ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ ನೀಡೋಣ ಎಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 24ನೇ ದಿನವಾದ ಶನಿವಾರ ಉತ್ತರ ಬೆಂಗಳೂರು ಮಂಡಲದ ರಾಜಾಮಲ್ಲೇಶ್ವರ, ಮಹಾಲಕ್ಷ್ಮಿ, ವರ್ತೂರು, ಭುವನಗಿರಿ ಮತ್ತು ನಂದಿನಿ ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ಭಾಷೆ ನಮ್ಮ ಸಂಸ್ಕøತಿಯ ಕೈಗನ್ನಡಿ. ಭಾಷೆ ವಾಗ್ದೇವಿ ಸರಸ್ವತಿಗೆ ಪ್ರಿಯವಾಗುವಂತಿರಬೇಕು. ಆದರೆ ಇಂದಿನ ಕನ್ನಡದಲ್ಲಿ ಅರ್ಧದಷ್ಟು ಇಂಗ್ಲಿಷ್ ಪದಗಳು, ಪರ್ಷಿಯನ್, ಅರೇಬಿಕ್‍ನಂಥ ಅನ್ಯ ಭಾಷೆಯ ಶಬ್ದಗಳು ಸೇರಿ ಭಾಷೆ ಸಂಪೂರ್ಣ ಕಲಬೆರಕೆಯಾಗಿದೆ. ಇದನ್ನು ಶುದ್ಧವಾಗಿಸಿ ಮುಂದಿನ ಪೀಳಿಗೆಗೆ ನೀಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸ್ವಭಾಷೆ, ಸ್ವಧರ್ಮ, ನಮ್ಮ ಆಚರಣೆಗಳೇ ಶ್ರೇಷ್ಠ. ಇದು ಪೂರ್ವಜರು ನಮಗೆ ನೀಡಿದ ಬಳುವಳಿ. ಸ್ವಧರ್ಮ ಪಾಲನೆಯೇ ಶ್ರೇಷ್ಠ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲೂ ಉಲ್ಲೇಖಿಸಿದ್ದಾನೆ. ನಮ್ಮ ಪೂರ್ವಜರು ಆಡುತ್ತಿದ್ದ ಭಾಷೆಯನ್ನು ಮತ್ತೆ ಚಾಲ್ತಿಗೆ ತರಬೇಕು. ಅಪರೂಪದ ಪದಗಳು ನಾಶವಾಗುವ ಮುನ್ನ ಅವುಗಳನ್ನು ಉಳಿಸುವ ಪ್ರಯತ್ನ ಮಾಡೋಣ. ಹಳೆ ಸಂಸ್ಕøತಿ- ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಕರೆ ನೀಡಿದರು.
ಭಾಷೆಯಿಂದ ಮೊದಲ್ಗೊಂಡು ನಮ್ಮತನ, ನಮ್ಮ ಉಡುಗೆ- ತೊಡುಗೆ, ನಮ್ಮ ಆಹಾರ- ವಿಹಾರ, ನಮ್ಮ ಸಂಸ್ಕøತಿ- ಪರಂಪರೆಗೆ ಮರಳುವ ಅಗತ್ಯವಿದೆ ಎಂದರು.
ಮೂಲದಿಂದ ದೂರ ಹೋಗಿರುವ ಶಿಷ್ಯರನ್ನು ಮತ್ತೆ ಶ್ರೀಮಠದ ಛತ್ರಿಯಡಿ ತರುವ ಗುರುತರ ಹೊಣೆಗಾರಿಕೆಯನ್ನು ಪದಾಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಸೂಚಿಸಿದರು. ಸಮಾಜದ ಶಿಷ್ಯರೆಲ್ಲರೂ ಸೇವಾಧಾರಿಗಳಾಗುವಂತೆ ಪ್ರೇರೇಪಿಸಬೇಕು. ನಮ್ಮತನ, ನಮ್ಮ ಸಂಸ್ಕøತಿ ಪರಂಪರೆ ಉಳಿಯಬೇಕು ಎಂದರು.
ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ರಾಮನ ಕಡೆಗೆ, ಮುಕ್ತಿಯ ಕಡೆಗೆ ನಮ್ಮನ್ನು ಒಯ್ಯುವ ಆಶೀರ್ವಾದವನ್ನು ಗುರು ಪರಂಪರೆ ಕರುಣಿಸಲಿ ಎಂದು ಆಶಿಸಿದರು.
ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿಯವರ ನೇತೃತ್ವದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ವೈದ್ಯರು ಮತ್ತು ಸಿಬ್ಬಂದಿ ಶ್ರೀಗಳಿಂದ ಆಶೀರ್ವಾದ ಪಡೆದರು. ರೋಟರಿ ಅಂತರರಾಷ್ಟ್ರೀಯ ತಾಂತ್ರಿಕ ಸಲಹೆಗಾರ ಗಣೇಶ್ ಹೆಗಡೆ, ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಪದಾಧಿಕಾರಿಗಳಾದ ಕೆ.ಬಿ.ರಾಮಮೂರ್ತಿ, ಜಿ.ಎಸ್.ಹೆಗಡೆ, ಈಶ್ವರ ಪ್ರಸಾದ್ ಕನ್ಯಾನ, ರಮೇಶ್ ಹೆಗಡೆ ಗುಂಡೂಮನೆ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಪರಂಪರಾ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಬೆಂಗಳೂರು ಮಂಡಲ ಅಧ್ಯಕ್ಷ ಎಲ್.ಆರ್.ಹೆಗಡೆ, ಕಾರ್ಯದರ್ಶಿ ಮುರಳಿಕೃಷ್ಣ ಕುಕ್ಕುಪುಣಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post