ನವದೆಹಲಿ: ಮುಂದುವರೆದ ಜನಾಂಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಸಂವಿಧಾನ(103ನೆಯ ತಿದ್ದುಪಡಿ) ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಇಲ್ಲಿ ಅಂಗೀಕಾರವಾದರೆ ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕಾನೂನಾಗಿ ಜಾರಿಯಾಗಲಿದೆ.
ಆರ್ಥಿಕವಾಗಿ ಹಿಂದುಳಿದ ಮುಂದುವರೆ ಜನಾಂಗದಲ್ಲಿರುವವರಿಗೆ ಶೇ.೧೦ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಧೈರ್ಯ ಮಾಡಿದ ಮೋದಿ ಸರ್ಕಾರ ಕಳೆದ ಸೋಮವಾರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡು, ನಿನ್ನೆ ಲೋಕಸಭೆಯಲ್ಲಿ ಮಂಡನೆ ಮಾಡಿ, ಭಾರೀ ಬೆಂಬಲದೊಂದಿಗೆ ಅಂಗೀಕಾರ ಪಡೆದುಕೊಂಡಿದೆ.
ಈ ಮೀಸಲಾತಿ ಚುನಾವಣಾ ತಂತ್ರ, ರಾಜಕೀಯ ಗಿಮಿಕ್, ರಾಜಕೀಯ ಸ್ಟಂಟ್ ಎಂದೆಲ್ಲಾ ಹೇಳಿಕೆಗಳನ್ನು ನೀಡಿದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕಲಾಪದಲ್ಲಿ ಮಾತ್ರ ಮಸೂದೆಗೆ ಬೆಂಬಲ ಸೂಚಿಸಿವೆ. ರಾಜಕೀಯವಾಗಿ ದೊಡ್ಡ ಪರಿಣಾಮ ಬೀರುವ ಈ ಮಸೂದೆಯನ್ನು ವಿರೋಧಿಸಿದರೆ ಅದರ ಅಡ್ಡ ಪರಿಣಾಮ ತಮ್ಮ ಮೇಲಾಗುತ್ತವೆ ಎಂದು ಪ್ರತಿಪಕ್ಷಗಳು ಹೆದರಿವೆ.
ಸಂವಿಧಾನದ ಕಲಂ 15ಹಾಗೂ 16ಕ್ಕೆ ತಿದ್ದುಪಡಿ ಮಾಡಿ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.೧೦ರಷ್ಟು ಮೀಸಲಾತಿ ನೀಡುವ ಮಸೂದೆಗೆ ನಿನ್ನೆ ಲೋಕಸಭೆಯಲ್ಲಿ ೩೪೩ ಸದಸ್ಯರು ಬೆಂಬಲ ಸೂಚಿಸಿದ್ದರೆ, ಮೂವರು ಮಾತ್ರ ವಿರುದ್ಧ ಮತ ಚಲಾಯಿಸಿದ್ದರು.
Discussion about this post