ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಭಾಷೆ ಅಳಿದರೆ ಸಂಸ್ಕøತಿ- ಸಂಸ್ಕಾರವೂ ನಾಶವಾಗುತ್ತದೆ. ನಮ್ಮ ಭಾಷೆಯ ಮಧ್ಯದಲ್ಲಿ ಬೇರೆ ಭಾಷೆಯ ಕಲಬೆರಕೆ ಬೇಡ; ಆಂಗ್ಲಪದಗಳನ್ನು ಬಳಸದೇ ಕನ್ನಡ ಮಾತನಾಡುವುದೇ ನಮಗೆ ಕಷ್ಟವಾಗುತ್ತಿದೆ ಎನ್ನುವುದು ನಾಚಿಕೆಗೇಡು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 39ನೇ ದಿನವಾದ ಭಾನುವಾರ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಸರ್ವಸೇವೆ ಸ್ವೀಕರಿಸಿ, ಸವಿಗನ್ನಡ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ಅನುಗ್ರಹಿಸಿದರು.
ಭಾಷೆಯನ್ನು ಉಳಿಸಿಕೊಳ್ಳಲು ಇಚ್ಛಾಶಕ್ತಿ ಅಗತ್ಯ. ನಮ್ಮಿಂದ ಪರಕೀಯ ಶಬ್ದಗಳು ಬರಬಾರದು ಎಂಬ ಪಣ ತೊಡೋಣ. ಪ್ರತಿ ದಿನ ಆ ಸಂಕಲ್ಪ ಸಾಕಾರಕ್ಕೆ ಪ್ರಯತ್ನ ಅಗತ್ಯ ಎಂದು ಅಭಿಪ್ರಾಯಟ್ಟರು. ಸರ್ಕಾರ, ಸಂಘ ಸಂಸ್ಥೆಗಳು ಕನ್ನಡ ಉಳಿಸುತ್ತವೆ ಎಂಬ ಭ್ರಮೆಯಿಂದ ಹೊರಬಂದು, ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಭಾಷೆ ಉಳಿಸಲು ಪ್ರಯತ್ನ ಮಾಡೊಣ ಎಂದರು.
ಯಕ್ಷಗಾನ, ತಾಳಮದ್ದಳೆಯಲ್ಲಿ ಇಂದಿಗೂ ಕನ್ನಡದ ಶುದ್ಧತೆ ಉಳಿದುಕೊಂಡಿದೆ. ಕನ್ನಡ ಉಳಿದುಕೊಳ್ಳಲು ಈ ಕಲಾಪ್ರಕಾರಗಳು ಕೊಡುಗೆ ನೀಡಿವೆ ಎಂದು ಶ್ಲಾಘಿಸಿದರು. ನಮ್ಮತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹವ್ಯಕ ಮಹಾಸಭೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಮಾಜ ಇದನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತರಬೇಕು ಎಂಬ ದೃಷ್ಟಿಯಿಂದ ಸ್ವಭಾಷೆಯನ್ನು ಚಾತುಮಾಸ್ಯದ ಸೂತ್ರವನ್ನಾಗಿರಿಸಿಕೊಳ್ಳಲಾಯಿತು ಎಂದರು. ತನ್ನವಸ್ತುವನ್ನು ಪ್ರೀತಿಸುವುದು ಸಹಜ; ಇನ್ನೊಬ್ಬರದ್ದನ್ನು ತನ್ನದು ಎಂದು ಭಾವಿಸುವುದು ಪಾಪ. ನಮ್ಮದಲ್ಲದ್ದು ನಮ್ಮ ಜೀವನವನ್ನು ವ್ಯಾಪಿಸುತ್ತಿದೆ ಎಂದರು.
ಹಂಪಿ ವಿವಿಯ ಡಾ.ಅಶೋಕ್ ಕುಮಾರ್, ಜಗತ್ತಿನ 30 ಪ್ರಾಚೀನ ಭಾಷೆಗಳ ಪೈಕಿ ಕನ್ನಡವೂ ಒಂದು. ಚರಿತ್ರೆಯುದ್ದಕ್ಕೂ ಮಾರ್ಪಾಡುಗಳನ್ನು ಮಾಡಿಕೊಂಡು ಬೆಳೆದುಕೊಂಡು ಬಂದಿದೆ. ಇದೀಗ ಕನ್ನಡ ರೂಪಾಂತರಗೊಳ್ಳುತ್ತಿದೆಯೇ ಅಥವಾ ತನ್ನತನ ಕಳೆದುಕೊಳ್ಳುತ್ತಿದೆಯೋ ಎನ್ನುವುದನ್ನು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಕನ್ನಡ ಬೇರೆ ಭಾಷೆಗಳ ಪದ ಬಳಸಿಕೊಳ್ಳುವಾಗ ಕನ್ನಡೀಕರಿಸಿಕೊಂಡು ಬಳಕೆ ಮಾಡಿಕೊಳ್ಳುತ್ತಾ ಬಂದಿದೆ ಎಂದು ಸಮರ್ಥಿಸಿಕೊಂಡರು.
