ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಗುರುಗಳು ಬೋಧಿಸುವ ತತ್ವವನ್ನು ಪಾಲಿಸುವುದೇ ಗುರುಗಳಿಗೆ ನೀಡುವ ದೊಡ್ಡ ಕಾಣಿಕೆ. ಸ್ವಭಾಷೆ, ಸನಾತನ ಸಂಸ್ಕøತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ದೊಡ್ಡ ಗುರುಸೇವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 36ನೇ ದಿನವಾದ ಗುರುವಾರ ಹೊನ್ನಾವರ ಮಂಡಲದ ಗೇರುಸೊಪ್ಪ, ಅಪ್ಸರಕೊಂಡ, ಭವತಾರಣಿ, ಭಟ್ಕಳ ಮತ್ತು ಮರವಂತೆ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ಜೀವನಕ್ಕೆ ಜ್ಞಾನ ಬೇಕು. ಅಂತೆಯೇ ಶಕ್ತಿಯೂ ಬೇಕು. ದಾರಿ ತೋರಲು ಗುರು ಬೇಕು. ಹೆಜ್ಜೆ ಮುಂದಿಡುವ ಶಕ್ತಿ ನೀಡುವವನು ಭಗವಂತ. ಈ ಎರಡು ಚೈತನ್ಯಗಳು ನಮ್ಮ ಮಠದಲ್ಲಿ ಮೇಳೈಸಿದ್ದು, ಸಹಸ್ರಾರು ವರ್ಷಗಳಿಂದ ನಮ್ಮನ್ನು ಕಾಪಾಡುತ್ತಾ ಬಂದಿವೆ. ನಮ್ಮ ಪೂರ್ವಗುರುಗಳು ಇಲ್ಲಿ ತಪಸ್ಸು- ಅನುಷ್ಠಾನಗಳನ್ನು ಮಾಡಿದ ಫಲವಾಗಿ ಸಮಾಜ ಮುಂದಕ್ಕೆ ಬಂದಿದೆ. ಪ್ರತಿಭೆಗೆ ಹೆಸರಾದ ನಮ್ಮ ಶಿಷ್ಯರಿಗೆ ಆ ಚೈತನ್ಯವನ್ನು ನೀಡಿರುವುದು ಗುರು ಪರಂಪರೆ. ಗುರುಪರಂಪರೆಯ ಪ್ರೀತ್ಯರ್ಥವಾಗಿ ಮಹಾವಿಷ್ಣುವಿಗೆ 2 ಲಕ್ಷಕ್ಕೂ ಹೆಚ್ಚು ತುಳಸಿ ಅರ್ಚನೆ ನಡೆಯಿತು ಎಂದು ಹೇಳಿದರು.
ಹೊನ್ನಾವರ ಮಂಡಲ ಇಂದು ಲಕ್ಷದ ಗುರಿ ಮೀರಿ ದುಪ್ಪಟ್ಟು ಸಾಧನೆ ಮಾಡಿ ಕತೃತ್ವ ಶಕ್ತಿ ಮೆರೆದಿದೆ. ಗುರುಭಕ್ತಿಯ ಮತ್ತು ಸಂಘಟನೆಯ ಶಕ್ತಿಯ ಪ್ರತೀಕ ಎಂದು ಬಣ್ಣಿಸಿದರು. ಮಠದ ಯಾವ ಕಾರ್ಯವೂ ಕಾರ್ಯಕರ್ತರಿಲ್ಲದೇ ಸೊರಗಬಾರದು; ಯಾವ ಸೇವಾ ಹೊಣೆಗಾರಿಯೂ ಇಲ್ಲದ ಕಾರ್ಯಕರ್ತ ಇರಬಾರದು. ಇದಕ್ಕೆ ಸಂಘಟನೆಯ ಎಲ್ಲ ಸ್ತರಗಳು ಕೆಲಸ ಮಾಡಬೇಕು ಎಂದು ಎಂದು ಸೂಚಿಸಿದರು.
ತುಳಸಿಗೆ ಭಾರತ ಸಂಸ್ಕøತಿಯಲ್ಲಿ ವಿಶೇಷ ಮಹತ್ವವಿದ್ದು, ಮನುಷ್ಯನಿಗೂ ಸತ್ವಗುಣ ತಂದುಕೊಡುವಂಥದ್ದು. ಸಂಘಟನೆಯ ಶಕ್ತಿ ಎರಡು ವರ್ಷಗಳ ಕಾಲವೂ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು. ತುಳಸಿಯಂತೆ ನಮ್ಮ ಜೀವನವೂ ಭಗವದರ್ಪಿತವಾಗಲಿ ಎಂದು ಆಶಿಸಿದರು.
