ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳು ಅರಳಲು ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಪೋಷಕರ ಜವಾಬ್ದಾರಿಯುತ ಕಾರ್ಯದಿಂದ ಮಾತ್ರ ಸಾಧ್ಯ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಜೆ. ಕಾಂತರಾಜು ಅಭಿಪ್ರಾಯಪಟ್ಟರು.
ತಾಲೂಕಿನ ತೊಂಡೇಬಾವಿ ಹೋಬಳಿಯ ಬಸವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 5, 7 ಮತ್ತು 10 ನೆಯ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಉನ್ನತ ಹುದ್ಧೆಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಆ ಶಾಲೆಯಲ್ಲಿನ ಗುಣಮಟ್ಟ ಮತ್ತು ಮೌಲ್ಯದ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ಜೊತೆಗೆ ಪೋಷಕರು ತೆಗೆದುಕೊಳ್ಳುವ ಜವಾಬ್ದಾರಿಯುವ ಕಾರ್ಯದಿಂದ ಮಕ್ಕಳು ಶಾಲೆ ಹಾಗೂ ಮನೆಯ ಪರಿಸರದಲ್ಲಿ ಶಿಸ್ತು ಮತ್ತು ಸಂಸ್ಕಾರಯುತವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಮುಖಂಡರಾದ ಬಿ.ಪಿ. ಅಶ್ವತ್ಥನಾರಾಯಣ ಗೌಡ ಮಾತನಾಡಿ, ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಸಮಯ ಪಾಲನೆ, ಹಿರಿಯರನ್ನು ಗೌರವಿಸುವುದು, ಶ್ರದ್ಧೆಯಿಂದ ಅಭ್ಯಾಸ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದ್ಮುುಂದಿನ ಜೀವನಕ್ಕೆ ಆಸರೆಯಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೊಂಡಾರೆಡ್ಡಿ, ರಾಮ್ ಕುಮಾರ್, ಯತೀಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಚ್.ಜಿ ಅರ್ಪಿತ, ಶಿಕ್ಷಕರಾದ ವಿಶ್ವೇಶ್ವರಯ್ಯ, ಆರ್. ಕದಿರಪ್ಪ, ಶ್ರೀನಿವಾಸಾಚಾರಿ ಹಾಗೂ ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)







Discussion about this post