ಡಾ.ಶ್ರೀಧರ್ ಹೆಗಡೆ ಭದ್ರನ್ ಮಾತನಾಡಿ, ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಜಿ.ಎಲ್.ಹೆಗಡೆ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಭಾಗವಹಿಸಿದ್ದರು. ಡಾ.ಪಾದೇಕಲ್ ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಎಲ್.ಹೆಗಡೆ, “ಎಲ್ಲ ಭಾಷೆಗಳಿಗೂ ಅದರದ್ದೇ ಆದ ಮಹತ್ವವಿದೆ. ಆದರೆ ನಮ್ಮ ನಮ್ಮ ಭಾಷೆ ನಮಗೆ ಮುಖ್ಯ. ಭಾಷೆಗೆ ಭಾರತದ ಸಂಸ್ಕøತಿಯಲ್ಲಿ ಜೀವಂತಿಕೆಯ ಸ್ಥಾನವಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ” ಎಂದು ಪ್ರತಿಪಾದಿಸಿದರು.
“ಕನ್ನಡ ಉಳಿಸುವ ದೃಷ್ಟಿಯಿಂದಲೇ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಇದು ಅವರ ದೂರದರ್ಶಿತ್ವಕ್ಕೆ ಉದಾಹರಣೆ. ಸಾವಿರಾರು ಭಾಷೆಗಳ ಮಧ್ಯೆ ಕನ್ನಡ ವಿಶ್ವದ ಅತ್ಯಂತ 30 ಪ್ರಾಚೀನ ಭಾಷೆಗಳ ಪೈಕಿ ಒಂದು ಎನ್ನುವುದು ನಮ್ಮ ಹೆಮ್ಮೆ. ಬೇರೆ ಭಾಷೆಯನ್ನು ತಿರಸ್ಕರಿಸುವುದು ಬೇಡ; ಆದರೆ ಪರಕೀಯರಾಗಿ ಇರಲು ಬಯಸುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಆದರೆ ಇಂದು ಇಂಗ್ಲಿಷ್ ಪ್ರಭಾವದಿಂದಾಗಿ ನಮ್ಮ ಸಂಬಂಧಗಳನ್ನು ಗುರುತಿಸುವುದು ಕೂಡಾ ಸಾಧ್ಯವಿಲ್ಲದಂದಾಗಿದೆ. ಮನುಷ್ಯನನ್ನು ತಿಳಿದುಕೊಳ್ಳಲು ಭಾಷೆ ಒಳ್ಳೆಯ ಸಾಧನ. ಭಾಷೆಯ ಬಗ್ಗೆ ಅಭಿಮಾನ- ಗೌರವ ಬೇಕು; ನಮ್ಮ ಸತ್ವವನ್ನು ಉಳಿಸಿಕೊಳ್ಳಲು ಭಾಷೆ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, “ನಾವು ಇತರ ಭಾಷೆಗಳಿಗೆ ಒಗ್ಗಿಕೊಳ್ಳಬೇಕೇ ವಿನಃ ಬಗ್ಗಬಾರದು. ಆಹಾರ, ವಸ್ತ್ರ ಸೇರಿದಂತೆ ನಮಗೆ ಹಿತವೆನಿಸಿದ್ದನ್ನೇ ನಾವು ಬಳಸುತ್ತೇವೆ. ಇದು ಭಾಷೆಯ ವಿಚಾರಕ್ಕೂ ಅನ್ವಯವಾಗಬೇಕು” ಎಂದು ಅಭಿಪ್ರಾಯಪಟ್ಟರು. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ; ಅದು ನಮ್ಮ ಸಂಸ್ಕಾರ, ಸಂಸ್ಕøತಿ, ಪರಂಪರೆ, ನಮ್ಮತನ. ವಿಶ್ವದ ಮೂರು ಪರಿಪೂರ್ಣ ಭಾಷೆಗಳಲ್ಲಿ ಕನ್ನಡ ಕೂಡಾ ಒಂದು ಎನ್ನುವುದನ್ನು ಅಮೆರಿಕದ ಭಾಷಾಸಂಶೋಧನಾ ಸಂಸ್ಥೆಯೂ ದೃಢಪಡಿಸಿದೆ” ಎಂದು ಹೇಳಿದರು.
ಸ್ವಭಾಷಾ ಚಿಂತನೆ ಕೃತಿಯ ಎರಡನೇ ಆವೃತ್ತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶ್ರೀಮಾತೆ ವಿಜಯಲಕ್ಷ್ಮಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಚಾತುರ್ಮಾಸ್ಯ ತಂಡದ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ ಭಟ್ಟ, ಉಂಡೇಮನೆ ವಿಶ್ವೇಶ್ವರ ಭಟ್, ತೆಕ್ಕೆಕೆರೆ ಸುಬ್ರಹ್ಮಣ ಭಟ್, ವಿವಿವಿ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ ಮತ್ತಿತರರು ಉಪಸ್ಥಿತರಿದ್ದರು. ಗುರುಕುಲ ಶಿಕ್ಷಕ ಲೋಹಿತ್ ಹೆಬ್ಬಾರ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post