ಗೌರಿಬಿದನೂರು: ತಾಲೂಕಿನ ತೊಂಡೆಭಾವಿ, ದೇವರಹಳ್ಳಿ, ಕಲ್ಲಿನಾಯಕನಹಳ್ಳಿ ಹಾಗೂ ತರಿದಾಳು ಗ್ರಾಮಗಳಲ್ಲಿ ಹಾಲು ಶೀತಲೀಕರಣ ಘಟಕಗಳನ್ನು (ಬಲ್ಕ್ ಮಿಲ್ಕ್ ಕೂಲರ್) ಶಾಸಕ ಎನ್.ಎಚ್. ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಈ ಭಾಗದ ಜನತೆ ಹೈನುಗಾರಿಕೆಯನ್ನು ಜೀವನಾಧಾರ ವನ್ನಾಗಿಸಿಕೊಂಡಿದ್ದಾರೆ. ಇದರಿಂದ ಬಹುತೇಕ ಕುಟುಂಬಗಳು ಬದುಕು ಕಟ್ಟಿಕೊಳ್ಳುವ ಕಾರ್ಯವಾಗುತ್ತದೆ. ಆದ್ದರಿಂದ ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಹಾಲು ಶೀತಲೀಕರಣ ಘಟಕಗಳನ್ನು ಆರಂಭಿಸಿ ರೈತರಿಂದ ಸಂಗ್ರಹಿಸಿದ ಹಾಲು ಕೆಡದಂತೆ ಕಾಪಾಡಬಹುದಾಗಿದೆ. ಸರ್ಕಾರವು ರೈತರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರತೀ ಲೀಟರ್ ಹಾಲಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಜೊತೆಗೆ ಜಾನುವಾರುಗಳ ಆಹಾರವನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂಳಿದರು.
ಕೋಚಿಮುಲ್ ನಿರ್ದೇಶಕ ಜೆ. ಕಾಂತರಾಜು ಮಾತನಾಡಿ, ಪ್ರತಿಯೊಂದು ಹಾಲು ಉತ್ಪಾದಕರ ಸಂಘದಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೈನೋದ್ಯಮವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಇದರಿಂದ ಪ್ರತಿಯೊಬ್ಬ ರೈತರ ಬಾಳಲ್ಲಿ ಬೆಳಕು ಕಾಣಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಮಾತನಾಡಿ, ಈ ಭಾಗದಲ್ಲಿ ನೀರಿನ ಆಸರೆಯಿಲ್ಲದೆ ಕಂಗಾಲಾಗಿರುವ ರೈತರು ಕೃಷಿಯನ್ನು ಬಿಟ್ಟು ಹೈನೋದ್ಯಮವನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಜೀವನ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣ ಹಾಗೂ ಪೋಷಣೆಗೆ ಸಹಕಾರಿಯಾಗಿದೆ. ಇದರಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ಮಹಿಳಾ ನಿರ್ದೇಶಕಿ ಸುನಂದಮ್ಮ ಪೆದ್ದರೆಡ್ಡಿ, ಮುಖಂಡರಾದ, ಬಿ.ಪಿ. ಕೃಷ್ಣಮೂರ್ತಿ, ಚಿಕ್ಕಣ್ಣ, ವ್ಯವಸ್ಥಾಪಕ ಶಿವರಾಜ್, ಉಪವ್ಯವಸ್ಥಾಪಕ ಗಜರಾಜ್ ರಾಠೋಡ್, ವಿಸ್ತರಾಣಾಧಿರಿ ವಿಜಯಶೇಖರ ರೆಡ್ಡಿ, ಕಾರ್ಯದರ್ಶಿ ಬಸವರಾಜು, ಸುಧಾಕರ್ ರೆಡ್ಡಿ, ಕೆ. ಚಂದ್ರಶೇಖರ್ ರೆಡ್ಡಿ, ಶಿವಕುಮಾರ್ ಹಾಗೂ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಹೈನುಗಾರರು ಮತ್ತು ರೈತರು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093, 94487 22200
Discussion about this post