ನವದೆಹಲಿ: ದೇಶದ ಕಂಡ ಅಪ್ರತಿಮ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಇಂದು ಸಂಜೆ 5.05ಕ್ಕೆ ಇಹಲೋಕ ತ್ಯಜಿಸಿದ್ದು ಇಡಿಯ ದೇಶಕ್ಕೆ ಆಘಾತ ಉಂಟು ಮಾಡಿದೆ.
ಈ ಕುರಿತಂತೆ ಎಐಐಎಂಎಸ್ ಆಸ್ಪತ್ರೆ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಮಧುಮೇಹ, ಮೂತ್ರದ ಸೋಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. 93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಇದೇ ಅವರ ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದು, ಇಡಿಯ ದೇಶದಲ್ಲಿ ಸೂತಕದ ಛಾಯೆ ಆವರಿಸಿದೆ.
ಭಾರತದ ರಾಜಕೀಯದಲ್ಲಿ ಅಜಾತಶತ್ರುವಾಗಿದ್ದ ಅಟಲ್ ಜೀ ವಿಧಿವಶರಾಗಿರುವುದು ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ತಂದೆ ಕೃಷ್ಣ ಬಿಹಾರಿ ವಾಜಪೇಯಿ ತಾಯಿ ಕೃಷ್ಣ ದೇವಿ. ಅಟಲ್ ಜೀ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು.
ಸತತವಾಗಿ 10 ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದ ಅಟಲ್ ಜಿ ಭಾರತ ರಾಜಕೀಯದಲ್ಲಿ ಅಜಾತಶತ್ರುವಾಗಿದ್ದರು.
ಬಿಜೆಪಿ ಜನನದಿಂದಲೂ ಅದಕ್ಕಾಗಿ ಶ್ರಮಿಸಿದ ವಾಜಪೇಯಿ ಅವರ ಕನಸು ದೇಶದಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎನ್ನುವುದಾಗಿತ್ತು. ಆ ಕನಸು 2014ರಲ್ಲಿ ಅವರ ಶಿಷ್ಯ ನರೇಂದ್ರ ದಾಮೋದರ ದಾಸ್ ಮೋದಿ ಅವರ ಮೂಲಕ ಈಡೇರಿತು. ಆದರೆ, ಆ ವೇಳೆಗಾಗಲೇ ಅಟಲ್ ಜೀ ವ್ಹೀಲ್ ಚೇರ್ ಸೇರಿ, ಬಾಹ್ಯ ಸಂಪರ್ಕದಿಂದ ಹೊರಗುಳುದಿದ್ದರು. ಆನಂತರ ತೀರಾ ಆರೋಗ್ಯ ಹದಗೆಟ್ಟು ಯಾರನ್ನೂ ಗುರುತಿಸದ ಸ್ಥಿತಿಗೆ ಈ ಮಹಾನ್ ನಾಯಕ ತಲುಪಿದ್ದರು. ತಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ ಕ್ಷಣಗಳನ್ನು ಸಂಭ್ರಮಿಸಲು ಅವರಿಗೆ ಸಾಧ್ಯವಾಗಲಿಲ್ಲ.
Discussion about this post