರು ಏಕೆ ಬಂದಿದ್ದೀರಾ ಅಂತ ಕೇಳಿದ್ದಾರೆ ಅಷ್ಟೇ. ನಾವು ಯಾರೂ ಪೊಲೀಸರಿಗೆ ಅಡ್ಡಿ ಮಾಡಿಲ್ಲ ಎಂದು ತಿಳಿಸಿದರು.
ನಾನೇ ಬಂದಿದ್ದೇನೆ. ಅವರು ಬಂದು ನನ್ನನ್ನು ಬಂಧಿಸುವ ಅಗತ್ಯವಿಲ್ಲ. ಅದಕ್ಕಾಗಿ 100 ಜನ ಪೊಲೀಸರು ಹಲವಾರು ಕಾರಗಳಲ್ಲಿ ಬರುವ ಅಗತ್ಯವಿಲ್ಲ. ನಾನೇ ಬಂದಿದ್ದೇನೆ. ಬಂಧಿಸುವುದಾದರೆ ಬಂಧಿಸಲಿ ಎಂದರು.
ತಿಮರೋಡಿಗೆ ನೀಡಿದ ನೋಟೀಸ್’ಗೆ ಉತ್ತರ ನೀಡಲು ನಾವು ಠಾಣೆಗೆ ಹೊರಟಿದ್ದೆವು. ಆದರೆ, ಅಷ್ಟರ ಒಳಗಾಗಿ ನೂರಾರು ಪೊಲೀಸರು ಬಂದು ಬಂಧಿಸಿದ್ದಾರೆ. ಆ ವೇಳೆ ಸಜಹವಾಗಿ ಕಾರಣ ಕೇಳಲಾಯಿತು. ನಾವು ಯಾರೂ ಸಹ ಅಡ್ಡಿ ಪಡಿಸಿಲ್ಲ. ಆದರೂ ಸಹ ನಮ್ಮ ವಿರುದ್ಧ ಪ್ರಕರಣ, ಎಫ್’ಐಆರ್ ದಾಖಲಿಸಿದ್ದಾರೆ. ಆಕಡೆ ಸಮೀರನ ಮನೆಗೂ ಸಹ ಪೊಲೀಸರು ಸುತ್ತುವರೆದಿದ್ದರು. ಪ್ರಭಾವಿ ಕುಟುಂಬದ ಒತ್ತಡದಿಂದ ಇವೆಲ್ಲಾ ನಡೆಯುತ್ತಿದೆ ಎಂದು ಆರೋಪಿಸಿದರು.
ತಿಮರೋಡಿ ಬಂಧನ : ಡಿಸಿಎಂ ಡಿಕೆಶಿ ಹೇಳಿದ್ದೇನು?
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಅವರಿಗೂ ನಮಗೂ ರಾಜಕೀಯವಾಗಿ 100 ವಿರೋಧ ಇರಬಹುದು. ಏನೇ ಹೋರಾಟ ಮಾಡುವುದಿದ್ದರೂ ಸೈದ್ಧಾಂತಿಕವಾಗಿ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ತೇಜೋವಧೆ ಮಾಡಬಾರದು. ಈ ಕಾರಣಕ್ಕಾಗಿಯೇ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವೆ ಎಂದರು.
ಆ ಹಿಂದೆ ಆ ವ್ಯಕ್ತಿ ನನ್ನ ವಿರುದ್ಧವೂ ಮಾತನಾಡಿದ್ದ. ಸಿಎಂ ವಿರುದ್ಧವೂ ಮಾತನಾಡಿದ್ದ. ಆರೋಪ ಮಾಡುವುದಾದರೆ ದಾಖಲೆ ಇಟ್ಟು ಮಾತನಾಡಬೇಕು. ಮಾತನಾಡಿದನ ಹತ್ತಿರ ಏನು ದಾಖಲೆ ಇದೆ? ಎಂದು ಪ್ರಶ್ನಿಸಿದರು.
ವಿರೋಧಿಗಳ ವಿರುದ್ಧ ಮಾತನಾಡಿದ್ದಾನೆ ಎಂದು ನಾವು ಖುಷಿ ಪಡುವುದಲ್ಲ. ಮುಂದೆ ನಮ್ಮ ವಿರುದ್ಧವೂ ಆತ ಮಾತನಾಡಬಹುದು. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಇವುಗಳಿಗೆಲ್ಲ ನಾವು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post