ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ದಿನವನ್ನು ಅರ್ಥ ಮಾಡಿಕೊಂಡರೆ ಜೀವನವನ್ನೇ ಗೆಲ್ಲಬಹುದು. ಕಾಲ, ದೇಶ, ವಸ್ತುವಿನ ಪೈಕಿ ಒಂದನ್ನು ಗೆದ್ದರೂ ಜೀವನ ಗೆಲ್ಲಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಮಂಗಳವಾರ ‘ದಿನಚರಿ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಭಗವಂತ ನೀಡಿದ ಕಾಲವೆಂಬ ಅಮೃತವನ್ನು ಹೊಣೆಯರಿತು ಬಳಸಿದಾಗ ಅದು ಬುದುಕಿನ ಬುತ್ತಿಯಾಗುತ್ತದೆ; ಇದರಿಂದ ಬದುಕಿಗೆ ಮುಕ್ತಿಯ ಸಂತೃಪ್ತಿ ದೊರಕುತ್ತದೆ ಎಂದು ವಿಶ್ಲೇಷಿಸಿದರು.

ವಾರ, ಪಕ್ಷ, ಮಾಸದಲ್ಲಿ ದಿನಕ್ಕೆ ವಿಶೇಷ ಮಹತ್ವ. ಹನ್ನೆರಡು ಮಾಸ ಸೇರಿ ಒಂದು ಸಂವತ್ಸರ. ಹಲವು ಸಂವತ್ಸರಗಳು ಸೇರಿ ಒಂದು ಶಕ; ಹಲವು ಶಕಗಳು ಸೇರಿ ಒಂದು ಪಾದ. ನಾಲ್ಕು ಪಾದಗಳು ಸೇರಿದರೆ ಒಂದು ಯುಗ; ನಾಲ್ಕು ಯುಗ ಸೇರಿದರೆ ಒಂದು ಮಹಾಯುಗ; 71 ಮಹಾಯುಗ ಸೇರಿದತೆ ಒಂದು ಮನ್ವಂತರ. 28 ಮನ್ವಂತರ ಸೇರಿದರೆ ಒಂದು ಕಲ್ಪ. ಕಾಲಕಲ್ಪದಲ್ಲಿ ದಿನ ಎನ್ನುವುದು ಅತ್ಯಂತ ಚಿಕ್ಕ ತುಣುಕು ಎಂದು ಹೇಳಿದರು.
ಕಾಲಕ್ಕೆ ಮುಖಗಳು ಹಲವು; ಕಳೆದ ಬಾರಿ ಜ್ಯೌತಿಷದ ಮುಖ ಆಯ್ಕೆ ಮಾಡಲಾಗಿತ್ತು. ಈ ಬಾರಿ ಆಯುರ್ವೇದದ ಮುಖವನ್ನು ಆಯ್ಕೆ ಮಾಡಿಕೊಂಡು ದಿನಚರಿ ಬಗ್ಗೆ ಪ್ರವಚನ ನೀಡುವ ಇಚ್ಛೆ ನಮ್ಮದು. ಇದರಲ್ಲಿ ಧರ್ಮಶಾಸ್ತ್ರ, ಜೌತಿಷಗಳೂ ಸೇರುತ್ತವೆ. ಕಾಲ, ದೇಶ ಮತ್ತು ವಸ್ತುಗಳ ಜ್ಞಾನ ಇರುವವನು ಚೆನ್ನಾಗಿ ಬಾಳಬಲ್ಲನು. ಜೀವನ ಉತ್ತಮವಾಗಬೇಕಿದ್ದರೆ, ಈ ಮೂರು ಪರಿಚ್ಛೇದಗಳು ಅಗತ್ಯ; ಇವೆಲ್ಲಕ್ಕೂ ಮಿತಿ ಇರುವಂತೆ ಜೀವನಕ್ಕೂ ಒಂದು ಮಿತಿ ಇದೆ ಎಂದು ವಿಶ್ಲೇಷಿಸಿದರು.

ಕಾಲವನ್ನು ಎದುರು ಹಾಕಿಕೊಂಡರೆ ಅದು ರೋಗವಾಗಿ ಕಾಡಬಹುದು ಅಥವಾ ಅದು ಸಾವಿಗೂ ಕಾರಣವಾಗಬಹುದು; ಮಲಗುವ ಕಾಲದಲ್ಲಿ ಮಲಗಿ, ಏಳುವ ಕಾಲಕ್ಕೆ ಏಳಬೇಕು. ಕಾಲ, ದೇಶ, ವಸ್ತುವಿಗೆ ಅನುಗುಣವಾಗಿ ಬಾಳುವೆ ನಡೆಸಿದರೆ ಬದುಕು ಸುಂದರ. ಕಾಲ, ದೇಶ ಮತ್ತು ವಸ್ತು ಮರ್ಯಾದೆಯನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಸಾಗರ ಮಂಡಲದ ಆವಿನಹಳ್ಳಿ, ಮರಗುಡಿ, ಕೋಗೋಡು, ಕೆಳದಿ ಪೂರ್ವ ಮತ್ತು ಪಶ್ಚಿಮ ವಲಯಗಳ ಶಿಷ್ಯರು ಸರ್ವಸೇವೆ ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಸಾಗರ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರ್, ಕಾರ್ಯದರ್ಶಿ ಪ್ರಖ್ಯಾತ್, ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ್ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post