ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ವೃದ್ಧಿಸಿ ಅವರ ಮುಂದಿನ ಭವಿಷ್ಯಕ್ಕೆ ಪೂರಕವಾದ ಬುನಾದಿಯನ್ನು ಹಾಕುವ ಕಾರ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸಹಕಾರಿಯಾಗಿರುವುದು ಸಂತಸದ ವಿಚಾರವಾಗಿದೆ ಎಂದು ಬಿಇಒ ಟಿ. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ನಾಮಗೊಂಡ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್’ಎಸ್’ಎಲ್’ಸಿ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಉಚಿತವಾಗಿ ಸಿಪಿಸಿ ಸ್ಕಾನರ್ ಅನ್ನು ವಿತರಿಸಿ ಅವರು ಮಾತನಾಡಿದರು.
ಎಸ್’ಎಸ್’ಎಲ್’ಸಿಯು ಶೈಕ್ಷಣಿಕ ಹಂತದಲ್ಲಿ ಮಹತ್ತರವಾದ ಘಟ್ಟವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹಾಗೂ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿರುತ್ತದೆ. ಶಿಕ್ಷಕರು ಮತ್ತು ಪೋಷಕರು ಅವರ ಕಲಿಕಾ ಆಸಕ್ತಿಗೆ ಅನುಗುಣವಾಗಿ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕಾಗುತ್ತದೆ. ಇದರಿಂದ ಉತ್ತಮ ಕಲಿಕೆ ಹಾಗೂ ಜೀವನದ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗಲಿದೆ. ಇದಕ್ಕಾಗಿ ಸಂಘಸಂಸ್ಥೆಗಳು ಹಾಗೂ ದಾನಿಗಳು ಉದಾರವಾಗಿ ಕಲಿಕಾ ಪರಿಕರಗಳನ್ನು ಒದಗಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್. ಅಶ್ವತ್ಥ ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಸಮಾಜದಲ್ಲಿ ಬದುಕಲು ಆಸರೆಯಾಗುವ ಜೀವನದ ಮೌಲ್ಯಗಳನ್ನು ತಿಳಿಯುವುದು ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಅಭಿವೃದ್ಧಿಪಡಿಸಲು ಸ್ಥಳೀಯ ದಾನಿಗಳು ಹಾಗೂ ಸಂಘಸಂಸ್ಥೆಗಳು ನೀಡುವ ಸಹಕಾರ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ಮೂಲಕ ಪೋಷಕರು ಮತ್ತು ಶಿಕ್ಷಕರ ಜೀವನವನ್ನು ಸಾರ್ಥಕಗೊಳಿಸಬೇಕಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಅತ್ಯವಶ್ಯಕವಾಗಿದೆ ಎಂದರು.
ಮುಖ್ಯ ಶಿಕ್ಷಕ ಎಚ್. ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿಯ ಎಸ್’ಎಸ್’ಎಲ್’ಸಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಇದರಂತೆ ಶಾಲೆಯಲ್ಲಿನ ಎಲ್ಲಾ ಶಿಕ್ಷಕರು ಕಾರ್ಯಪ್ರವೃತ್ತರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗಿದ್ದಾರೆ. ಇದರೊಂದಿಗೆ ಪೋಷಕರು ಕೈ ಜೋಡಿಸಿದಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ನಾರಾಯಣಸ್ವಾಮಿ, ರಘು, ಮುಖಂಡರಾದ ಅಶ್ವತ್ಥ ರೆಡ್ಡಿ, ಶಿಕ್ಷಕರಾದ ಜಿ.ಡಿ. ಶಿವಕುಮಾರ್, ನರಸಿಂಹಮೂರ್ತಿ, ಅಶ್ವತ್ಥಪ್ಪ, ಸದಾಶಿವರೆಡ್ಡಿ, ನಜಮುನ್ನಿಸಾ, ರಸೂಲ್ ಖಾನ್, ರವೀಂದ್ರನಾಥ್, ನರಸಮ್ಮ, ಚಂದ್ರಶೇಖರ ರೆಡ್ಡಿ, ವೆಂಕಟೇಶ್, ಇನಾಯತ್ ಪಾಷಾ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post