ಹೊರಗಿನಿಂದ ಬಂದ ಶಬ್ದಗಳ ತ್ಯಾಗವನ್ನು ಶಸ್ತ್ರಚಿಕಿತ್ಸೆಯಂತೆ ಎಂದು ಪರಿಗಣಿಸಬೇಕು. ದೇಹದಲ್ಲಿ ಗಡ್ಡೆ ಬೆಳೆದಾಗ ಶಸ್ತ್ರಚಿಕಿತ್ಸೆ ಮೂಲಕ ಹೇಗೆ ಕಿತ್ತುಹಾಕುತ್ತೇವೆಯೋ ಹಾಗೆ ಭಾಷೆಯಲ್ಲೂ ಸೇರಿರುವ ಪರಕೀಯ ಶಬ್ದಗಳನ್ನು ಕಿತ್ತುಹಾಕುವ ಶಸ್ತ್ರಚಿಕಿತ್ಸೆ ಮಾಡೋಣ. ನಮ್ಮದಲ್ಲದ, ನಮಗೆ ಸಲ್ಲದ ಪರಕೀಯ ಪದಗಳನ್ನು ಬಿಡುವ ದೃಢ ಸಂಕಲ್ಪ ತಾಳಿದಾಗ ಪರಿವರ್ತನೆ ಆರಂಭವಾಗುತ್ತದೆ ಎಂದು ಹೇಳಿದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ ಆಫೀಸ್ ಎಂಬ ಪದಬಳಕೆ ಕೈಬಿಡುವಂತೆ ಸೂಚಿಸಿದರು. ಆಫೀಸ್ ಪದಕ್ಕೆ ಕಚೇರಿ ಪದ ಬಳಕೆಯಲ್ಲಿತ್ತು. ಕಚೇರಿ ಪದ ಸಂಸ್ಕøತ ಮೂಲದಿಂದ ಬಂದಿದೆ. ‘ಕಶ ಗೃಹ’ ಎಂಬ ಸಂಸ್ಕøತ ಶಬ್ದ ಕಶ ಹರಿ, ಕಚ ಹರಿ ಎಂದು ಬಳಕೆಯಾಗಿ ಕಚೇರಿ ಎಂದಾಗಿರಬಹುದು ಎಂದು ವಿಶ್ಲೇಷಿಸಿದರು.
ಕಾರ್ಯಾಲಯ, ಕಾರ್ಯಸ್ಥಾನ ಎಂಬ ಪದಗಳನ್ನೂ ಆಫೀಸ್ ಪದದ ಬದಲು ಬಳಸಬಹುದು. ಕರ್ತವ್ಯ ಎಂಬ ಪದ ಬಳಕೆಯೂ ಯೋಗ್ಯ. ಅದು ನಮ್ಮ ಕರ್ತವ್ಯಪ್ರಜ್ಞೆಯನ್ನು ಉದ್ದೀಪಿಸುವಂಥದ್ದು. ನಮ್ಮನ್ನು ಬಡಿದೆಬ್ಬಿಸುವಂಥದ್ದು ಎಂದು ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿ.ಪಂ.ಮಾಜಿ ಅಧ್ಯಕ್ಷ ಆರ್.ಎಸ್.ರಾಯ್ಕರ್, ಮಾಜಿ ಸದಸ್ಯ ಪಿ.ಟಿ.ರಾಯ್ಕರ್, ಸೂರಜ್ ನಾಯ್ಕ ಸೋನಿ, ಮಹೇಶ್ ಶೆಟ್ಟಿ, ಮಂಜುನಾಥ ಗುನ್ನು, ಪಿ.ಟಿ.ನಾಯ್ಕ ಉಪ್ಪೋಣಿ ಅವರು ಶ್ರೀಗಳ ದರ್ಶನಾಶೀರ್ವಾದ ಪಡೆದರು. ಗುರುಪರಂಪರಾ ಪ್ರೀತ್ಯರ್ಥವಾಗಿ ಎರಡು ಲಕ್ಷ ತುಳಸಿ ಅರ್ಚನೆ ಹೊನ್ನಾವರ ಮತ್ತು ಕುಮಟಾ ಮಂಡಲಗಳ ಶಿಷ್ಯಭಕ್ತರಿಂದ ನೆರವೇರಿತು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ ಭಟ್ಟ, ಚಾತುರ್ಮಾಸ್ಯ ಕಾರ್ಯಾಲಯದ ಎನ್.ಆರ್.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಅಷ್ಟಮ ರಾಘವೇಶ್ವರ ಭಾರತೀಶ್ರೀಗಳ ಸಮಾಧಿ ಪುನರುತ್ಥಾನದ ಅಂಗವಾಗಿ ಕೋಟಿತೀರ್ಥದ ಪಕ್ಕದಲ್ಲಿರುವ ಕೆಕ್ಕಾರು ಮಠ ಶಾಖೆಯಲ್ಲಿ ಮಹಾರುದ್ರ ಪಾರಾಯಣ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post