ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿಯ ಪೊತೇನಹಳ್ಳಿಯಲ್ಲಿ ಶನಿವಾರ ಮೊಹರಂ ಶೋಕಾಚರಣೆಯ ಏಳನೆಯ ದಿನದ ಅಂಗವಾಗಿ ’ಮಾತಾಂ’ನ್ನು ಆಚರಿಸಲಾಯಿತು.
ಪ್ರವಾದಿ ಮಹಮದ್’ರವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ರವರು ಕರಬಲ ಎಂಬ ಯುದ್ದ ಭೂಮಿಯಲ್ಲಿ ಯಜೀದ್ ಸೈನ್ಯದೊಂದಿಗೆ ಧರ್ಮಕ್ಕಾಗಿ ಶಾಂತಿ ಮತ್ತು ಅಹಿಂಸೆಯಿಂದ ಹೋರಾಟ ಮಾಡಿ ವೀರ ಮರಣವನ್ನು ಅಪ್ಪಿರುತ್ತಾರೆ. ಈ ಘಟನೆಯ ನೆನಪಿಗಾಗಿ ಷಿಯಾ ಮುಸಲ್ಮಾನ ಸಮುದಾಯದ ಪುರುಷರು ಒಟ್ಟಾಗಿ ಸೇರಿ ಗ್ರಾಮದ ಅಸ್ತಾನ ಎ ಅಬೂತಾಲಿಬ್ ನಲ್ಲಿ ಶೋಕಾಚರಣೆ ಮಾಡಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಾರೆ.
ಇವರೆಲ್ಲರೂ ಸಾಮೂಹಿಕವಾಗಿ ಶೋಕದ ಸಂಕೇತವಾಗಿ ಕಪ್ಪು ಬಟ್ಟೆಯನ್ನು ಧರಿಸಿ ಚೂಪಾದ ಆಯುಧಗಳಿಂದ ಸ್ವಯಂಪ್ರೇರಿತವಾಗಿ ಎದೆಗೆ ಬಡಿದುಕೊಳ್ಳುತ್ತಾ, ಮೈಮೇಲಿನ ಕಪ್ಪು ಬಟ್ಟೆಯನ್ನು ಹರಿದುಕೊಂಡು ’ಇಬ್ನೆ ಜೆಹರಾ ವಾ ವೈಲಾ, ವಾ ವೈಲಾ ಹಾಯ್ ಹಾಯ್ ಎಂದರು.
ಕೆಲವರು ಮುಳ್ಳಿನಾಕಾರದ ಹಿಡಿಕೆಯನ್ನು ಸರಪಳಿಗೆ ಕಟ್ಟಿ ಕೈಯಲ್ಲಿ ಹಿಡಿದು ಬರಿದಾದ ಮೈ ಮೇಲೆ ರಕ್ತ ಸೋರುವ ಹಾಗೆ ಬಡಿದುಕೊಳ್ಳುತ್ತಾ ’ಯಾ ಹುಸೇನೆ ಯಾ ಹುಸೇನ್’ ಎನ್ನುತ್ತಾ ಮುಂದೆ ಸಾಗುತ್ತಾರೆ’ ಎಂದು ಗ್ರಾಮದ ಯುವಕ ಮೀರ್ ಸಾದಿಕ್ ಅಲೀ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿನ ಮುಸಲ್ಮಾನ ಮಹಿಳೆಯರು ಸಹ ಕಪ್ಪು ಬಟ್ಟೆ ಧರಿಸಿ ಶೋಕಾಚರಣೆಯನ್ನು ಆಚರಿಸಿದ್ದಾರೆ.
ಬಳಿಕ ಧರ್ಮಗುರು ಉತ್ತರ ಪ್ರದೇಶದ ದ ಮಹಮದ್ ಇಬ್ನೆ ಹಸನ್ ಮಾತನಾಡಿ, ಧರ್ಮಕ್ಕಾಗಿ ಇಮಾಮ್ ಹುಸೇನ್ ರವರು ಮಾಡಿದ ಹೋರಾಟದ ಪ್ರತೀಕವೇ ಈ ಶೋಕಾಚರಣೆಯಾಗಿದೆ. ಎಲ್ಲಾ ಮುಸಲ್ಮಾನ್ ಭಾಂದವರು ಸ್ನೇಹಪರವಾಗಿ ಒಂದೆಡೆ ಸೇರಿ ಹುಸೇನ್ ರವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಈ ಆಚರಣೆಯನ್ನು ಮಾಡಲಾಗುತ್ತಿದೆ. ಅಬಾಲ ವೃದ್ದರಿಂದ ಹಿಡಿದು ಎಲ್ಲರೂ ಇದರಲ್ಲಿ ಭಾಗವಹಿಸುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ವ್ಯವಸ್ಥೆಯನ್ನು ಅಂಜುಮನ್ ಹೈದರಿ ಮತ್ತು ಗ್ರಾಮದ ಮುಸಲ್ಮಾನ ಯುವಕರು ವಹಿಸಿಕೊಂಡಿದ್ದರು. ಸಂಘದ ಅಧ್ಯಕ್ಷ ಮೀರ್ ಆರೀಫ್ ಅಲೀ, ಹಾಷಿಮ್ ರಜಾ, ಮುಸಾ ರಜಾ, ಕೌನೆನ್ ರಜಾ, ನಜಮ್ ರಜಾ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post